70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ: ಇಂದಿನ ಯುವ ಪೀಳಿಗೆಯ ಕೈಯಲ್ಲಿ ಕರ್ನಾಟಕದ ನಾಳೆ ಇದೆ: ಪ್ರೊ. ಅಶೋಕ ಸಂಗಪ್ಪ ಆಲೂರ
ಕುಶಾಲನಗರ: ಇಂದಿನ ಯುವ ಪೀಳಿಗೆಯ ಕೈಯಲ್ಲಿ ಕರ್ನಾಟಕದ ನಾಳೆ ಇದೆ. ಸಾಂಸ್ಕೃತಿಕ ವೈವಿಧ್ಯತೆಯಿಂದ ಕೂಡಿದ ಕನ್ನಡ ನಾಡಿನಲ್ಲಿ ಮಾತನಾಡುವ ಭಾಷೆಯಲ್ಲಿ ಪ್ರೌಢಿಮೆ, ಕಲಿಯುವ ವಿಜ್ಞಾನದಲ್ಲಿ ಮಾನವೀಯತೆ, ಕಾಣುವ ಕನಸಿನಲ್ಲಿ ಪಾಂಡಿತ್ಯವನ್ನು ಮೈಗೂಡಿಸಿಕೊಳ್ಳಬೇಕೆಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರರವರು ಅಭಿಪ್ರಾಯಿಸಿದರು. ಜ್ಞಾನ ಕಾವೇರಿ ಆವರಣ, ಚಿಕ್ಕಅಳುವಾರ, ಇಲ್ಲಿನ ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಭುವನೇಶ್ವರಿ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು,
ಸಾವಿರಾರು ವರ್ಷಗಳ ಸಾಂಸ್ಕೃತಿಕ ಅಸ್ಮಿತೆಯನ್ನು ಹೊಂದಿರುವ ಕನ್ನಡ ಭಾಷೆಗೆ ಭಾವನಾತ್ಮಕ ಬಾಂಧವ್ಯವಿದೆ. ನಾವೆಲ್ಲರೂ ಕನ್ನಡಿಗರು, ವಿಶ್ವಮಾನವ ಸಂದೇಶವು ನಮ್ಮ ಸಮಾಜವನ್ನು ವಿಶ್ವದೊಂದಿಗೆ ಸಂಪರ್ಕಿಸುವ ಜೀವನದ ದಾರಿಯಾಗಿದೆ. ಯುವಕರ ಉತ್ಸಾಹವೇ ನಾಳೆಯ ಕರ್ನಾಟಕ. ಸಂಶೋಧನೆ, ಆವಿಷ್ಕಾರ, ದೈವಿಕ ಶಕ್ತಿ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕನ್ನಡ ನಾಡು ನ್ಯಾಯ, ಪ್ರೀತಿ, ಸಹಿಷ್ಣುತೆ ಮತ್ತು ಮೌಲ್ಯಾಧಾರಿತ ಬದುಕಿಗೆ ಮಾದರಿಯಾಗಿದೆ. ಬಸವಾದಿ ಶರಣರಾದಿಯಾಗಿ ವಚನ ಸಾಹಿತ್ಯದಿಂದ ಡಿಜಿಟಲ್ ಕಾಲದಲ್ಲೂ ಕೂಡ ಗಟ್ಟಿಯಾಗಿ ನೆಲೆನಿಂತಿವೆ.
ನಮ್ಮ ಕನ್ನಡದ ಆತ್ಮದ ಹಬ್ಬ, ನಮ್ಮ ಸಂಸ್ಕೃತಿಯ ಸಂಭ್ರಮದ ಹಬ್ಬ, ಏಕತೆಯ ಹಬ್ಬವಾಗಿದೆ. ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬೋಧಕ ಮತ್ತು ಬೋಧಕೇತರ ವೃಂದದವರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ದೀಪ್ತಿ ನಿರೂಪಣೆ ಮಾಡಿದರು. ಉಪನ್ಯಾಸಕ ಡಾ. ಜ಼ಮೀರ್ ಅಹಮದ್ ಸ್ವಾಗತಿಸಿದರು.