ಬೆಂಗಳೂರು:ಕೋಗಿಲು ಮನೆಗಳ ತೆರವು: ಸಂತ್ರಸ್ತರಿಗೆ 180 ಮನೆಗಳ ವಸತಿ ನೀಡಲು ಸರ್ಕಾರ ತೀರ್ಮಾನ

Dec 29, 2025 - 09:25
 0  447
ಬೆಂಗಳೂರು:ಕೋಗಿಲು ಮನೆಗಳ ತೆರವು: ಸಂತ್ರಸ್ತರಿಗೆ 180 ಮನೆಗಳ ವಸತಿ ನೀಡಲು ಸರ್ಕಾರ ತೀರ್ಮಾನ
Photo credit: TV09 (ಮನೆಗಳ ತೆರವು)

ಬೆಂಗಳೂರು, ಡಿ. 28: ನಗರದ ಕೋಗಿಲು ಲೇಔಟ್‌ನಲ್ಲಿ ನಡೆದ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ಬಳಿಕ ಸಂತ್ರಸ್ತರಿಗೆ ಪರ್ಯಾಯ ವಸತಿ ಒದಗಿಸುವ ಕುರಿತು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಬೈಯಪ್ಪನಹಳ್ಳಿ ಸಮೀಪದ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿರ್ಮಾಣಗೊಂಡ ಮನೆಗಳ ಪೈಕಿ 180 ಮನೆಗಳನ್ನು ಹಂಚಿಕೆ ಮಾಡಲು ಒಪ್ಪಿಗೆ ನೀಡಲಾಗಿದೆ.

ಈ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆಯಿದೆ. ಬೈಯಪ್ಪನಹಳ್ಳಿ ಬಳಿ ಒಟ್ಟು 1,200 ಮನೆಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ ಕೋಗಿಲು ಲೇಔಟ್ ತೆರವು ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡವರಿಗೆ 180 ಮನೆಗಳನ್ನು ನೀಡಲು ತೀರ್ಮಾನಿಸಲಾಗಿದೆ. ಮನೆಗಳ ನೋಂದಣಿಯನ್ನೂ ಸರ್ಕಾರವೇ ಮಾಡಿಕೊಡಲಿದೆ ಎಂದು ವಸತಿ ಇಲಾಖೆ ಮೂಲಗಳು ತಿಳಿಸಿವೆ. ಹೋರಾಟಗಾರರು 250 ಮನೆಗಳ ಬೇಡಿಕೆ ಮುಂದಿಟ್ಟಿದ್ದರೂ, ಪ್ರಸ್ತುತ ಹಂತದಲ್ಲಿ 180 ಮನೆಗಳಿಗೆ ಮಾತ್ರ ಅನುಮೋದನೆ ಸಿಕ್ಕಿದೆ.

ಕೋಗಿಲು ಲೇಔಟ್ ತೆರವು ಪ್ರಕರಣವು ಕರ್ನಾಟಕ–ಕೇರಳ ಸರ್ಕಾರಗಳ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕ ಸರ್ಕಾರದ ಕ್ರಮವನ್ನು ಟೀಕಿಸಿದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ಬೇಡ ಎಂದು ಹೇಳಿದ್ದಾರೆ.

ಇದರ ನಡುವೆಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದು, ಅದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0