ಬಾಳುಗೋಡು ಕೊಡವ ಸಮಾಜ ಅಭಿವೃದ್ಧಿ ಕಾಮಗಾರಿ ವೀಕ್ಷಣೆ : ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಎಎಸ್ ಪೊನ್ನಣ್ಣ

ಬಾಳುಗೋಡು ಕೊಡವ ಸಮಾಜ ಅಭಿವೃದ್ಧಿ ಕಾಮಗಾರಿ ವೀಕ್ಷಣೆ : ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ: ಬಾಳುಗೋಡಿನಲ್ಲಿರುವ ಕೊಡವ ಸಮಾಜಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕೋರಿಕೆ ಮೇರೆಗೆ ಇಂದು ಭೇಟಿ ನೀಡಿದ ಶಾಸಕರು, ರಾಜ್ಯ ಸರಕಾರದ ಅನುದಾನದಲ್ಲಿ ನಡೆಯುತ್ತಿರುವ ಹಲವು ಅಭಿವೃದ್ಧಿ ಕೆಲಸಗಳ ವೀಕ್ಷಣೆ ಹಾಗೂ ಪರಿಶೀಲನೆ ಮಾಡಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ನಾನು ಶಾಸಕರಾಗಿ ಆಯ್ಕೆಯಾದ ಕೂಡಲೇ ಕೊಡವ ಸಮಾಜದ ಪದಾಧಿಕಾರಿಗಳು ಇಲ್ಲಿಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದ್ದರು. ಹಾಗಾಗಿ ತಾನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದುಳಿದ ವರ್ಗಗಳ ಇಲಾಖೆ ಅನುದಾನದಲ್ಲಿ, ಬಾಳುಗೋಡು ಕೊಡವ ಸಮಾಜದ ವಿವಿಧ ಅಭಿವೃದ್ಧಿ ಹಾಗೂ ನಿರ್ಮಾಣ ಕಾಮಗಾರಿಗಳಿಗೆ 6 ಕೋಟಿ ಮೊತ್ತ ಒದಗಿಸಲಾಗಿತ್ತು. ಇದರಲ್ಲಿ ಮೈದಾನಗಳ ಅಭಿವೃದ್ಧಿ, ಪ್ರೇಕ್ಷಕರ ಗ್ಯಾಲರಿ, ತಡೆಗೋಡೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿ ಒಳಗೊಂಡಿತ್ತು. ಇಂದು ಈ ಎಲ್ಲಾ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಕಾಮಗಾರಿಯ ಗುಣಮಟ್ಟ ತೃಪ್ತಿ ತಂದಿದೆ ಹಾಗೂ ಈ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು. 

ಕೊಡವ ಸಮಾಜದ ಪದಾಧಿಕಾರಿಗಳ ಮೇಲುಸ್ತುವಾರಿಯಲ್ಲಿ, ಸರ್ಕಾರ ನೀಡಿದ ಅನುದಾನದ ಸಂಪೂರ್ಣ ಸದ್ಬಳಕೆ ಆಗುತ್ತಿರುವುದನ್ನು ಮನಗಂಡು ಸಂತೋಷ ವ್ಯಕ್ತಪಡಿಸಿದ ಶಾಸಕರು, ಕ್ಷೇತ್ರದ ಎಲ್ಲರೂ ಈ ಕಾಮಗಾರಿಯಂತೆ ಎಲ್ಲಾ ಕಾಮಗಾರಿಗಳಲ್ಲೂ ಸರಕಾರದ ಅನುದಾನ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು. 

ಇಲ್ಲಿಯ ಹಾಕಿ ಮೈದಾನ ಅತ್ಯಂತ ಗುಣಮಟ್ಟದಲ್ಲಿದ್ದು, ಕೊಡಗಿನ ಕ್ರೀಡಾಪಟುಗಳ ಭವಿಷ್ಯಕ್ಕೆ ಇದು ಉತ್ತಮ ಕೊಡುಗೆಯಾಗಲಿದೆ ಎಂದು ಬಣ್ಣಿಸಿದರು.ಬಾಳುಗೋಡು ಕೊಡವ ಸಮಾಜ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕೋರಿಕೆಯಂತೆ, ಸದ್ರಿ ಕಾಮಗಾರಿಗಳ ಉದ್ಘಾಟನೆ ಶೀಘ್ರ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರನ್ನು ಕರೆತರಲು ಪ್ರಯತ್ನಿಸುವುದಾಗಿ ಶಾಸಕರು ಹೇಳಿದರು.

  ಬಳಿಕ ಮಾತನಾಡಿದ ಕೊಡುವ ಸಮಾಜದ ಅಧ್ಯಕ್ಷರಾದ ವಿಷ್ಣು ಕಾರ್ಯಪ್ಪ ರವರು, ಮಾನ್ಯ ಶಾಸಕರಾದ ಎ.ಎಸ್ ಪೊನ್ನಣ್ಣ ರವರು, ತಮ್ಮನ್ನು ಹಾಗೂ ಸಮಾಜದ ಪದಾಧಿಕಾರಿಗಳನ್ನು ಮುಖ್ಯಮಂತ್ರಿಗಳಿಗೆ ಕರೆದುಕೊಂಡು ಹೋಗಿ, ₹ 10 ಕೋಟಿ ಅನುದಾನ ಒದಗಿಸಿದ್ದನ್ನು ಸ್ಮರಿಸಿಕೊಂಡರು. ₹ 10 ಕೋಟಿ ಅನುದಾನದಲ್ಲಿ, ₹ 6 ಕೋಟಿ ಬಾಳಗೋಡು ಕೊಡುವ ಸಮಾಜದ ಅಭಿವೃದ್ಧಿಗೆ, ₹ 3 ಕೋಟಿ ಯನ್ನು 30 ಕೊಡವ ಸಮಾಜಗಳಿಗೆ ತಲಾ ₹ 10 ಲಕ್ಷದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ₹ 1 ಕೋಟಿ ಭಾಗಮಂಡಲ ಕೊಡವ ಸಮಾಜಕ್ಕೆ ಮೀಸಲಿರಿಸಲಾಗಿದೆ ಎಂದು ಹೇಳಿದರು. 

ಈ ಅನುದಾನಗಳಲ್ಲಿ ಭಾಗಮಂಡಲ ಕೊಡವ ಸಮಾಜದ ಕಾಮಗಾರಿ ಕೆಲವು ತಾಂತ್ರಿಕ ಕಾರಣಗಳಿಂದ ನಿಧಾನಗೊಂಡಿದ್ದು ಈಗ ಅದನ್ನೆಲ್ಲ ಪರಿಹರಿಸಿ ಕೂಡಲೇ ಆ ಕಾಮಗಾರಿ ಪೂರ್ಣಗೊಳ್ಳುವುದು ಎಂದು ಹೇಳಿದರು. ಇದೇ ನವಂಬರ್ 6-9 ರ ತನಕ ಕೊಡುವ ಹಾಕಿ ನಮ್ಮೆ ಈ ಮೈದಾನದಲ್ಲಿ ನಡೆಯಲಿದ್ದು ಇದರ ಸಮಾರೋಪಕ್ಕೆ ಮುಖ್ಯಮಂತ್ರಿಗಳನ್ನು ಕರೆಸುವಂತೆ ಶಾಸಕರಲ್ಲಿ ಮನವಿ ಮಾಡಿದ್ದು, ಮಾನ್ಯ ಮುಖ್ಯಮಂತ್ರಿಗಳು ಆಗಮಿಸಿದ್ದಲ್ಲಿ ಅದೇ ದಿನ ಎಲ್ಲಾ ಕಾಮಗಾರಿಗಳ ಉದ್ಘಾಟನೆಗೆ ತಾವು ಯೋಜನೆ ರೂಪಿಸಿಕೊಂಡಿರುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಹಾಗೂ ಈ ಅನುದಾನ ತರಲು ಸರ್ವ ಪ್ರಯತ್ನ ಮಾಡಿ ಸಹಕರಿಸಿದ ಮಾನ್ಯ ಶಾಸಕರಾದ ಎ.ಎಸ್ ಪೊನ್ನಣ್ಣ ರವರಿಗೆ ಕೊಡವ ಸಮಾಜ ಸಮಿತಿ ಹಾಗೂ ಕೊಡಗಿನ ಸರ್ವ ಜನತೆಯ ಪರವಾಗಿ ಧನ್ಯವಾದಗಳು ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಜ್ಜಿಕುಟ್ಟಿರ ಗಿರೀಶ್, ಮನು, ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದ ರು.