ಕರ್ನಾಟಕ ಲೋಕಸೇವಾ ಆಯೋಗ ಸದನ ಸಮಿತಿಯಲ್ಲಿ ಎ.ಎಸ್.ಪೊನ್ನಣ್ಣ ನವರಿಗೆ ಸ್ಥಾನ ಸ್ವಾಗತಾರ್ಹ; ಕೊಡಗು ಕಾಂಗ್ರೆಸ್ ಸಂತಸ
admincoorgdaily

ಮಡಿಕೇರಿ; ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಆಡಳಿತಾತ್ಮಕ ಬದಲಾವಣೆ ಮತ್ತು ಸುಧಾರಣೆಗಾಗಿ ರಚಿಸಲಾಗಿರುವ ಸದನ ಸಮಿತಿಯಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನುಬಸಲಹೆಗಾರರಾಗಿರುವ ಎ.ಎಸ್.ಪೊನ್ನಣ್ಣ ನವರಿಗೆ ಸದಸ್ಯ ಸ್ಥಾನ ನೀಡಿರುವುದು ಸ್ವಾಗತಾರ್ಹ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಹರ್ಷ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆ 1956 ರಿಂದ ಕರ್ನಾಟಕ ರಾಜ್ಯದಲ್ಲಿ ವಿಲೀನವಾದ ನಂತರದ ದಿನಗಳಲ್ಲಿ ಕೊಡಗಿನ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ವಂಚನೆಯಾಗುತ್ತಿದೆ ಎಂಬ ಕೂಗು ಬಹಳ ವರ್ಷದಿಂದ ಕೇಳಿಬರುತ್ತಿತ್ತು. ಕರ್ನಾಟಕ ಲೋಕ ಸೇವಾ ಆಯೋಗ ( KPSE) ಸಂಸ್ಥೆ ಸಂವಿಧಾನಾತ್ಮಕ ಸಂಸ್ಥೆ ಯಾಗಿದುದ್ದು ಸರ್ಕಾರಿ ಹುದ್ದೆಗಳಾದ ಕೆ.ಎ.ಎಸ್,ಗ್ರೂಪ್ ಎ.ಬಿ.ಸಿ.ಡಿ ಹುದ್ದೆಗಳ ನೇಮಕಾತಿಯನ್ನು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ಸಂಸ್ಥೆ ಯ ವ್ಯವಸ್ಥೆ ಮತ್ತು ನಿಯಮಗಳಲ್ಲಿ ಕೊಡಗು ಜಿಲ್ಲೆಗೆ ಅನ್ಯಾಯವಾಗುತ್ತಿದೆ ಮತ್ತು ಕೊಡಗಿನ ಯುವ ಸಮೂಹ ಸರ್ಕಾರಿ ನೌಕರಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು.
ಈಗ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗದ ಸುಧಾರಣೆ, ಅಕ್ರಮಗಳ ತಡೆಗಟ್ಟುವಿಕೆ,ಪಾರದರ್ಶಕ ನೇಮಕಾತಿ ಮುಂತಾದ ಆಡಳಿತಾತ್ಮಕ ಬದಲಾವಣೆಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದು ಅದರಲ್ಲಿ ಎ.ಎಸ್.ಪೊನ್ನಣ್ಣ ನವರಿಗೆ ಸದಸ್ಯರಾಗಿ ಸ್ಥಾನ ನೀಡಲಾಗಿದೆ. ಪೊನ್ನಣ್ಣ ನವರು ಸದನ ಸಮಿತಿಯ ಸದಸ್ಯರಾಗಿರುವುದರಿಂದ ಹಲವು ಸುಧಾರಣೆಗಳು ,ಬದಲಾವಣೆಗಳು ಸಂಸ್ಥೆಯ ಆಯ್ಕೆ ಪ್ರಕೃಯೆಯಲ್ಲಿ ನಡೆಯಲಿದ್ದು ಇದರಿಂದ ಭವಿಷ್ಯದಲ್ಲಿ ಕೊಡಗಿನ ಯುವ ಸಮೂಹಕ್ಕೆ ಅನುಕೂಲವಾಗಲಿದೆಯೆಂದು ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.