ಬದುಕಿದ್ದಾಗ ತುತ್ತೂ ಕೊಡದ ಮಕ್ಕಳು, ತಾಯಿಯ ಮೃತದೇಹಕ್ಕಾಗಿ ಕಿತ್ತಾಡಿದರು

ಬದುಕಿದ್ದಾಗ ತುತ್ತೂ ಕೊಡದ ಮಕ್ಕಳು, ತಾಯಿಯ ಮೃತದೇಹಕ್ಕಾಗಿ ಕಿತ್ತಾಡಿದರು
Photo credit: TV09

ಹಾಸನ, ನ. 02: ತಾಯಿ ಬದುಕಿದ್ದಾಗ ಒಂದು ತುತ್ತೂ ಕೊಡದೆ ನಿರ್ಲಕ್ಷಿಸಿದ್ದ ಮಕ್ಕಳು, ಆಕೆ ಸತ್ತ ನಂತರ ಶವಕ್ಕಾಗಿ ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಾತೃಭೂಮಿ ವೃದ್ಧಾಶ್ರಮದಲ್ಲಿ ನಡೆದಿದೆ.

ಆಲೂರು ತಾಲ್ಲೂಕಿನ ಕವಳಿಕೆರೆ ಗ್ರಾಮದ ಪಾರ್ವತಮ್ಮ (80) ಮೃತಪಟ್ಟ ವೃದ್ಧೆ. ಐವರು ಮಕ್ಕಳಿದ್ದರೂ ತಾಯಿಗೆ ಬದುಕಿದ್ದಾಗ ಯಾರೂ ಸಹಾಯದ ಕೈ ಚಾಚದ ಕಾರಣದಿಂದ ಪಾರ್ವತಮ್ಮ ವೃದ್ಧಾಶ್ರಮದಲ್ಲಿದ್ದರು. ಆದರೆ, ಶನಿವಾರ ಅವರು ಅಸ್ವಸ್ಥಗೊಂಡು ಮೃತಪಟ್ಟ ನಂತರ ಶವ ಯಾರಿಗೆ ಸಿಗಬೇಕು ಎಂಬುದರ ಕುರಿತಾಗಿ ಮಕ್ಕಳು ಪರಸ್ಪರ ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಕ್ಕಳಾದ ಮಂಜೇಗೌಡ, ರಾಮಸ್ವಾಮಿ, ಜಯಮ್ಮ, ಭಾಗ್ಯ ಮತ್ತು ಇಂದ್ರ ಇವರು ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಟ್ಟಿದ್ದರೂ, ಆಕೆಯ ಶವಕ್ಕಾಗಿ ಕಿತ್ತಾಡಿದರು ಎಂದು ತಿಳಿದು ಬಂದಿದೆ. 

ಪಾರ್ವತಮ್ಮ ಅವರನ್ನು ವೃದ್ಧಾಶ್ರಮದ ಸಿಬ್ಬಂದಿ ಹಲವು ವರ್ಷಗಳಿಂದ ನೋಡಿಕೊಳ್ಳುತ್ತಿದ್ದರು. ಸಾವಿನ ನಂತರ ಶವವನ್ನು ಯಾರಿಗೆ ಹಸ್ತಾಂತರಿಸಬೇಕು ಎಂಬ ವಿಚಾರದಲ್ಲಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಮಧ್ಯಸ್ಥಿಕೆ ವಹಿಸಿ ಶವ ಹಸ್ತಾಂತರಿಸಿದರು.