ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಮತ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಡಿವೈಎಫ್ಐ ಪ್ರತಿಭಟನೆ

ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಮತ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಡಿವೈಎಫ್ಐ ಪ್ರತಿಭಟನೆ

ವಿರಾಜಪೇಟೆ: ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಮತ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘ ಮತ್ತು ಡಿವೈಎಫ್‌ಐ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆಯ ಗಡಿಯಾರ ಕಂಬ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

   ಪ್ರಸ್ತುತ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಜನಸಾಮಾನ್ಯರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರದ ಏರಿಕೆಯು ಸಾರಿಗೆ ವೆಚ್ಚವನ್ನು ಹೆಚ್ಚಿಸಿದ್ದು, ಇದು ನೇರವಾಗಿ ದಿನಬಳಕೆ ವಸ್ತುಗಳು ಮತ್ತು ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಅಡುಗೆ ಅನಿಲದ ಬೆಲೆಯಲ್ಲಿನ ಅತಿಯಾದ ಏರಿಕೆಯು ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳ ಬಜೆಟ್ ಅನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಮತ್ತು ಯುದ್ಧದಂತಹ ಕಾರಣಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರವು ಬೆಲೆಯನ್ನು ಏರಿಸುತ್ತಿದ್ದು, ಹಿಂದಿನ ಸರಕಾರಗಳ ಕಾಲದ ಬೆಲೆಗಳಿಗೆ ಹೋಲಿಸಿದರೆ ಈಗಿನ ಸ್ಥಿತಿ ಜನಸಾಮಾನ್ಯರಿಗೆ ಅತ್ಯಂತ ಹೊರೆಯಾಗಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

   ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ರಾಜ್ಯದ ಕಾಂಗ್ರೆಸ್ ನಾಯಕರು ಮತ್ತು ಶಾಸಕರು ಸೇರಿದಂತೆ ಹಲವರು, ಜನರ ಕಷ್ಟಗಳನ್ನು ಆಲಿಸುವ ಬದಲು ಹೊಸ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಅಧಿಕಾರದ ಕುರ್ಚಿಗಳಿಗಾಗಿ ನಡೆಯುತ್ತಿರುವ ಈ ಆಂತರಿಕ ಕಚ್ಚಾಟದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಮರೆತಿರುವುದು ಅತ್ಯಂತ ಖೇದಕರ. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಕೇವಲ ಅಧಿಕಾರಕ್ಕಾಗಿ ಕಿತ್ತಾಡುವ ಇಂತಹ ರಾಜಕೀಯ ಧೋರಣೆಗಳನ್ನು ಸಾರ್ವಜನಿಕರು ಪ್ರಶ್ನಿಸಬೇಕಿದೆ. ಕೂಡಲೇ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಬೇಕೆಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

   ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪಿ.ಆರ್. ಭರತ್, ಕೇಂದ್ರ ಸರಕಾರ ನಿರಂತರವಾಗಿ ಹೆಚ್ಚಿಸುತ್ತಿರುವ ಅಡುಗೆ ಅನಿಲ ಹಾಗೂ ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೆ ಏರಿದ್ದು ಜನ ಸಾಮಾನ್ಯರು ತೊಂದರೆಗೆ ಒಳಗಾಗಿದ್ದರೆ, ಅಸ್ಸಾಂ, ತಮಿಳುನಾಡು ಕೇರಳದಲ್ಲಿ ಚುನಾವಣೆ ಸಂಧರ್ಭದಲ್ಲಿ ತೈಲ ಬೆಲೆ ಏರಿಕೆ ಮಾಡದೇ ಚುನಾವಣೆ ನಂತರ ಬೆಲೆ ಏರಿಕೆ ಮಾಡಿದ್ದಾರೆ, ಅಡುಗೆ ಅನಿಲ 1000 ಹಾಗೂ ವಾಣಿಜ್ಯ ಅಡುಗೆ ಅನಿಲ ಬೆಲೆ 3000 ಆಗಿದ್ದು ಹೆಚ್ಚಳ ಹಿನ್ನೆಲೆ ನಗರದಲ್ಲಿ ಹಲವು ಹೊಟೇಲ್‌ಗಳು ಬಂದ್ ಆಗಿದೆ, 40 ರೂಪಾಯಿ ಇದ್ದ ದೋಸೆ 80 ಆಗಿದೆ, 50 ಇದ್ದ ಊಟಕ್ಕೆ 100 ರೂಪಾಯಿ ಆಗಿದೆ, ಈ ರೀತಿ ಆದರೆ ಜನ ಸಾಮಾನ್ಯರು ಜೀವನ ಸಾಗಿಸುವುದು ಅತ್ಯಂತ ಕಷ್ಟಕರವಾಗಿದೆ, ಅಮೇರಿಕಾದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪ್ರದಾನಿ, ಅವರು ಹೇಳಿದಂತೆ ನಡೆಯುತ್ತಿದ್ದಾರೆ, ಅದಾನಿ ಅಂಬಾನಿ ಅಂತಹವರಿಗೆ ಲಾಭದಾಯಕವಾಗಿದೆ ಎಂದು ಹೇಳಿದರು.

   ಈ ಪ್ರತಿಭಟನೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘದ ರಾಜ್ಯ ಸಮಿತಿ ಸದಸ್ಯೆ ಹಾಗೂ ಜಿಲ್ಲಾ ಸಂಚಾಲಕ ಸಮಿತಿ ಸದಸ್ಯೆ ಪದ್ಮಿನಿ ಶ್ರೀಧರ್, ಡಿವೈಎಫ್‌ಐ ಕೊಡಗು ಜಿಲ್ಲಾ ಖಜಾಂಜಿ ಸಾಧಿಕ್ ಎ.ಎಚ್., ಸಿಐಟಿಯು ಜಿಲ್ಲಾ ಸಮಿತಿ ಸದಸ್ಯರಾದ ಕೆ.ಎಸ್. ರಮೇಶ್, ಖಾಸಿಂ, ಆದಿವಾಸಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಿ.ಕೆ. ರಮೇಶ್, ಅಧ್ಯಕ್ಷರಾದ ಜಿ.ಆರ್. ಪ್ರೇಮ, ಖಜಾಂಜಿ ಭಾಗ್ಯ ಚಂಗಪ್ಪ, ಜಿಲ್ಲಾ ಮುಖಂಡರಾದ ಪುಷ್ಪ, ರವಿ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.