ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಪ್ರಮುಖರಿಂದ ಸಿದ್ದರಾಮಯ್ಯ ಅವರ ಭೇಟಿ;ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

Jun 12, 2026 - 21:11
 0  645
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಪ್ರಮುಖರಿಂದ ಸಿದ್ದರಾಮಯ್ಯ ಅವರ ಭೇಟಿ;ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಬೆಂಗಳೂರು, ಜೂ. 12: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಪ್ರಮುಖರ ನಿಯೋಗವೊಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರದಂದು ಬೆಂಗಳೂರಿನಲ್ಲಿ ಭೇಟಿ ಮಾಡಿತು. ಮೂರು ವರ್ಷಗಳ ಕಾಲ ರಾಜ್ಯದ ಆಡಳಿತವನ್ನು ಸಮರ್ಥವಾಗಿ ಮುನ್ನಡೆಸಿದ್ದಕ್ಕಾಗಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದ ಈ ನಿಯೋಗ ಕೆಲವು ಬೇಡಿಕೆಗಳನ್ನು ಅವರ ಮುಂದಿರಿಸಿತು.

ಪೊನ್ನಂಪೇಟೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷರು ಮತ್ತು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷರಾದ ಆಲೀರ ಎಂ. ರಶೀದ್ ನೇತೃತ್ವದ ಈ ನಿಯೋಗವು, ಮುಂದಿನ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ವಿರಾಜಪೇಟೆ ಶಾಸಕರಾದ ಎ. ಎಸ್. ಪೊನ್ನಣ್ಣ ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ಸಂಬಂಧಿಸಿದವರಿಗೆ ಸೂಕ್ತ ಶಿಫಾರಸು ಮಾಡಬೇಕು ಎಂದು ಬಲವಾಗಿ ಆಗ್ರಹಿಸಿತು. ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸಂಘಟಿಸಲು ಸಚಿವ ಸಂಪುಟದಲ್ಲಿ ಕೊಡಗಿಗೆ ಪ್ರಾತಿನಿತ್ಯ ಅತ್ಯಗತ್ಯ ಎಂದು ನಿಯೋಗದ ಪ್ರಮುಖರು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಗಮನ ಸೆಳೆದರು.

ಕಳೆದ ಹಲವು ದಶಕಗಳಿಂದ ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿರುವ ಜಿಲ್ಲೆಯ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರಿಗೆ ರಾಜ್ಯಮಟ್ಟದಲ್ಲಿ ಸೂಕ್ತ ರಾಜಕೀಯ ಸ್ಥಾನಮಾನಗಳನ್ನು ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ನಿಯೋಗ ಸಿದ್ದರಾಮಯ್ಯ ಅವರಲ್ಲಿ ಮತ್ತೊಂದು ಬೇಡಿಕೆ ಮುಂದಿಟ್ಟಿತು. ನಿಯೋಗದ ಎಲ್ಲಾ ಬೇಡಿಕೆಗಳನ್ನು ತಾಳ್ಮೆಯಿಂದ ಆಲಿಸಿದ ಸಿದ್ದರಾಮಯ್ಯ ಅವರು ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ಆಲೀರ ಎಂ. ರಶೀದ್ ತಿಳಿಸಿದ್ದಾರೆ.

ನಿಯೋಗದಲ್ಲಿ ಕೆದಮುಳ್ಳೂರು ಗ್ರಾ. ಪಂ. ಮಾಜಿ ಸದಸ್ಯರಾದ ಎಂ. ಎಂ. ಇಸ್ಮಾಯಿಲ್, ಡಿಸಿಸಿ ಸದಸ್ಯರು ಮತ್ತು ಹಾಲುಗುಂದ ಗ್ರಾ. ಪಂ. ಮಾಜಿ ಸದಸ್ಯರಾದ ಕೆ ಎ ಅಬ್ದುಲ್ ರಹಿಮಾನ್ (ಅಂದಾಯಿ), ನರಿಯಂದಡ ಗ್ರಾ. ಪಂ. ಮಾಜಿ ಸದಸ್ಯರಾದ ಕಡಂಗದ ಸಿ. ಇ. ಜ್ಹುಬೈರ್, ಎಡಪಾಲದ ಕೆ. ಇ. ಮೊಹಮ್ಮದ್, ಕುಂಜಿಲ ಗ್ರಾ. ಪಂ. ಮಾಜಿ ಸದಸ್ಯರಾದ ಕುಂಡಂಡ ರಜ್ಹಾಕ್, ಮಡಿಕೇರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಚೆರಿಯಪರಂಬುವಿನ ಪರವಂಡ ಎ. ಸಿರಾಜ್ ಮೊದಲಾದವರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0