ಲಲಿತಾ ನಾಟ್ಯಾಲಯ ಶಾಲೆಯ 3ನೇ ವಾರ್ಷಿಕೋತ್ಸವ; ‘ಅಪರಾಜಿತ’ ನೃತ್ಯೋತ್ಸವ ಕಾರ್ಯಕ್ರಮ

Apr 19, 2026 - 00:18
 0  201
ಲಲಿತಾ ನಾಟ್ಯಾಲಯ ಶಾಲೆಯ 3ನೇ ವಾರ್ಷಿಕೋತ್ಸವ;  ‘ಅಪರಾಜಿತ’ ನೃತ್ಯೋತ್ಸವ ಕಾರ್ಯಕ್ರಮ

ಶನಿವಾರಸಂತೆ:ಏ೧೮:-‘ಭರತ ನಾಟ್ಯ ಕಲೆ ಭಾರತದ ಪುರಾತನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ’ ಎಂದು ಶನಿವಾರಸಂತೆಯ ಮಕ್ಕಳ ತಜ್ಞ ಡಾ.ಆರ್.ವಿ.ಚಿದಾನಂದ್ ಅಭಿಪ್ರಾಯ ಪಟ್ಟರು. ಅವರು ಪಟ್ಟಣದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರಸಂತೆ ಶ್ರೀ ಲಲಿತಾ ನಾಟ್ಯಾಲಯ ಅಕಾಡೆಮಿ ಆಫ್ ಕ್ಲಾಸಿಕಲ್ ಡ್ಯಾನ್ಸ್ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ ನೃತ್ಯ ಶಾಲೆಯ ಮೂರನೇ ವರ್ಷದ ವಾರ್ಷಿಕೋತ್ಸವ ‘ಅಪರಾಜಿತ’ ನೃತ್ಯ ಶಾಲೆಯ ವಿದ್ಯಾರ್ಥಿಗಳ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವ ಜನಾಂಗ ಪಾಶ್ಚಮಾತ್ಯ ಸಂಗೀತ, ನೃತ್ಯದತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿರುವ ಭರಾಟೆಯ ನಡುವೆ ಭಾರತದ ಪರಂಪರೆ ಮತ್ತು ಪುರಾತನ ಸಂಸ್ಕೃತಿಯಲ್ಲಿ ಒಂದಾದ ಭರತ ನಾಟ್ಯದಂತಹ ಶಾಸ್ತ್ರೀಯ ನೃತ್ಯಗಳತ್ತ ಆಸಕ್ತಿ ಬೆಳೆಸಿಕೊಂಡು ಪುರಾತನ ಸಂಸ್ಕೃತಿಯನ್ನು ಮತ್ತೆ ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯಕರವಾಗಿದ್ದು ಈ ನಿಟ್ಟಿನಲ್ಲಿ ಪಟ್ಟಣದ ಲಲಿತಾ ನಾಟ್ಯಾಲಯದ ಭರತ ನಾಟ್ಯ ಕಲಾವಿದೆ ಸುನೀತ ವಸಂತ್‌ಕುಮಾರ್ ನಾಟ್ಯ ಶಾಲೆಯನ್ನು ಬೆಳೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. 

ಭರತ ನಾಟ್ಯದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಸಲು ಸಾಧ್ಯವಾಗುತ್ತದೆ ಈ ದಿಸೆಯಲ್ಲಿ ಭರತ ನಾಟ್ಯ ಕಲಾವಿದರನ್ನು ಎಲ್ಲಾರೂ ಪ್ರೋತ್ಸಾಹಿಸಿ ಬೆಳೆಸುವಂತೆ ಮನವಿ ಮಾಡಿದರು.

 ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಕೆ.ಪಿ.ಜಯಕುಮಾರ್ ಮಾತನಾಡಿ,ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿ ಬೆಳೆಸುವುದರೊಂದಿಗೆ ಸಮಾಜದಲ್ಲಿ ಮಕ್ಕಳ ಜೊತೆಯಲ್ಲಿ ತಾನು ಸಹ ಗುರುತಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿರುವ ಸಂಸ್ಕೃತಿ ಸಂಸ್ಕಾರವನ್ನು ಕಲಿಸುವುದು ಮತ್ತು ಬೆಳೆಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು. ಭರತ ನಾಟ್ಯವು ಶಿಕ್ಷಣಕ್ಕೆ ಸಮಾನವಾಗಿದ್ದು ಭರತ ನಾಟ್ಯದಂತಹ ಶಾಸ್ತ್ರೀಯ ನೃತ್ಯ ಕಲೆಯನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

 ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್ ಮಾತನಾಡಿ,ಭರತ ನಾಟ್ಯದಂತಹ ಶಾಸ್ತ್ರೀಯ ನೃತ್ಯವು ಸನಾತನ ಸಂಸ್ಕೃತಿಯಾಗಿದ್ದು ಪುರಾಣ ಮತ್ತು ರಾಜ ಮಹರಾಜರ ಕಾಲದಿಂದಲೂ ಭರತ ನಾಟ್ಯವನ್ನು ಮತ್ತು ಕಲಾವಿದೆಯರನ್ನು ಪ್ರೋತ್ಸಾಹಿಸಿ ಬೆಳೆಸುತ್ತಿದ್ದರು.ಈ ದಿಸೆಯಲ್ಲಿ ಪಟ್ಟಣದಲ್ಲಿ ನಾಟ್ಯಾಲಯ ಶಾಲೆಯನ್ನು ತೆರೆದು ಭರತ ನಾಟ್ಯವನ್ನು ಪ್ರೋತ್ಸಾಹಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

 ಕಾರ್ಯಕ್ರಮದಲ್ಲಿ ಕುಶಾಲನಗರದ ಹಿರಿಯ ಭರತನಾಟ್ಯ ವಿದ್ವಾನ್ ಶಂಕರ್ ಮಾಸ್ತರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಜಿ.ಎಂ.ಕಾಂತರಾಜ್, ಗ್ರಾ.ಪಂ.ಮಾಜಿ ಅಧ್ಯಕ್ಷೆ ಗೀತ ಹರೀಶ್, ಕೃಷಿ ಪತ್ತಿನ ಸಂಘದ ಅಧ್ಯಕ್ಷ ಶರತ್ ಶೇಖರ್ ಮಾತನಾಡಿದರು.

 ಕಾರ್ಯಕ್ರಮದಲ್ಲಿ ಲಲಿತಾ ನಾಟ್ಯಾಲಯ ಶಾಲೆಯ ಸ್ಥಾಪಕಿ ನೃತ್ಯ ಕಲಾವಿದೆ ಸುನೀತ ವಸಂತ್‌ಕುಮಾರ್, ವಸಂತ್‌ಕುಮಾರ್, ಕೋಮಲ, ಮುಂತಾದವರು ಇದ್ದರು. ನೃತ್ಯ ಶಾಲೆಯ ವಿದ್ಯಾರ್ಥಿಗಳು ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0