ಪೊನ್ನಂಪೇಟೆಯಲ್ಲಿ ಬೃಹತ್ ರಕ್ತದಾನ ಶಿಬಿರ: 73 ಜನರಿಂದ ರಕ್ತದಾನ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ

May 18, 2025 - 17:22
 0  81
ಪೊನ್ನಂಪೇಟೆಯಲ್ಲಿ ಬೃಹತ್  ರಕ್ತದಾನ ಶಿಬಿರ: 73  ಜನರಿಂದ ರಕ್ತದಾನ  ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ

ಪೊನ್ನಂಪೇಟೆ: ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ ಹಾಗೂ ಪೊನ್ನಂಪೇಟೆ ಶ್ರೀ ನಂದೀಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ಸಹಕಾರದೊಂದಿಗೆ ಪೊನ್ನಂಪೇಟೆ ಇಗ್ಗುತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಮಹಿಳೆಯರು ಸೇರಿದಂತೆ ಒಟ್ಟು 73 ಜನರು ರಕ್ತ ದಾನ ಮಾಡುವ ಮೂಲಕ ಶಿಬಿರದ ಯಶಸ್ವಿಗೆ ಕಾರಣಕರ್ತರಾದರು.

 ಈ ಸಂದರ್ಭ ಜಿಲ್ಲಾ ರಕ್ತ ನಿಧಿ ಕೇಂದ್ರದ ಅಧಿಕಾರಿ ಡಾ. ಕರುoಬಯ್ಯ ಅವರು ಮಾತನಾಡಿ ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ಅರಿತು ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟು 65 ವಯಸ್ಸಿನವರೆಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು. ರಕ್ತದಾನದ ಬಗ್ಗೆ ಇರುವ ಮೂಢನಂಬಿಕೆಗಳನ್ನು ಬದಿಗಿಟ್ಟು ರಕ್ತದಾನ ಮಾಡುವುದರಿಂದ ರೋಗಿಗಳ ಜೀವ ಉಳಿಸಬಹುದು. ಇದರಿಂದ ರಕ್ತದಾನಿಗಳ ಆರೋಗ್ಯ ವೃದ್ಧಿಯಾಗುವುದರೊಂದಿಗೆ, ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತರಾಗಬಹುದು. ಪ್ರತೀ ಸಂಘ ಸಂಸ್ಥೆಗಳು ವರ್ಷಕ್ಕೊಮ್ಮೆ ಇಂತಹ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳ ಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕೊಡಗು ಬ್ಲಡ್ ಡೋನರ್ಸ್ ಅಧ್ಯಕ್ಷ ಪಿ. ಪಿ.ಸುಕುಮಾರ್ ಅವರು ಮಾತನಾಡಿ ರಕ್ತದಾನದಂತಹ ಮಹಾದಾನ ಮಾಡುವ ರಕ್ತ ದಾನಿಗಳೇ ನಮ್ಮ ಹೀರೊಗಳು. ಕೊಡಗು ಜಿಲ್ಲೆಯ ಹಲವೆಡೆ ಕೊಡಗು ಬ್ಲಡ್ ಡೋನರ್ಸ್ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಜೀವ ಉಳಿಸುವ ಕೆಲಸ ಮಾಡುತ್ತಿದೆ. ರಕ್ತದ ಬೇಡಿಕೆ ಬಂದಾಗ ತಕ್ಷಣ ಸ್ಪಂದಿಸಿ ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ. ರಕ್ತದಾನ ಕಾರ್ಯದಲ್ಲಿ ಕೊಡಗು ಬ್ಲಡ್ ಡೋನರ್ಸ್ ನ ಪದಾಧಿಕಾರಿಗಳು ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ ಎಂದರು. 

ಕೊಡಗು ಬ್ಲಡ್ ಡೋನರ್ಸ್ ಪೊನ್ನಂಪೇಟೆ ಘಟಕದ ಮುಖಂಡ ಹಾಗೂ ಶ್ರೀ ನಂದೀಶ್ವರ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಸಹ ಕಾರ್ಯದರ್ಶಿ ಚೀರಂಡ ಚಂಗಪ್ಪ ಅವರು ಮಾತನಾಡಿ ಕೊಡಗು ಬ್ಲಡ್ ಡೋನರ್ಸ್ ಸಹಯೋಗದಲ್ಲಿ ಶ್ರೀ ನಂದೀಶ್ವರ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, 73 ಜನರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮುಂದೆ ನಮ್ಮ ಸಂಘದಿಂದ ಪ್ರತಿವರ್ಷ ರಕ್ತದಾನ ಶಿಬಿರ ಆಯೋಜಿಸಲಾಗುವುದು ಎಂದರು.

ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ ಸಲಹೆಗಾರರಾದ ರಶೀದ್ ಕೊರೋತ್ ಅವರು ಮಾತನಾಡಿ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ ಕಳೆದ 8 ವರ್ಷಗಳಿಂದ ರಕ್ತದಾನ ಕಾರ್ಯದಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದು, ಜಾತಿ, ಧರ್ಮ, ಬಡವ, ಬಲ್ಲಿದ ಎಂಬ ಭೇದವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಮನೋಭಾವದಿಂದ ಕಾರ್ಯನಿರ್ವಹಿಸುತ್ತಾ ಬರುತ್ತಿದ್ದು, ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ ಕಾರ್ಯದರ್ಶಿ ಮೈಕಲ್ ವೇಗಸ್ ರವರು ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಶ್ರೀ ನಂದೀಶ್ವರ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಪ್ಪ, ಉಪಾಧ್ಯಕ್ಷರಾದ ಚಮ್ಮಟಿರ ಶಾಂತ ಪೊನ್ನಪ್ಪ, ಕಾರ್ಯದರ್ಶಿ ಬಿ. ಎಸ್. ಸುರೇಶ್, ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ ಉಪಾಧ್ಯಕ್ಷರಾದ ಅಶ್ರಫ್, ನಿರ್ದೇಶಕರಾದ ಅನಿಲ್ ಕುಮಾರ್, ಬಶೀರ್ ಆಲಿ, ಬಾಳೆಯಡ ದಿವ್ಯ ಮಂದಪ್ಪ, ಲೀಲಾವತಿ, ಶ್ರೀನಂದಿಶ್ವರ ಆಟೋ ಚಾಲಕ ಮತ್ತು ಮಾಲೀಕರ ಸಂಘ ಸದಸ್ಯರು ಇದ್ದರು.

ಲೀಲಾವತಿ ಸ್ವಾಗತಿಸಿ, ಟಿ. ಅರ್. ವಿನೋದ್ ವಂದಿಸಿದರು. ಬಾಳೆಯಡ ದಿವ್ಯ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0