ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅರಮೇರಿ ಶ್ರೀಗಳ ಆಯ್ಕೆ
ಕುಶಾಲನಗರ : ಕುಶಾಲನಗರದಲ್ಲಿ ಆಯೋಜನೆ ಯಾಗುತ್ತಿರುವ ಕೊಡಗು ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ವಿರಾಜಪೇಟೆ ತಾಲ್ಲೂಕಿನ ಅರಮೇರಿಯ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ತೊರೆನೂರು ವಿರಕ್ತ ಮಠದಲ್ಲಿ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜರುಗಿದ ಸಮ್ಮೇಳನ ಸಮಿತಿಯ ಪದಾಧಿಕಾರಿಗಳು ಹಾಗೂ ಪ್ರಮುಖರ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಕಳೆದ ಅನೇಕ ದಶಕಗಳಿಂದ ಮಠದ ಪೀಠಾಧಿಪತಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಮಲ್ಲಿಕಾರ್ಜುನ ಶ್ರೀಗಳು ದಕ್ಷಿಣ ಕೊಡಗಿನಲ್ಲಿ ಎಸ್ ಎಂ ಎಸ್ ವಿದ್ಯಾಸಂಸ್ಥೆ ಯನ್ನು ತೆರೆಯುವ ಮೂಲಕ ಶಿಕ್ಷಣ ಸೇವೆಯಲ್ಲಿ, ಹೊಂಬೆಳಕು ಎಂಬ ಮಾಸಿಕ ತತ್ವ ಚಿಂತನಾಗೊಷ್ಠಿಯ ಮೂಲಕ ಶರಣರ ಸಂದೇಶಗಳನ್ನು ಸಾರುತ್ತಾ ಕೊಡಗು ಜಿಲ್ಲೆಯ ಸರ್ವ ಜನ ಸಮುದಾಯದ ಭಕ್ತಿ ಹಾಗೂ ಶ್ರದ್ದೆಯ ಪ್ರತೀಕವಾಗಿದ್ದು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಶ್ರೀಗಳ ಆಯ್ಕೆ ಸ್ವಾಗತಾರ್ಹ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶಿಸಿದರು.
ಜೂನ್ 23ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಅಯೋಜಿಸಿರುವ ಶರಣ ಸಾಹಿತ್ಯ ಸಮ್ಮೇಳನದ ರೂಪು ರೇಷೆಗಳ ಕುರಿತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ವಿವರಿಸಿದರು.
ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ಜರುಗುತ್ತಿರುವ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಬಗ್ಗೆ ಹಾಗು ಕೊಡಗು ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶರಣರ ವಿಚಾರ ಧಾರೆಗಳ ಕುರಿತ ಸ್ಮರಣ ಸಂಚಿಕೆ ಹೊರತರುವ ಬಗ್ಗೆ ಸಭೆ ತೀರ್ಮಾನಿಸಿತು.
ಶ್ರೀ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ಸಮ್ಮೇಳನ ಸಮಿತಿಯ ಪದಾಧಿಕಾರಿಗಳು ಕಳಂಚೇರಿ ಮಠಕ್ಕೆ ತೆರಳಿ ಶ್ರೀಗಳನ್ನು ಸಮ್ಮೇಳನಕ್ಕೆ ಆಹ್ವಾನಿಸುವ ಬಗ್ಗೆ ನಿರ್ಣಯಿಸಲಾಯಿತು.
ತೊರೆನೂರು ವಿರಕ್ತ ಮಠದ ಶ್ರೀ ಸದಾಶಿವ ಸ್ವಾಮೀಜಿ, ಸಮ್ಮೇಳನ ಸಮಿತಿಯ ಗೌರವ ಅಧ್ಯಕ್ಷರಾದ ಹೆಚ್.ವಿ.ಶಿವಪ್ಪ, ಆರ್ಥಿಕ ಸಮಿತಿ ಅಧ್ಯಕ್ಷ ಸಾಂಬಶಿವಯ್ಯ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಸ್.ನಂದೀಶ್, ಅಲಂಕಾರ ಸಮಿತಿ ಅಧ್ಯಕ್ಷೆ ಹೇಮಲತಾ, ಸತ್ಕಾರ ಸಮಿತಿ ಅಧ್ಯಕ್ಷ ಜಿ.ಬಿ.ಲೋಕೇಶ್, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧ್ಯಕ್ಷ ಕೆ.ಪಿ.ಪರಮೇಶ್, ಶಸಾಪ ಯುವ ಘಟಕದ ಜಿಲ್ಲಾ ಅಧ್ಯಕ್ಷ ಹಕ್ಕೆ ಮೋಹನ್, ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಸರೋಜಾ ಆರಾಧ್ಯ, ವೇದಶ್ರೀ ಶಿವರಾಜಪ್ಪ, ವೇದಶ್ರೀ ಮಲ್ಲಿಕಾರ್ಜುನ ಸ್ವಾಮಿ, ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಹೆಚ್.ಬಿ.ಚಂದ್ರಪ್ಪ, ಮೆರವಣಿಗೆ ಸಮಿತಿಯ ಟಿ.ಬಿ.ಜಗದೀಶ್, ಕೆ.ಎಸ್.ಕೃಷ್ಣೇಗೌಡ ಇದ್ದರು.