ಕಾಡಾನೆ ದಾಳಿಗೆ ಕಾರ್ಮಿಕ ಬಲಿ: ಸ್ಥಳಕ್ಕೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ

Apr 24, 2025 - 22:02
 0  1
ಕಾಡಾನೆ ದಾಳಿಗೆ ಕಾರ್ಮಿಕ ಬಲಿ:   ಸ್ಥಳಕ್ಕೆ  ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ

ಸಿದ್ದಾಪುರ :- ಮನೆಯಿಂದ ವಾಕಿಂಗ್ ತೆರಳಿದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ಮಾಡಿ ಬಲಿ ತೆಗೆದುಕೊಂಡ ಘಟನೆ ವಿರಾಜಪೇಟೆ ತಾಲೂಕಿನ ಅಮ್ಮತಿ ಸಮೀಪದ ಎಮ್ಮೆ ಗುಂಡಿ ಕಾಫಿ ತೋಟದ ಮುಖ್ಯ ರಸ್ತೆಯಲ್ಲಿ ನಡೆದಿದೆ.ಎಮ್ಮೆಗುಂಡಿ ಕಾಫಿ ತೋಟದ ಕಾರ್ಮಿಕನಾಗಿ ವಾಸವಾಗಿದ್ದ ಸೆಲ್ವಂ (ಚೆಲ್ಲಮೇಸ್ತ್ರಿ) (55) ಎಂಬುವವರೇ ಕಾಡಾನೆಯ ದಾಳಿಯಿಂದ ಪ್ರಾಣ ಕಳೆದುಕೊಂಡ ನತದೃಷ್ಟ ವ್ಯಕ್ತಿಯಾಗಿದ್ದಾರೆ.

ಬೆಳಿಗ್ಗೆ ಮನೆಯ ಸಮೀಪದ ಮುಖ್ಯರಸ್ತೆಯಲ್ಲಿ ವಾಯು ವಿಹಾರಕ್ಕೆ ನಡೆದು ಹೋಗುತ್ತಿದ್ದಾಗ ಸಮೀಪದ ಕಾಫಿ ತೋಟದಲ್ಲಿ ಬಿಡು ಬಿಟ್ಟಿದ್ದ ಮೂರು ಕಾಡಾನೆಗಳು ರಸ್ತೆ ದಾಟಲು ಬರುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಡಾನೆ ದಾಳಿಗೆ ಸಿಲುಕಿಕೊಂಡಿದ್ದಾರೆ.ದಾಳಿಯಿಂದ ತಪ್ಪಿಸಿ ಹೋಗಲು ಯತ್ನಿಸಿದ ಸಂದರ್ಭ ಆಕ್ರೋಶಗೊಂಡ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 ಕಾಡಾನೆಗಳ ಕಿರಿಚಾಟದ ಶಬ್ದ ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಬರುವಷ್ಟರಲ್ಲಿ ಕಾಡಾನೆ ಕಾರ್ಮಿಕನನ್ನು ಬಲಿ ತೆಗೆದುಕೊಂಡಿದೆ.ತಕ್ಷಣ ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇದೇ ಸಂದರ್ಭ ಕಾಡಾನೆ ಹಾವಳಿ ಮಿತಿಮೀರಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಡಾನೆ ಹಾವಳಿ ಶಾಶ್ವತವಾಗಿ ತಡೆಗಟ್ಟಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ.

 ನಂತರ ಮೃತ ದೇಹವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಸವಗಾರದಲ್ಲಿರಿಸಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ ಸಿಗುವ 20 ಲಕ್ಷ ರೂ ಪರಿಹಾರವನ್ನು ತಕ್ಷಣವೇ ನೀಡಲಾಗುವುದು ಎಂದು ಹೇಳಿದ ಅವರು ಮುಖ್ಯಮಂತ್ರಿಗಳ ಕಾನೂನು ಸಲಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣಅವರಿಗೆ ಘಟನೆಯ ಮಾಹಿತಿ ನೀಡಿದರು .ನಂತರ ಶಾಸಕರು ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ತಕ್ಷಣವೇ ಕಾರ್ಯಚರಣೆ ಮೂಲಕ ಕಾಡಿಗಟ್ಟಬೇಕೆಂದು ಖಡಕ್ ಸೂಚನೆ ನೀಡಿದರು.

 ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕಾಡಾನೆ ಹಾವಳಿ ಇರುವ ಪ್ರದೇಶದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಕಾಡಿಗಟ್ಟಲು ಮುಂದಾಗಿದ್ದಾರೆ.ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಪಾಲಿಬೆಟ್ಟದ ಮೂಕೊಂಡ ವಿಜು ಸುಬ್ರಮಣಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಲ್ಲದೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 ದಿನನಿತ್ಯ ಕಾಫಿ ತೋಟಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಕೃಷಿ ಪಸಲು ನಾಶದೊಂದಿಗೆ ಪ್ರಾಣಹಾನಿಯಾಗುತ್ತಿದೆ.ಕಾರ್ಮಿಕರು, ಬೆಳೆಗಾರರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಹಲವು ವರ್ಷಗಳಿಂದಲೂ ಅಮಾಯಕ ಜೀವಗಳು ಬಲಿಯಾಗುತ್ತಿದ್ದು ಕೊಡಗಿನ ಜನರ ತಾಳ್ಮೆಯನ್ನು ಪರೀಕ್ಷಿಸದೆ ಕಾಡು ಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಬೇಕೆಂದು ಒತ್ತಾಯಿಸಿದ ಅವರು. ಕಾರ್ಮಿಕರು, ಬೆಳೆಗಾರರನ್ನ ಒಗ್ಗೂಡಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಚ್ಚರಿಸಿದರು.

ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರಂಬಯ್ಯ ಮಾತನಾಡಿ  ಕಾಡು ಪ್ರಾಣಿಗಳ ಹಾವಳಿಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅಮಾಯಕ ಜೀವಗಳು ಬಲಿಯಾಗುತ್ತಿದೆ.ಕೃಷಿಯನ್ನು ನಂಬಿರುವ ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಕಂಗಾಲಾಗಿದ್ದಾರೆ.ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಡಿಎಫ್ಓ ಜಗನ್ನಾಥ್, ಎಸಿಫ್ ಗೋಪಾಲ್, ಆರ್ ಎಫ್ ಓ ಶಿವರಾಮ್, ಗಂಗಾಧರ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು. ಮೃತ ಸೆಲ್ವಂ ಅವರ ಪತ್ನಿಗೆ ತುರ್ತು ಪರಿಹಾರವಾಗಿ 5 ಲಕ್ಷ ಚೆಕ್ ನ್ನು ನೀಡಲಾಯಿತು .ಮೃತ ದೇಹವನ್ನು ಅಂತ್ಯಸಂಸ್ಕಾರ ನಡೆಸಲು ತಮಿಳುನಾಡಿನ ಮಧುರೈ ಆಂಬುಲೆನ್ಸ್ ಮೂಲಕ ಕೊಂಡೊಯಲಾಯಿತು.ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0