ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ;ವಿರಾಜಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ‌ ಸಂಭ್ರಮಾಚರಣೆ

ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ;ವಿರಾಜಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ‌ ಸಂಭ್ರಮಾಚರಣೆ

ವಿರಾಜಪೇಟೆ:ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಲೋಕಭವನದಲ್ಲಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ ಐತಿಹಾಸಿಕ ಕ್ಷಣದ ಹಿನ್ನೆಲೆಯಲ್ಲಿ ವಿರಾಜಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಸಂಭ್ರಮಾಚರಣೆ ಮಾಡಲಾಯಿತು.

   ವಿರಾಜಪೇಟೆ ಬ್ಲಾಕ್ ಕಾಂಗ್ರೇಸ್ ಹಾಗೂ ನಗರ ಕಾಂಗ್ರೇಸ್ ಸಮಿತಿ ವತಿಯಿಂದ ವಿರಾಜಪೇಟೆಯ ಗಡಿಯಾರ ಕಂಬದ ಬಳಿ ನಗರ ಕಾಂಗ್ರೇಸ್ ಅಧ್ಯಕ್ಷ ಮಾಳೇಟಿರ ಬೋಪಣ್ಣ ಅವರ ನೇತೃತ್ವದಲ್ಲಿ ಡಿ.ಕೆ ಶಿವಕುಮಾರ್ ಪರವಾಗಿ ಘೋಷಣೆಗಳನ್ನು ಕೂಗಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

  ಈ ಸಂದರ್ಭ ಮಾತನಾಡಿದ ಕಾಂಗ್ರೇಸ್ಸಿನ ಹಿರಿಯ ಮುಖಂಡ ಪೋರೆರ ಎಂ ಬಿದ್ದಪ್ಪ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಅಧಿಕಾರದ ದಾಹವಿಲ್ಲದೆ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್‌ರವರಿಗೆ ನೀಡಿದ್ದು ಇದು ಎಲ್ಲರಿಗೂ ಮಾದರಿಯಾದ ನಡೆಯಾಗಿದೆ. ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರವು ಹೆಚ್ಚಿನ ಜನಪರ ಕಾರ್ಯವನ್ನು ಮಾಡಲಿ. ಡಿ,ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೇಸ್ ಸರಕಾರ ರಾಜ್ಯಕ್ಕೆ ಉತ್ತಮವಾದ ಆಡಳಿತ ನೀಡಲಿದೆ. ಕಳೆದ 20 ವರ್ಷಗಳಿಂದ ನಮ್ಮ ಕೊಡಗಿನಲ್ಲಿ ಕಾಂಗ್ರೇಸ್ ಆಡಳಿತ ಇರಲಿಲ್ಲ. ಇದೀಗ ಕಾಂಗ್ರೇಸ್‌ನ ಶಾಸಕರಿದ್ದು ರಾಜ್ಯದಲ್ಲಿಯೂ ಕಾಂಗ್ರೇಸ್ ಸರಕಾರವಿದ್ದು ಜನಪರವಾದ ಕೆಲಸ ಮಾಡುತ್ತಾ ಉತ್ತಮ ಆಡಳಿತ ನಡೆಸುತ್ತಿದೆ. ನಮ್ಮ ಶಾಸಕ ಪೊನ್ನಣ್ಣ ಅವರು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿ ರಾಷ್ಟçಮಟ್ಟದಲ್ಲಿಯೇ ಹೆಸರುಗಳಿಸಿದವರಾಗಿದ್ದು, ನೂತನ ಸರಕಾರದಲ್ಲಿ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಒಕ್ಕೂರಲಿನ ಆಗ್ರಹವಾಗಿದೆ ಎಂದರು.

   ನಗರ ಕಾಂಗ್ರೇಸ್ ನೂತನ ಅಧ್ಯಕ್ಷ ಮಾಳೇಟಿರ ಬೋಪಣ್ಣ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವುದು ಕಾರ್ಯಕರ್ತರಿಗೆ ಸಂತಸ ತಂದಿದೆ. ಇದರೊಂದಿಗೆ ಅಧಿಕಾರ ಹಸ್ತಾಂತರದ ಸಂದರ್ಭ ಸಿದ್ದರಾಮಯ್ಯ ಅವರ ನಡೆ ದೇಶಕ್ಕೆ ಮಾದರಿಯಾಗಿದ್ದು ಈ ಹಿಂದೆ ಮುಖ್ಯಮಂತ್ರಿಗಳು ಬದಲಾದಾಗ ಹಲವು ರೀತಿಯ ಗೊಂದಲಗಳನ್ನು ನಾವು ನೋಡಿದ್ದೇವೆ. ಸಿದ್ದರಾಮಯ್ಯನವರು ಯಾವುದೇ ಕಪುö್ಪ ಚುಕ್ಕೆ ಇಲ್ಲದೆ ಅಧಿಕಾರವನ್ನು ಹಸ್ತಾಂತರಿಸಿ ಪಕ್ಷ ನಿಷ್ಠೆ ಮೆರೆದಿದ್ದಾರೆ. ಕೊಡಗಿನ ಸರ್ವತೋಮುಖ ಅಭಿವೃದ್ದಿಯಾಗಬೇಕಾದರೆ ಶಾಸಕ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು. ಸಚಿವ ಸ್ಥಾನ ನೀಡುವ ಮೂಲಕ ಅಭಿವೃದ್ದಿ ಪಥದತ್ತ ಹೆಜ್ಜೆ ಹಾಕಲು ನೂತನ ಮುಖ್ಯಮಂತ್ರಿಗಳು ನಾಂದಿಯಾಡಬೇಕು ಎಂದರು.

   ಹಿರಿಯ ಕಾಂಗ್ರೇಸ್ ಮುಖಂಡರಾದ ಮಾದಂಡ ಎಸ್ ಪೂವಯ್ಯ ಮಾತನಾಡಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿರುವುದು ದೇಶಕ್ಕೆ ಮಾದರಿ ನಡೆ. ಸಾಮಾನ್ಯ ಸ್ಥರದ ಕಾರ್ಯಕರ್ತರು ಮುಖ್ಯಮಂತ್ರಿ ಆಗಬಹುದೆಂಬುದನ್ನು ಇವರು ತೋರಿಸಿದ್ದು ಇನ್ನು ಮುಂದೆ ಶಿವಕುಮಾರ್ ನೇತೃತ್ವದ ಸರ್ಕಾರ ಉತ್ತಮ ರೀತಿಯ ಆಡಳಿತವನ್ನು ನೀಡಿ ದೇಶಕ್ಕೆ ಮಾದರಿಯಾದ ಸರ್ಕಾರವಾಗಲಿ ಎಂದರು.

  ಪುರಸಭೆಯ ಮಾಜಿ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಅಂಟಿಕೊಳ್ಳದೆ ನಾಜೂಕಾಗಿ ಕಿರಿಯರನ್ನು ಬೆಳೆಸುವ ಮನೋಭಾವದಿಂದ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಅಧಿಕಾರವನ್ನು ವಹಿಸಿಕೊಂಡು ಉತ್ತಮ ಯಶಸ್ವಿ ಬಡವರ ಧ್ವನಿಯಾಗಿ ಯಶಸ್ವಿಯಾಗಿ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುತ್ತಾರೆ ಎಂಬ ಭರವಸೆ ಇದೆ. ಜೊತೆಗೆ ಶಾಸಕ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.

 ವಿರಾಜಪೇಟೆ ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಕಾಳಮಂಡ ನಯನ ಜಗತ್ ಮಾತನಾಡಿದರು.

   ಇದೇ ಸಂದರ್ಭ ಕಾಂಗ್ರೇಸ್ ಕಾರ್ಯಕರ್ತರೆಲ್ಲರೂ ಶಾಸಕ ಪೊನ್ನಣ್ಣ ಅವರಿಗೆ ನೂತನ ಸರಕಾರದಲ್ಲಿ ಸಚಿವ ಸ್ಥಾನ ನೀಡಲೇಬೇಕೆಂದು ಒಕ್ಕೂರಲಿನಿಂದ ಆಗ್ರಹ ವ್ಯಕ್ತಪಡಿಸಿದರು.

ನಗರ ಕಾಂಗ್ರೇಸ್ ಆದ್ಯಕ್ಷರಾಗಿ ಆಯ್ಕೆಯಾಗಿರುವ ಮಾಳೇಟಿರ ಬೋಪಣ್ಣ ಅವರಿಗೆ ಕಾಂಗ್ರೇಸ್ ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

  ಸಂಭ್ರಮಾಚರಣೆ ವೇಳೆ ನಗರ ಕಾಂಗ್ರೇಸ್ ಉಪಾಧ್ಯಕ್ಷ ಶಾಹುಲ್ ಹಮೀದ್, ಕಾರ್ಯದರ್ಶಿ ಶಶಿಧರನ್, ದಿನೇಶ್ ನಂಬಿಯಾರ್, ಜಿ.ಜಿ. ಮೋಹನ್, ಮಹದೇವ್, ಕಾಳಮಂಡ ಜಗತ್, ಆಥೀಫ್ ಮನ್ನಾ, ಕೊಡಗು ಜಿಲ್ಲಾ ಮಹಿಳಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ವಿನಿತಾ ಕಾವೇರಮ್ಮ, ಎ.ವಿ. ಮಂಜುನಾಥ್, ಮೆಲ್ರಾಯ್ ಲೋಬೋ, ಸತೀಶ್ ಕುಮಾರ್, ಶಭರಿಶ್ ಶೆಟ್ಟಿ, ನಯಾಝ್, ಆಯುಬ್, ಸೋಮಣ್ಣ, ರಜನಿಕಾಂತ್, ಚಿಲ್ಲವಂಡ ಕಾವೇರಪ್ಪ, ಸಂತೋಸ್, ಅಬ್ದುಲ್ ಜಲೀಲ್, ಸಿ.ಕೆ. ಪ್ರಥ್ವಿನಾಥ್, ಇಸ್ಮಾಯಿಲ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದು ಜೈ ಕಾರ ಹಾಕಿ ಸಂಭ್ರಮಾಚರಣೆ ಮಾಡಿದರು.