ಬೆಂಗಳೂರಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್‌ ಸಾವು: ಪೊಲೀಸರ ವಿರುದ್ಧ ಕೊಲೆ ಪ್ರಕರಣ, ತನಿಖೆ ಸಿಐಡಿಗೆ

Nov 28, 2025 - 22:12
 0  1.7k
ಬೆಂಗಳೂರಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್‌ ಸಾವು: ಪೊಲೀಸರ ವಿರುದ್ಧ ಕೊಲೆ ಪ್ರಕರಣ, ತನಿಖೆ ಸಿಐಡಿಗೆ
Photo credit: TV09 (ಫೋಟೋ: ಮೃತ ದರ್ಶನ್)

ಬೆಂಗಳೂರು, ನ. 28: ದುಶ್ಚಟ ವಿಮುಕ್ತಿ ಕೇಂದ್ರದಲ್ಲಿ ಯುವಕನ ಅಸಹಜ ಸಾವು ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣ ಈಗ ಪೊಲೀಸರ ಮೇಲೆ ಶಂಕೆ ಮೂಡಿಸಿದೆ.

ವಿವೇಕನಗರದ ಸೊಣ್ಣೆನಹಳ್ಳಿ ಮೂಲದ 23 ವರ್ಷದ ದರ್ಶನ್‌ ಅಕ್ರಮ ಬಂಧನ, ಹಲ್ಲೆ ಹಾಗೂ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿವೇಕನಗರ ಠಾಣೆಯ ನಾಲ್ವರು ಪೊಲೀಸರ ವಿರುದ್ಧ ಕೊಲೆ ಹಾಗೂ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ.

ನವೆಂಬರ್ 12ರಂದು ದರ್ಶನ್‌ ರನ್ನು ಬಂಧಿಸಿದ ಪೊಲೀಸರು, ಸುಮಾರು ಮೂರು ದಿನ ಠಾಣೆಯಲ್ಲೇ ವಶದಲ್ಲಿಟ್ಟು ಲಾಠಿ, ಪೈಪಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೋಷಕರು ದೂರಿದ್ದಾರೆ. ನಂತರ ಹಲ್ಲೆಯ ಸುಳಿವನ್ನು ಮರೆಮಾಚಲು ಯೂನಿಟಿ ರಿಹ್ಯಾಬ್ ಸೆಂಟರ್‌ಗೆ ಸೇರಿಸಿದ್ದರೂ, ಅಲ್ಲಿ ಕೂಡ ಯುವಕನಿಗೆ ಸೂಕ್ತ ಚಿಕಿತ್ಸೆ ದೊರಕಲಿಲ್ಲ ಎನ್ನಲಾಗಿದೆ. ಕೇವಲ 8–10 ದಿನಗಳಲ್ಲೇ ದರ್ಶನ್ ಮೃತಪಟ್ಟು ಕುಟುಂಬದಲ್ಲಿ ಶೋಕ ವಾತಾವರಣ ನಿರ್ಮಾಣವಾಗಿದೆ.

ಪೋಷಕರ ದೂರು ಆಧರಿಸಿ, ವಿವೇಕನಗರ ಪೊಲೀಸ್ ಇನ್ಸ್‌ಪೆಕ್ಟರ್‌ ಶಿವಕುಮಾರ್, ಪವನ್‌ ಸೇರಿದಂತೆ ನಾಲ್ವರು ಪೊಲೀಸರ ವಿರುದ್ಧ ಕೊಲೆ ಹಾಗೂ ಅಟ್ರಾಸಿಟಿ ಕೇಸ್ ದಾಖಲಾಗಿದೆ. ರಿಹ್ಯಾಬ್‌ ಸೆಂಟರ್‌ ಮಾಲೀಕರನ್ನೂ ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಕಸ್ಟೋಡಿಯಲ್ ಡೆತ್ ಆರೋಪದ ಗಂಭೀರತೆಯನ್ನು ಮನಗಂಡು, ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ತನಿಖಾ ತಂಡ ಪ್ರಾಥಮಿಕ ವಿಚಾರಣೆ ಆರಂಭಿಸಿದೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಕೇಂದ್ರ ವಿಭಾಗದ ಹಿರಿಯ ಅಧಿಕಾರಿಗಳೂ ಪ್ರಕರಣದ ವಿವರಗಳನ್ನು ಪಡೆದುಕೊಂಡಿದ್ದಾರೆ. 

 ದರ್ಶನ್‌ ಗೆ ಪತ್ನಿ ಹಾಗೂ ಚಿಕ್ಕ ಮಗು ಇದೆ. ಕುಟುಂಬಕ್ಕೆ ನ್ಯಾಯ ದೊರಕಬೇಕೆಂಬ ಒತ್ತಡ ಹೆಚ್ಚಾಗಿದೆ. ಯುವಕನ ಸಾವು ‘ಅಪಘಾತವಲ್ಲ, ಕೊಲೆ’ ಎಂದು ಪೋಷಕರು ಆರೋಪಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0