ಬೇಳೂರು ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ: ಆಡಳಿತ ಮಂಡಳಿ ಯಾವುದೇ ತನಿಖೆಗೂ ಸಿದ್ದ: ಗ್ರಾಮ ಅಧ್ಯಕ್ಷೆ ಪಿ.ಎಂ.ಪಾರ್ವತಿ
ಸೋಮವಾರಪೇಟೆ:ಬೇಳೂರು ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್‌ನವರ ಆರೋಪದಲ್ಲಿ ಹುರುಳಿಲ್ಲ. ಆಡಳಿತ ಮಂಡಳಿ ಯಾವುದೇ ತನಿಖೆಗೂ ಸಿದ್ದವಿದೆ ಎಂದು ಹಾಲಿ ಅಧ್ಯಕ್ಷೆ ಪಿ.ಎಂ.ಪಾರ್ವತಿ ಸ್ಪಷ್ಟಪಡಿಸಿದ್ದಾರೆ.
12,47,679 ರೂ,ಗಳಷ್ಟು ಹಣದಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಲಾಗಿದೆ. ಒಂದಷ್ಟು ಹಣವನ್ನು ಪಂಚಾಯಿತಿಯ ಅಭಿವೃದ್ಧಿ ಕಾಮಾಗಾರಿಗಳಿಗೆ ವಿನಿಯೋಗಿಸಲಾಗಿದೆ. ಅಡಿಟ್ ಸಂದರ್ಭದಲ್ಲಿ ಬಿಲ್‌ಗಳ ವ್ಯತ್ಯಾಸಕ್ಕೆ ಪಂಚಾಯ್ತಿಯ ಅಂದಿನ ಕಾರ್ಯದರ್ಶಿ ಸುರೇಶ್ ಮತ್ತು ಲೆಕ್ಕಾಧಿಕಾರಿ ಶರಣಪ್ಪ ಹೊಣೆಗಾರರಾಗಿದ್ದಾರೆ. ಈಗ ಇಬ್ಬರೂ ಅಧಿಕಾರಿಗಳು ವರ್ಗಾವಣೆಗೊಂಡಿದ್ದು, ಆಡಳಿತ ಮಂಡಳಿಯವರ ಪ್ರಶ್ನೆಗೆ ಉತ್ತರಿಸುತ್ತಿಲ್ಲ ಎಂದು ಈಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಂಚಾಯಿತಿಯಲ್ಲಿ ಅಡಿಟ್ ನಡೆದ ಸಂದರ್ಭ ಪಿಡಿಒ ಹಾಗೂ ಲೆಕ್ಕಾಧಿಕಾರಿಯಿಂದ ತಪ್ಪಾಗಿರುವುದು ನಮ್ಮ ಗಮನಕ್ಕೆ ಬಂದಿದ್ದು, ಆ ಸಮಯದಲ್ಲೇ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಪಂಚಾಯಿತಿ ಆಡಳಿತ ಮಂಡಳಿ ವತಿಯಿಂದ ಲಿಖಿತ ದೂರು ನೀಡಲಾಗಿದೆ. ತನಿಖೆಯ ವಿವರ ನಮಗೆ ಸಿಕ್ಕಿಲ್ಲ ಎಂದು ಹೇಳಿದರು.
ಪಂಚಾಯಿತಿಯಲ್ಲಿ ನಡೆದಿರುವ ಹಣಕಾಸಿನ ವ್ಯತ್ಯಾಸಗಳಿಗೆ ಪಿಡಿಒ ಕಾರಣಕರ್ತರಾಗಿದ್ದಾರೆ ಎಂದು ಮಾಜಿ ಅಧ್ಯಕ್ಷ ಪ್ರಶಾಂತ್ ದೂರಿದರು. ಪಂಚಾಯಿತಿ ಚೆಕ್‌ಗಳಿಗೆ ಪಿಡಿಒ ಸೇರಿದಂತೆ ಅಧ್ಯಕ್ಷರಾದ ನೀವು ಸಹಿ ಹಾಕಿದ್ದಿರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ಅವರು, ಅಪಘಾತಕ್ಕೆ ತುತ್ತಾಗಿದ್ದ ಸಂದರ್ಭ 7 ತಿಂಗಳು ಚಿಕಿತ್ಸೆಯಲ್ಲಿದ್ದೆ. ಆ ಸಂದರ್ಭ ಎಲ್ಲವನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಗೋಷ್ಠಿಯಲ್ಲಿ ಪಂಚಾಯತಿ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಪಿ.ಸುದರ್ಶನ್, ಎ.ಎಸ್.ಯೋಗೇಂದ್ರ, ಕೆ.ಭಾಸ್ಕರ್ ಇದ್ದರು.