ಜನಸೇವೆ ಮಾಡುತ್ತಿರುವ ದಿಟ್ಟ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ
ರಾಜಕರಣಿಯೊಬ್ಬರು ಒಡ್ಡಿದ 1.50 ಕೋಟಿ ರೂಪಾಯಿ ಆಮಿಷ ತಿರಸ್ಕರಿಸಿದ ಕೊಡಗಿನ ಪ್ರಾಮಾಣಿಕ, ದಿಟ್ಟ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಪರೂಪದಲ್ಲಿ ಅಪರೂಪದ ಜನಸೇವಕ ಹಿರಿಯ ಪತ್ರಕರ್ತ.
ಪ್ರಾಮಾಣಿಕತೆ ಹಾಗೂ ದಿಟ್ಟತನಕ್ಕಾಗಿ ವಿಆರ್ ಎಲ್ ಮಿಡಿಯಾ ಸಂಸ್ಥೆಯಿಂದ 10 ಲಕ್ಷ ರೂಪಾಯಿ ಹಾಗೂ ಚಿನ್ನದ ನಾಣ್ಯ ಪಡೆದಿರುವುದು ಪತ್ರಿಕೊದ್ಯಮದಲ್ಲಿಯೇ ಅಪರೂಪದಲ್ಲಿ ಅಪರೂಪ.
ಕೊಡಗಿನ ಸಂಕಷ್ಟಕ್ಕೆ ತುಡಿಯುವ, ಸಮಾಜಪರ ಕಾರ್ಯ ಚಟುವಟಿಕೆ ಗಳ ಮೂಲಕ ಅತ್ಯಂತ ಸಕ್ರಿಯವಾಗಿ ಗಮನ ಸೆಳೆಯುತ್ತಲೇ ಬಂದಿರುವ ಸಮಾನ ಮನಸ್ಕರ ಪತ್ರಕರ್ತರ ತಂಡದೊಂದಿಗೆ ಮಾಧ್ಯಮ ಸ್ಪಂದನ ಕಟ್ಟಿದ್ದಾರೆ. ಸಾರ್ವಜನಿಕ ಸೇವೆಗಾಗಿ ಮಾಧ್ಯಮ ಸ್ಪಂದನ ಸೇವಾ ಸಂಸ್ಥೆ ಮುನ್ನಡೆಸುತ್ತಿದ್ದಾರೆ.
ಇಂತಹ ಒಂದು ನೂತನ ಪರಿಕಲ್ಪನೆಗೆ ಸಾಕಾರ ರೂಪ ಕೊಟ್ಟವರು, ತಂಡದ ರೂವಾರಿಗಳು, ಕೊಡಗಿನ ದಿಟ್ಟ ಪತ್ರಕರ್ತರೆಂದೇ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಶ್ರೀ ಅಜ್ಜಮಾಡ ರಮೇಶ್ ಕುಟ್ಟಪ್ಪ.
ಅಸಹಾಯಕ ಪರಿಸ್ಥಿತಿಗೆ ಸಿಲುಕಿದ ಸಾರ್ವಜನಿಕರ ನೆರವಿಗಾಗಿ ಸ್ಪಂದಿಸುವುದೇ ಮಾಧ್ಯಮ ಸ್ಪಂದನ ಧ್ಯೇಯ.
ಕೋವಿಡ್ ಕಾಲಘಟ್ಟದಲ್ಲಿ ಕೊಡಗಿನ 70 ಪತ್ರಕರ್ತರ ತಂಡದ ವಾಟ್ಸಪ್ಪ್ ಗ್ರೂಪ್ ಸಾರ್ವಜನಿಕರ ನೆರವಿಗಾಗಿಯೆಂದೇ ರೂಪಿಸಲಾಯಿತು.
ಕೋವಿಡ್ ಲಾಕ್ ಡೌನ್ ಸಂದರ್ಭ ಜನಸಂಚಾರ ನಿರ್ಬಂಧವಿದ್ದ ಕಾರಣ ಸಾರ್ವಜನಿಕರಿಗೆ ಅಗತ್ಯ ತುರ್ತು ಸೇವೆಗಳಿಗೆ, ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸಿ ತಕ್ಷಣದ ನೆರವು ನೀಡುವ ಕಾರ್ಯವನ್ನು ಮಾನವೀಯತೆಯ ನೆಲೆಗಟ್ಟಿನಲ್ಲಿ ಬಹಳ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದ ಮಾಧ್ಯಮ ಸ್ಪಂದನ ಇದೀಗ ತನ್ನ ಸೇವೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಂಡು ಬೆಳೆಯುತ್ತಲಿದೆ.
ಕೊಡಗಿನ ಉದ್ದಗಲಕ್ಕೂ ನಿಶಕ್ತ ಮತ್ತು ಅನಾರೋಗ್ಯದಿಂದ ತತ್ತರಿಸಿ ಸಾವಿಗೆ ಮೂರೇ ಗೇಣು ಎನ್ನುವಂತಿದ್ದ ಅದೆಷ್ಟೋ ಕುಟುಂಬಗಳಿಗೆ ಆರ್ಥಿಕವಾಗಿ ಸಹಕರಿಸಿ ಶಕ್ತಿ ತುಂಬಲು ನಾವಿದ್ದೇವೆ ಎನ್ನುವಂತಹ ಅಭಯ ನೀಡುತ್ತಾ ಬಂದಿದೆ. ಕೊಡಗಿನಲ್ಲಿ ಕೋವಿಡ್ ರಣಭೀಕರವಾಗಿ ಕಾಡಿದಂತಹ ವಿಷ ಗಳಿಗೆಯಲ್ಲoತೂ ಕೊಡಗಿನ ಅಡಿಯಿಂದ ಮುಡಿಯವರೆಗೆ ತನ್ನ ತಂಡ ಕಟ್ಟಿಕೊಂಡು ಔಷಧಿ, ಆಹಾರ, ದಿನಸಿ ಸಾಮಗ್ರಿ ಜತೆಗೆ ಲಾಕ್ ಡೌನ್ ನಿಂದ ಆನ್ಲೈನ್ ಪಾಠಕ್ಕೆ ಮೊಬೈಲ್ ಕೊಳ್ಳಲಾಗದ ಅದೆಷ್ಟೋ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಖರ್ಚಿಗೆ ಹಣ ಹೊಂದಿಸಿ ಕೊಡಗಿನ ಮಾಧ್ಯಮ ತಂಡ ಆಟೋಟ, ವರದಿಗಷ್ಟೇ ಸೀಮಿತವಲ್ಲ ಎಂಬುದನ್ನು ಸಾಬೀತು ಪಡಿಸಿದೆ.
ಇಲ್ಲಿಯವರೆಗೆ 70 ಲಕ್ಷ ರೂಪಾಯಿಯಷ್ಟು ಹಣವನ್ನು ದಾನಿಗಳ ಮೂಲಕ ದೇಣಿಗೆ ಸಂಗ್ರಹಿಸಿ ಬೇರೆ ಬೇರೆ ಸಂದರ್ಭಗಳಿಗೆ ನೆರವು ನೀಡಲಾಗಿದೆ.
ಮಾಧ್ಯಮ ಸ್ಪಂದನದಲ್ಲಿ ದಾನಿಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ ಎಂದರೆ ಯಾವುದೇ ಸಂಶಯ, ಗೊಂದಲ ಗಳಿಗೆ ಲವಲೇಶವೂ ಅವಕಾಶ ನೀಡದಂತೆ ಪಾರದರ್ಶಕವಾಗಿ ಸಂದಾಯವಾದ ಹಣವನ್ನು ಫಲಾನುಭವಿಗಳಿಗೆ ಸಲ್ಲಿಸುವ ಪ್ರಕ್ರಿಯೆಯೇ ಪರಿಣಾಮಕಾರಿ ಯಾದಂತಹ ಬೆಳವಣಿಗೆಗೆ ಕಾರಣವಾದ ಅತೀ ಮುಖ್ಯ ವಿಚಾರ.
ಇದರ ಕಾರ್ಯ ಚಟುವಟಿಕೆಗಳ ಒಂದು ಇಣುಕು ನೋಟ ಇಲ್ಲಿದೆ. ಇದು ಉದಾಹರಣೆಯಷ್ಟೇ. ಇದಲ್ಲದೆಯೂ ಹಣಕಾಸು ಸಂಬಂಧಿ ಸಹಾಯ ಮಾತ್ರವಲ್ಲದೆ ಬೇರೆ ಬೇರೆ ಸಂದರ್ಭದಲ್ಲಿ ಸಹಾಯ ಕೇಳಿ ಬಂದವರಿಗೆ ಬೆನ್ನೆಲುಬಾಗಿ ನಿಂತ ಉದಾಹರಣೆಗಳು ಬಹಳಷ್ಟಿವೆ.
* ಕೆದಮುಳ್ಳೂರಿನ ಬಾಲಕನೊಬ್ಬನ ಶಸ್ತ್ರಚಿಕಿತ್ಸೆಗೆ 8 ಲಕ್ಷ ರೂಪಾಯಿ ದಾನಿಗಳಿಂದ ಸಂಗ್ರಹಿಸಿಕೊಡಲಾಯಿತು. ಆ ಮೂಲಕ ಬಾಲಕನ ಚಿಕಿತ್ಸೆಗೆ ದೊಡ್ಡ ಸಹಾಯಹಸ್ತ ನೀಡಲಾಯಿತು.
* ವಿರಾಜಪೇಟೆ ರವಿಕುಮಾರ್ ಅವರ ಪುತ್ರಿಗೆ ಬಿ.ಎಸ್ಸಿ. ವಿದ್ಯಾಭ್ಯಾಸಕ್ಕಾಗಿ ಅಗತ್ಯವಿದ್ದ ಲ್ಯಾಪ್ ಟಾಪ್ ಅನ್ನು 44,000 ರೂಪಾಯಿ ಹಣವನ್ನ ದಾನಿ ಗಳಿಂದ ಸಂಗ್ರಹಿಸಿ ಸಹಾಯ ನೀಡಲಾಗಿದೆ.
* ಮಡಿಕೇರಿ ನಗರಸಭೆ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಅವರ ಚಿಕಿತ್ಸೆಗೆ ಮಾಧ್ಯಮ ಸ್ಪಂದನ ಮನವಿಯ ಮೇಲೆ ದಾನಿಗಳು ಚಿಕಿತ್ಸೆಗೆ ಹಣ ನೀಡಿ ಸಹಕಾರ ನೀಡಿದ್ದು ಅಭಿನಂದನೀಯ.
* ಅನಾರೋಗ್ಯದಿಂದ ಬಳಲುತ್ತಿದ್ದ ವಿರಾಜಪೇಟೆಯ ಬಿ. ಶೆಟ್ಟಿಗೇರಿಯ ಕುಟುಂಬಕ್ಕೆ ಮುಂಬೈ ಉದ್ಯಮಿ ಅಕ್ಕಳತಂಡ ಮೊಯ್ದು ಅವರು ಮಾಧ್ಯಮ ಸ್ಪಂದನದ ಮನವಿಗೆ ಸ್ಪಂದಿಸಿ 15,000 ರೂಪಾಯಿಗಳ ಸಹಾಯಧನ ನೀಡಿದ್ದಾರೆ.
* ಆಸ್ಪತ್ರೆ ಬಿಲ್ ಪಾವತಿಸದೆ ಅಸಹಾಯಕ ಪರಿಸ್ಥಿತಿಗೆ ಸಿಲುಕಿದ ವಿರಾಜಪೇಟೆ ಅರಮೇರಿ ಗ್ರಾಮದ ಬಾಣಂತಿ ಮಹಿಳೆಯ ಕುಟುಂಬಕ್ಕೆ ಮಾಧ್ಯಮ ಸ್ಪಂದನ ತಂಡದ ನೆರವಿನ ಮೂಲಕ ಹಣ ಸಂಗ್ರಹಿಸಿ ಸುರಕ್ಷಿತವಾಗಿ ಮನೆಗೆ ತಲುಪಿಸಲಾಯಿತು.
* ಕೋವಿಡ್ ಸೋಂಕಿಗೆ ಬಲಿಯಾದ ಬಲಂಬೇರಿಯ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ಮಾಧ್ಯಮ ತಂಡದ ನೇತೃತ್ವದಲ್ಲಿ ನಡೆದ ಒಂದು ಮನಮುಟ್ಟುವ ಪ್ರಸಂಗ. ಕೋವಿಡ್ ಭಯದಿಂದ ಅಂತ್ಯ ಕ್ರಿಯೆಗೆ ಹಿಂಜರಿದ ಊರಿನವರು, ಸಂಬಂಧಿಕರಿಂದಾಗಿ ಮಾಧ್ಯಮ ಸ್ಪಂದನದ ನೆರವು ಅತ್ಯವಶ್ಯಕವಾಗಿ ಕಂಡು ಬಂತು.
* ಇದೇ ರೀತಿಯಲ್ಲಿ ಪಾಲಿಬೆಟ್ಟದ ಹೇಮಾವತಿ ಎಂಬುವರು ಕೋವಿಡ್ ನಿಂದ ಮರಣ ಹೊಂದಿದಾಗಲು ಮಾಧ್ಯಮ ಸ್ಪಂದನದ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ.
* ಕೇರಳದ ಸುಲ್ತಾನ್ ಬತ್ತೇರಿ ತನಲ್ ಆಶ್ರಮ ಆಸ್ಪತ್ರೆ ಯಲ್ಲಿ ನಿಧನರಾದ ಪುಷ್ಪ ಅವರ ಪಾರ್ಥಿವ ಶರೀರವನ್ನು ಆಂಬುಲೆನ್ಸ್ ಮೂಲಕ ತರಿಸಿ ಸಾರ್ವಜನಿಕರ ಸಹಕಾರದೊಂದಿಗೆ ಮಾಧ್ಯಮ ಸ್ಪಂದನದ ದಾನಿಗಳ ನೆರವಿನಿಂದ ನಡೆಸಿದ್ದು ಮಾನವೀಯ ಘಟನೆಗೆ ಸಾಕ್ಷಿಯಾಯಿತು.
* ಲಾಕ್ ಡೌನ್ ಹಿನ್ನೆಲೆಯಲ್ಲಿ ತಾಳಿ, ಕರಿಮಣಿ, ಸೂಟ್ ಕೇಸ್ ಖರೀದಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದ ಮರಗೋಡು ಗ್ರಾಮದ ನೀರ್ಕೊಲ್ಲಿ ನಿವಾಸಿ ಗೀತಾ ಎಂಬ ವಧುವಿನ ಸಮಸ್ಯೆಗೆ ಮಾಧ್ಯಮ ಸ್ಪಂದನ ನೆರವು ನೀಡಿ ವಿವಾಹ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿತು. ಪತ್ರಕರ್ತರ ನೆರವಿನಿಂದಾಗಿ ತಾಳಿ, ಸೂಟ್ ಕೇಸ್ ಹಾಗೂ ಕರಿಮಣಿಗೆ ಬೇಕಾದ ಹಣವನ್ನು ಮಾಧ್ಯಮ ಸ್ಪಂದನದಿಂದಲೇ ಭರಿಸಿದ್ದು ನಿಜಕ್ಕೂ ಮನ ಮುಟ್ಟುವ ಕಾರ್ಯವಾಗಿದೆ.
* ವಿರಾಜಪೇಟೆಯ ನೆಲೆಸಿರುವ ಬಡ ಕುಟುಂಬದ ಸದಸ್ಯರೊಬ್ಬರಿಗೆ ಬೇಕಾಗಿದ್ದ ಅಗತ್ಯ ಔಷಧಿ ಮಾಧ್ಯಮ ಸ್ಪಂದನ ತಂಡದ ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
* ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಆಗಿರುವ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು 20 ಸಾವಿರ ರೂಪಾಯಿ ಪಾವತಿಸಲಾಗದೆ ಆ ಕುಟುಂಬ ಸಂಕಷ್ಟದಲ್ಲಿ ಸಿಲುಕಿತ್ತು. ಮಾಧ್ಯಮ ಸ್ಪಂದನದ ತಕ್ಷಣದ ನೆರವು ಇಡೀ ಕುಟುಂಬದ ಸಮಸ್ಯೆಗೆ ಪರಿಹಾರ ಒದಗಿಸಿತು.
* ಆರ್ಥಿಕ ಸಂಕಷ್ಟದಿಂದ ಕಾಲೇಜು ಶುಲ್ಕ ಪಾವತಿಸಲಾಗದೆ ಸಮಸ್ಯೆಯಲ್ಲಿ ಸಿಲುಕಿದ್ದ ವಿದ್ಯಾರ್ಥಿನಿಯರ ಶುಲ್ಕವನ್ನು ದಾನಿಗಳ ನೆರವಿನಿಂದ ವಿರಾಜಪೇಟೆ ಸರಕಾರಿ ಪದವಿ ಕಾಲೇಜಿಗೆ ಸಂದಾಯ ಮಾಡಿ ವಿದ್ಯಾಭ್ಯಾಸದ ನೆರವು ನೀಡಲಾಗಿದೆ.
* ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದ ಕೊಡ್ಲಿ ಪೇಟೆಯ ಚಾಲಕ ಕುಟುಂಬಕ್ಕೆ ಮಾಧ್ಯಮ ಸ್ಪಂದನ ಮೂಲಕ ಅಗತ್ಯ ದಿನೋಪಯೋಗಿ ಸಾಮಗ್ರಿ ಒದಗಿಸಲಾಯಿತು.
* ಮಡಿಕೇರಿ ತಾಲೂಕು ವ್ಯಾಪ್ತಿಯ ಗಾಳಿಬೀಡಿನ 60 ಪ್ರಾಯದ ಕ್ಯಾನ್ಸರ್ ಪೀಡಿತ ವ್ಯಕ್ತಿಯ ಚಿಕಿತ್ಸೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣ, ಹಾಗೂ ಸೇವೆಯನ್ನು ದಾನಿಗಳ ಸಹಾಯದಿಂದ ನೆರವೇರಿಸಿಕೊಡಲಾಯಿತು.
* ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಅಸಹಾಯಕ ಪರಿಸ್ಥಿತಿಗೆ ಸಿಲುಕಿದ ಜನರಿಗೆ ದೊಡ್ಡ ಮಟ್ಟದ ನೆರವು ನೀಡಲಾಗಿದೆ.
ಇದೇ ರೀತಿಯಲ್ಲಿ ಪತ್ರಕರ್ತರ ಸಂಘದಲ್ಲಿದ್ದಾಗಲೂ ಪ್ರಕೃತಿ ವಿಕೋಪದಿಂದಾಗಿ ಮನೆ ಕುಸಿದು ಬಿದ್ದಾಗ ಪತ್ರಕರ್ತರಿಂದ ದೇಣಿಗೆ ಸಂಗ್ರಹಣೆ ಮಾಡಿ, ರಾಜ್ಯ ಪತ್ರಕರ್ತರ ಸಂಘದಿಂದ 10 ಲಕ್ಷ ದೇಣಿಗೆ ಸಂಗ್ರಹಣೆ ಮಾಡಿ 5 ಲಕ್ಷವನ್ನು ಮೂವರು ಪತ್ರಕರ್ತರಿಗೆ ಸಹಾಯಧನವಾಗಿ ನೀಡಲಾಗಿದೆ. 5 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 50,000 ರೂ ಹಣವನ್ನು ವಿದ್ಯಾಭ್ಯಾಸದ ನೆರವಿಗಾಗಿ ನೀಡಲಾಗಿದೆ.
ಪರಿಸರ, ರಾಜಕೀಯ, ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಡ್ರಗ್ಸ್ ಮುಕ್ತ ಕೊಡಗು ಅಭಿಯಾನ ಆಯೋಜಿಸಿದ್ದರು. ಇದು ಅವರ ಮತ್ತೊಂದು ಸಮಾಜಮುಖಿ ಕಾರ್ಯ. ಈ ಅಭಿಯಾನದ ಮೂಲಕ ಅನೇಕ ಗಣ್ಯ ವ್ಯಕ್ತಿಗಳ ಸಂದೇಶ ಭರಿತ ವೀಡಿಯೊ ಮೂಲಕ ಜಾಗೃತಿ ಅಭಿಯಾನ ನಡೆಸಿದ್ದಾರೆ. ಡ್ರಗ್ಸ್ ವ್ಯಸನಿಗಳ ಬಂಧನ, ಪೊಲೀಸ್ ಕಾರ್ಯಾಚರಣೆಯಲ್ಲಿ ನೇರವಾಗಿ ಪಾಲ್ಗೊಂಡು ಅನೇಕ ಬೆದರಿಕೆ, ಆಮಿಷಗಳ ಒತ್ತಡದ ನಡುವೆಯೂ ಸಮಸ್ಯೆಯ ಒಳಹೊಕ್ಕು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಕೊಡಗಿನ ಪ್ರಬಲ ರಾಜಕಾರಣಿ ಯೊಬ್ಬರ ಅಕ್ರಮ- ಸಕ್ರಮ ಹಗರಣ ಬಯಲುಗೆಳೆದು ದಿಟ್ಟ ವರದಿ ಮಾಡಿದ ಸಂದರ್ಭ 1.50 ಕೋಟಿಯ ಹಣದ ಆಮಿಷ ಬಂದಾಗಲೂ ತನ್ನ ವೃತ್ತಿ ಧರ್ಮಕ್ಕೆ ಕಿಂಚಿತ್ತೂ ಧಕ್ಕೆ ಬಾರದಂತೆ ಸಾರಾ ಸಗಟಾಗಿ ತಿರಸ್ಕರಿಸಿದವರು ಇವರು. ಆಗ VRL ನ ಮಾಲೀಕರಾದ ಡಾ.ವಿಜಯ್ ಸಂಕೇಶ್ವರ್ ಅವರು 10 ಲಕ್ಷ ರೂಪಾಯಿ ಹಾಗೂ ಚಿನ್ನದ ನಾಣ್ಯ ನೀಡಿ ಗೌರವಿಸಿದ್ದು ಪತ್ರಿಕೋದ್ಯಮದಲ್ಲಿಯೇ ಇತಿಹಾಸ ಸೃಷ್ಟಿಸಿದ ಸಂದರ್ಭವಾಗಿದೆ.
ಯಾವುದೇ ದಾನಿಗಳ ಸಹಾಯ ವನ್ನು ಫಲಾನುಭವಿಗಳಿಗೆ ತಲುಪಿಸಿದ ನಂತರ ಮುಂದೆ ಯಾವುದೇ ನಿರೀಕ್ಷೆಗಳಿಗೆ ಎಡೆ ಮಾಡಿಕೊಡದಂತೆ ಕೆಲವೊಂದು ಕಟ್ಟಾ ನಿಯಮಗಳನ್ನು ಪಾಲಿಸುತ್ತಲೇ ಬಂದಿರುವ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಸದಾ ಸಮಾಜಮುಖಿ ಚಿಂತನೆಯಲ್ಲಿ ಕಾರ್ಯಪ್ರವೃತ್ತ ರಾಗುತ್ತಾರೆ.
ಅವರ ದೃಷ್ಟಿಕೋನ ಸಾಮಾಜಿಕ ನ್ಯಾಯ, ಸರ್ವ ಧರ್ಮೀಯರ ಸಮನ್ವಯ ಬದುಕಿಗೆಬೇಕಾದ ಅಪೇಕ್ಷಿತ ನಡವಳಿಕೆ, ವಿಭಿನ್ನ ಸಂಸ್ಕೃತಿ, ಉಡುಗೆ- ತೊಡುಗೆಗಳ ಬಗೆ, ಆಚಾರ-ವಿಚಾರಗಳ ನಡುವೆ ಪರಸ್ಪರ ಗೌರವಭಾವ ಬೆಳೆಸಿಕೊಳ್ಳುವ ಬಗೆಗೆ ವಿಚಾರಧಾರೆ ವ್ಯಕ್ತ ಪಡಿಸುತ್ತಾರೆ.
ಕೊಡಗಿನ ಖಾಸಗಿ ಚಾನೆಲ್ ಕೂರ್ಗ್ ಭಜ್ ನಲ್ಲಿ ವಾರಕ್ಕೆ ಒಂದು ಪ್ರಚಲಿತ ವಿಚಾರ ತೆಗೆದುಕೊಂಡು ಸವಿಸ್ತಾರ ವಾಗಿ ಚರ್ಚೆಗೆ ಒಳಪಡಿಸುವ ಮೂಲಕ ವೀಕ್ಷಕರನ್ನು ಚಿಂತನೆಗೆ ಒಳಪಡಿಸುವ ರೀತಿ ನಿಜಕ್ಕೂ ಶ್ಲಾಘನೀಯ ಸಂಗತಿ.
ಕೊಡಗು ಜಿಲ್ಲೆ ಪೊನ್ನoಪೇಟೆ ತಾಲೂಕಿನ ಕುರ್ಚಿ ಗ್ರಾಮದಲ್ಲಿ ಶ್ರೀ ಎ. ಎಂ. ರಮೇಶ್ ಹಾಗೂ ಎ. ಆರ್. ಜಯ ದಂಪತಿಗಳ ಏಕೈಕ ಪುತ್ರನಾಗಿ 12/01/1979 ರಂದು ಜನಿಸಿದರು. ಬಿ. ಕಾಂ. ಹಾಗೂ ರಾಜ್ಯಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆಡಿದ್ದಾರೆ. 2000 ನೇ ಇಸವಿಯಲ್ಲಿ ಮೊದಲಿಗೆ ವೀರನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಆಕಸ್ಮಿಕವಾಗಿ ಪ್ರವೇಶಿಸಿದ ಇವರು ಆ ನಂತರ ಮಂಗಳೂರಿನ ಕನ್ನಡ ಜನಾಂತರಂಗ ಪತ್ರಿಕೆಯಲ್ಲಿ ಅಲ್ಪಕಾಲಿಕ ಸೇವೆ ಸಲ್ಲಿಸಿದರು. ವಿಜಯಕರ್ನಾಟಕ ಪತ್ರಿಕೆಯಲ್ಲಿ ಕೊಡಗಿನ ಜಿಲ್ಲಾ ವರದಿಗಾರರಾಗಿ 2012 ರವರೆಗೆ ಸೇವೆ ಸಲ್ಲಿಸಿದ್ದಾರೆ. ನಂತರ ವಿಜಯವಾಣಿ ಪತ್ರಿಕೆಯಲ್ಲಿ 11 ವರ್ಷಗಳ ಕಾಲ ಕೊಡಗು ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ನಂತರ 6 ತಿಂಗಳ ಕಾಲ ಪ್ರಜಾಸತ್ಯದಲ್ಲಿ ಸೇವೆ ಸಲ್ಲಿಸಿ ಇದೀಗ ಕಳೆದ ಮೂರು ವರ್ಷಗಳಿಂದ ಪ್ರತಿನಿಧಿ ಪತ್ರಿಕೆಯ ಮೈಸೂರು ಸ್ಥಾನಿಕ ಸಂಪಾದಕರಾಗಿ ಮುಂದುವರೆದಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಇವರ ಸೇವೆಗೆ ಸಂದ ಗೌರವ ಪ್ರಶಸ್ತಿ ಸನ್ಮಾನಗಳು ನಿಜಕ್ಕೂ ಅಭಿನಂದನೀಯ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ಪ್ರೆಸ್ ಕ್ಲಬ್ ಮಾಜಿ ಆಧ್ಯಕ್ಷರಾಗಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ, ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಗಿ ಸತತ ಎರಡನೇ ಬಾರಿಗೆ ಆಯ್ಕೆಯಾದ ಹೆಗ್ಗಳಿಕೆ ಇವರದು. ಸಮಾಜದ ನಡೆಯನ್ನು ಸದಾ ಚಿಕಿತ್ಸಕ ದೃಷ್ಟಿಕೋನದಿಂದ ನೋಡುತ್ತಾ, ಸರಿ ತಪ್ಪುಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತಾ, ಅಭಿಪ್ರಾಯವನ್ನು ನೇರವಾಗಿ ಮುಕ್ತವಾಗಿ ಯಾವ ರಾಜಿಗೂ ಬಗ್ಗದೆ ದಿಟ್ಟವಾಗಿ ವ್ಯಕ್ತ ಪಡಿಸುವ ವಿಭಿನ್ನ ಹಾಗೂ ವಿಶೇಷ ವ್ಯಕ್ತಿತ್ವದವರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಅಷ್ಟೇ ಮಾನವೀಯ ಅಂತ:ಕರಣವುಳ್ಳವರೆಂದು ಸಾಕ್ಷಿಕರಿಸಲು ಪತ್ರಕರ್ತರಾಗಿ ಅವರು ತೊಡಗಿಸಿಕೊಂಡ ರೀತಿ, ಸಮಾಜದ ಅಂಕು ಡೊಂಕುಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಅಗತ್ಯವಿರುವ ಕಡೆಗೆ ತಮ್ಮ ಮಿತಿಯಲ್ಲಿ ಸಹಾಯ ಹಸ್ತ ಚಾಚಿದ ರೀತಿ ನಿಜಕ್ಕೂ ಅನುಕರಣೀಯವೂ ಹೌದು. ಆದರಣೀಯವೂ ಹೌದು. ಆ ನಿಟ್ಟಿನಲ್ಲಿ ಮಾಧ್ಯಮ ಸ್ಪಂದನ ಕಟ್ಟಿ ಬೆಳೆಸಿದ್ದೇ ಇವರ ಹೃದಯ ವೈಶಾಲ್ಯತೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಕಳೆದ 26 ವರ್ಷದಿಂದ ಪತ್ರಿಕೋದ್ಯಮದಲ್ಲಿರುವ ಅಜ್ಜಮಾಡ ರಮೇಶ್ ಕುಟ್ಟಪ್ಪ ಜನಸೇವೆ ಮೂಲಕ ಜನಮನ ಗೆದ್ದಿದ್ದಾರೆ.

