ಬಿಳಿಗೇರಿ:ಬಕ್ಕಬಾಣೆ ಗ್ರಾಮದಲ್ಲಿ ಹೊಳೆಗೆ ಬಿದ್ದು ಜಾನುವಾರು ಸಾವು!

ಬಿಳಿಗೇರಿ:ಬಕ್ಕಬಾಣೆ ಗ್ರಾಮದಲ್ಲಿ ಹೊಳೆಗೆ ಬಿದ್ದು ಜಾನುವಾರು ಸಾವು!

ಮಡಿಕೇರಿ: ಮೇಕೇರಿ ಗ್ರಾ.ಪಂ ವ್ಯಾಪ್ತಿಯ ಬಿಳಿಗೇರಿಯ ಬಕ್ಕಬಾಣೆ ಎಂಬ ಗ್ರಾಮದಲ್ಲಿ ಜಾನುವಾರೊಂದು ಗ್ರಾಮಸ್ಥರು ಕುಡಿಯಲು ಬಳಕೆ ಮಾಡುವ ನೀರಿನ‌ ಹೊಳೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಜಾನುವಾರು ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಸರಿಸುಮಾರು ಈ ಭಾಗದ 100-130 ಮನೆಗಳಿಗೆ ಇದೇ ನೀರು ಸರಬರಾಜು ಆಗುತ್ತಿದೆ. ಜಲಜೀವನ್ ಮಿಷನ್ ಯೋಜನೆ ಈ ಭಾಗಕ್ಕೆ ಇನ್ನೂ ಕೂಡ ದೊರೆಯದೇ ಇರುವುದು ಬೇಸರದ ಸಂಗತಿ. ಮೇಕೇರಿ ಗ್ರಾ.ಪಂ ಗೊಳಪಡುವ ಈ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಕಳಪೆ ಕಾಮಗಾರಿಯಾಗಿದ್ದರೂ ಕೂಡ ಕ್ಲಿಯರೆನ್ಸ್ ಕೊಟ್ಟಿದ್ದಾರೆ. ಸ್ಥಳೀಯ ಗ್ರಾ.ಪಂ ಸದಸ್ಯರು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ನೀರಿನ ಸೇವನೆಯಿಂದ ಗ್ರಾಮಸ್ಥರಿಗೆ,‌ಮಕ್ಕಳಿಗೆ ಅನಾಹುತ ಸಂಭವಿಸಿದ್ದಲ್ಲಿ ಜಿಲ್ಲಾಡಳಿತವೇ ನೇರ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಇಒ ಕಚೇರಿ ಮುತ್ತಿಗೆ ಹಾಕುವ ಬಗ್ಗೆ ಎಚ್ಚರಿಕೆ ನೀಡಿದ ಗ್ರಾಮಸ್ಥರು!:

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಿಇಒ ಕಚೇರಿಗೆ ಜಾನುವಾರು ಶವದ ಸಮೇತ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಕಳಪೆಯಿಂದ ಕೂಡಿದ ಜೆಜೆಎಂ ಕಾಮಗಾರಿ! ಆದ್ರೂ ಸಿಕ್ತು ಕ್ಲಿಯರೆನ್ಸ್ ಸರ್ಟಿಫಿಕೇಟ್!:

ಜೆಜೆಎಂ‌ ಕಾಮಗಾರಿ ಕಳಪೆಯಿಂದ ಕೂಡಿ ನೀರು ಸರಬರಾಜು ಆಗದಿದ್ದರೂ ಕೂಡ ಮೇಕೇರಿ ಗ್ರಾ.ಪಂ ಆಗಿನ ಅಭಿವೃದ್ಧಿ ಅಧಿಕಾರಿ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಟ್ಟಿರೋದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸೂಕ್ತ ತನಿಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕವಿದ್ರೂ ಸರಬರಾಜು ಆಗದ ನೀರು!:

ಇನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ ಮಾಡಲಾಗಿದ್ದರೂ ಕೂಡ ಅದಕ್ಕೆ ನೀರು ಸರಬರಾಜದೆ ಹಾಗೆಯೇ ಉಳಿದು ಹೋಗಿದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ. ಕಿಮ್ಮತ್ತಿನ ಬೆಲೆ ಕೊಡದ ಅಧಿಕಾರಿಗಳು! ಈ ಬಗ್ಗೆ ಮೇಕೇರಿ ಗ್ರಾ.ಪಂ ಈ ವ್ಯಾಪ್ತಿಗೊಳಪಡುವ ಸದಸ್ಯರಾದ ಅಬ್ದುಲ್ ಖಾದರ್ ಅವರು ಖುದ್ದಾಗಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಹಾಕತ್ತೂರು ಗ್ರಾ.ಪಂ ಗೆ ಭೇಟಿ ನೀಡಿದ ಸಂದರ್ಭ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನಕ್ಕೆ ತರಲಾಗಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವು ವ್ಯಕ್ತವಾಗಿದೆ.