ಯೋಗವು ದೈನಂದಿನ ಚಟುವಟಿಕೆಯಾಗಬೇಕು: ಎ.ಬಿ. ಲಲಿತಾ

Jun 21, 2026 - 17:46
 0  161
ಯೋಗವು ದೈನಂದಿನ ಚಟುವಟಿಕೆಯಾಗಬೇಕು: ಎ.ಬಿ. ಲಲಿತಾ

ವಿರಾಜಪೇಟೆ: ಯೋಗವು ನಮ್ಮ ದೈನಂದಿನ ಚಟುವಟಿಕೆಯ ಒಂದು ಭಾಗವಾಗಬೇಕು. ಒಂದು ದಿನಕ್ಕೆ ಸೀಮಿತವಾಗಿರದೆ ಪ್ರತಿನಿತ್ಯ ಯೋಗ ಮಾಡುವುದರಿಂದ ದೇಹ ಹಾಗೂ ಮನಸ್ಸಿನ ಸ್ವಾಸ್ಥ್ಯ ಕಾಪಾಡಬಹುದು ಎಂದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ ಹಾಗೂ ಸರ್ಕಾರಿ ನೌಕರರ ಸಂಘದ ರಾಷ್ಟ್ರೀಯ ಮಟ್ಟದ ಯೋಗಪಟು ಎ.ಬಿ. ಲಲಿತಾ ಅಭಿಪ್ರಾಯಪಟ್ಟರು.

ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಸದೃಢತೆಯ ಹಿನ್ನೆಲೆಯಲ್ಲಿ ಯೋಗವು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯೋಗಕ್ಕೆ ಉನ್ನತ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಯೋಗವು ಋಷಿ ಮುನಿಗಳಿಂದ ನಮಗೆ ಬಂದ ಅಮೂಲ್ಯ ಕೊಡುಗೆಯಾಗಿದ್ದು, ಇಂದು ಪ್ರಪಂಚದಾದ್ಯಂತ ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

ಯೋಗ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ನಾವು ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವಂತೆ ಬ್ರಾಹ್ಮಿ ಮುಹೂರ್ತದಲ್ಲಿ ನಿರಂತರವಾಗಿ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸರಿಯಾದ ಭಂಗಿಯಲ್ಲಿ ಕ್ರಮಬದ್ಧವಾಗಿ ಯೋಗ ಮಾಡಿದಾಗ ಮಾತ್ರ ದೇಹಕ್ಕೆ ಫಲ ಲಭಿಸುತ್ತದೆ. ಪ್ರತಿದಿನದ 24 ಗಂಟೆಗಳಲ್ಲಿ 1 ಗಂಟೆಯನ್ನು ದೇಹದ ಆರೋಗ್ಯ ಕಾಪಾಡಲು ಯೋಗಕ್ಕೆ ಮೀಸಲಿಡಬೇಕು. ಯೋಗ ಎಂದರೆ ಕೇವಲ ದೈಹಿಕ ಕಸರತ್ತಲ್ಲ, ಬದಲಿಗೆ ದೇಹ, ಮನಸ್ಸು, ಉಸಿರು ಮೂರ ಸಂಗಮ. ಪ್ರತಿನಿತ್ಯ ಯೋಗ ಮಾಡುವುದರಿಂದ ಶಾರೀರಿಕ, ಮಾನಸಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕವಾಗಿ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಒತ್ತಡದಿಂದ ಹೊರಬರಲು ದಿನಕ್ಕೆ 10 ನಿಮಿಷ ಪ್ರಾಣಾಯಾಮ ಮಾಡುವುದರಿಂದ ಮನಶಾಂತಿ ಲಭಿಸುತ್ತದೆ. ಪ್ರತಿಯೊಬ್ಬರೂ ದಿನದ ಒಂದಷ್ಟು ಸಮಯ ಯೋಗ, ಧ್ಯಾನಕ್ಕೆ ಮೀಸಲಿಡುವುದರಿಂದ ಮುಂದೆ ಬರಬಹುದಾದ ರೋಗಗಳನ್ನು ತಡೆಗಟ್ಟುವುದರೊಂದಿಗೆ ಆರೋಗ್ಯಯುತ ದೈಹಿಕ, ಮಾನಸಿಕತೆ ರೂಢಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಜಿ. ವೀಣಾ, ಯೋಗದ ಮಹತ್ವವನ್ನು ಇಂದು ಜಗತ್ತೇ ಅರಿತಿದೆ. ಯೋಗ ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸ್ನಾಯು ಬಲಪಡಿಸುವುದು, ಉಸಿರಾಟ ಉತ್ತಮಪಡಿಸುವುದು, ಮಾನಸಿಕ ಒತ್ತಡ ನಿವಾರಣೆ, ದೇಹ ಹಗುರಗೊಳಿಸುವುದರೊಂದಿಗೆ ನಮ್ಮನ್ನು ಪುನಶ್ಚೇತನಗೊಳಿಸುತ್ತದೆ. ಬದುಕಿನ ಜಂಜಾಟದ ನಡುವೆ ದಿನಕ್ಕೆ ಒಂದಷ್ಟು ಯೋಗ, ಪ್ರಾಣಾಯಾಮ, ಧ್ಯಾನ ಮಾಡುವುದರಿಂದ ರೋಗಮುಕ್ತರಾಗಿ ಸದೃಢರಾಗಬಹುದು. ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗ, ಧ್ಯಾನ ಮಾಡುವುದರಿಂದ ಉತ್ತಮ ಮಾನಸಿಕ ಆರೋಗ್ಯ, ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.

ಯೋಗಾಸನ ಪ್ರದರ್ಶನ:

ಕಾರ್ಯಕ್ರಮದ ನಂತರ ವಿರಾಜಪೇಟೆ ಕಾವೇರಿ ಯೋಗ ಕೇಂದ್ರದ ತರಬೇತುದಾರ ಸೀತಾರಾಂ ರೈ ಅವರ ಮಾರ್ಗದರ್ಶನದಲ್ಲಿ ಯೋಗಪಟುಗಳಾದ ಎ.ಬಿ. ಲಲಿತಾ, ರತಿ ಕಲಾ, ರವಿ ಕಲಾ, ಶೀಲಾ, ಲಿಲ್ಲಿ, ಸೌಜಿತ್, ರಾಗಿಣಿ, ಶಾಂತಲ ಚಂದ್ರ ಅವರು ವೇದಿಕೆಯಲ್ಲಿ ವಿವಿಧ ಯೋಗಾಸನ, ಧ್ಯಾನ, ಪ್ರಾಣಾಯಾಮ, ಸೂರ್ಯನಮಸ್ಕಾರ ಪ್ರದರ್ಶಿಸಿ ವಿದ್ಯಾರ್ಥಿಗಳಿಂದಲೂ ಕ್ರಮಬದ್ಧವಾಗಿ ಮಾಡಿಸಿದರು.

ಈ ಸಂದರ್ಭದಲ್ಲಿ ಎನ್.ಸಿ.ಸಿ ಅಧಿಕಾರಿ ಲೆ. ಬಿ.ಬಿ. ಬೋಜಮ್ಮ, ಎನ್.ಎಸ್.ಎಸ್ ಅಧಿಕಾರಿ ಬಿ.ಬಿ. ಸುನಿಲ್ ಕುಮಾರ್, ದೈಹಿಕ ನಿರ್ದೇಶಕ ತಮ್ಮಯ್ಯ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0