ಪ್ರೇಯಸಿಗೆ ವಂಚಿಸಿ ಮದುವೆ ಮಂಟಪದಲ್ಲಿ ಮತ್ತೊಬ್ಬಳಿಗೆ ತಾಳಿ ಕಟ್ಟಿದ ಯುವಕ ಅರೆಸ್ಟ್
ಚಿಕ್ಕಮಗಳೂರು, ಡಿ. 23: ಪ್ರೇಯಸಿಗೆ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿಕೊಂಡ ಬಳಿಕ, ಆಕೆಯನ್ನು ವಂಚಿಸಿ ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾದ ಆರೋಪದ ಮೇಲೆ ಶರತ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ನಗರದ ನಿವಾಸಿಯಾದ ಶರತ್, ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು ಮದುವೆಯಾಗುವುದಾಗಿ ಹೇಳಿ ಆಕೆಯನ್ನು ನಂಬಿಸಿದ್ದಾನೆ ಎನ್ನಲಾಗಿದೆ. ಆದರೆ ಡಿಸೆಂಬರ್ 14ರಂದು ನಗರದ ದೊಡ್ಡೇಗೌಡ ಕಲ್ಯಾಣಮಂಟಪದಲ್ಲಿ ಮನೆಯವರು ನಿಶ್ಚಯಿಸಿದ ಮತ್ತೊಬ್ಬ ಯುವತಿಯೊಂದಿಗೆ ಶರತ್ ಮದುವೆಯಾದನು.
ಈ ವಿಷಯ ತಿಳಿದ ಪ್ರೇಯಸಿ ಮದುವೆ ಮಂಟಪಕ್ಕೆ ಆಗಮಿಸಿ ವಿರೋಧ ವ್ಯಕ್ತಪಡಿಸಿದರೂ, ಆಕೆಯ ಆಕ್ಷೇಪವನ್ನು ಲೆಕ್ಕಿಸದೆ ಶರತ್ ಮತ್ತೊಬ್ಬ ಯುವತಿಯ ಕುತ್ತಿಗೆಗೆ ತಾಳಿ ಕಟ್ಟಿದ್ದಾನೆ. ಘಟನೆಯಿಂದ ತೀವ್ರವಾಗಿ ನೊಂದ ಯುವತಿ, ಶರತ್ ಸೇರಿದಂತೆ ಏಳು ಜನರ ವಿರುದ್ಧ ಹಲ್ಲೆ ಮತ್ತು ವಂಚನೆ ಆರೋಪದಡಿ ಡಿಸಿಆರ್‌ಇ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಡಿಸೆಂಬರ್ 22ರ ರಾತ್ರಿ ಶರತ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.