ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಶ್ರಮಿಸಿ, ಜೊತೆಗೆ ಅಧಿಕಾರ ನಡೆಸಿ: ಗಣ್ಯರ ಅಭಿಮತ

ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಶ್ರಮಿಸಿ, ಜೊತೆಗೆ ಅಧಿಕಾರ ನಡೆಸಿ: ಗಣ್ಯರ ಅಭಿಮತ

ಮಡಿಕೇರಿ ಮೇ.04:-ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರ ಉಪಸ್ಥಿತಿಯಲ್ಲಿ ಮತ್ತು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆಯ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಮತ್ತು ಜನರ ಪಾಲ್ಗೊಳ್ಳುವಿಕೆ ಕುರಿತು ಸೋಮವಾರ ಸಭೆ ನಡೆಯಿತು. 

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಜನಪ್ರತಿನಿಧಿಗಳ ಜೊತೆಗೆ ಜನರ ಸಹಭಾಗಿತ್ವವೂ ಪ್ರಮುಖವಾಗಿದೆ ಎಂದರು. 

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಯೋಜನೆ ರೂಪಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು, ಆ ದಿಸೆಯಲ್ಲಿ ಎಲ್ಲರ ಜೊತೆ ಚರ್ಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು. 

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆಯ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ ಅವರು ಮಾತನಾಡಿ ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಅಭಿವೃದ್ಧಿ ಯೋಜನೆಗಳು ಯಶಸ್ವಿಯಾಗುತ್ತವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರ ಬೇಡಿಕೆಗಳಿಗುಣವಾಗಿ ಜನರ ಶ್ರೇಯೋಭಿವೃದ್ಧಿಯ ಕ್ರಿಯಾಯೋಜನೆ ರೂಪಿಸಿ ಜನರ ಜೀವನಮಟ್ಟ ಸುಧಾರಣೆಗೆ ಕ್ರಮವಹಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುವ ಉನ್ನತ ಮಟ್ಟದ ಸಮಿತಿಯಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಜಿಲ್ಲಾ ಮಟ್ಟದ ಯೋಜನೆಗಳನ್ನು ಏಕೀಕರಿಸುತ್ತದೆ ಎಂದರು.

ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಿದ್ದು, ಅದನ್ನು ನಿಯಮಾನುಸಾರ ಬಳಸಬೇಕು ಎಂದು ಹೇಳಿದರು. 

ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಕಾನೂನಿನ ಪ್ರಕಾರ ಅಧಿಕಾರ ಚಲಾಯಿಸಬೇಕು. ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಚುನಾಯಿತ ಸರ್ಕಾರ ಇರಬೇಕು ಎಂಬುದು ಸರ್ಕಾರದ ಆಶಯವಾಗಿದ್ದು, ಆ ನಿಟ್ಟಿನಲ್ಲಿ ಸ್ಥಳೀಯ ಆಡಳಿತಕ್ಕೆ ವಿಶೇಷವಾದ ಅಧಿಕಾರ ನೀಡಲಾಗಿದೆ ಎಂದರು.

ಜನರ ನಿರೀಕ್ಷೆಗೆ ತಕ್ಕಂತೆ ಅಧಿಕಾರ ನಡೆಸಬೇಕು. ಪಂಚಾಯತ್ ಅಭಿವೃದ್ಧಿ ಸಂಬಂಧಿಸಿದಂತೆ ಎಲ್ಲಾ ಮತದಾರರಿಗೂ ಮಾಹಿತಿ ನೀಡಬೇಕು. ಫಲಾನುಭವಿಗಳ ಆಯ್ಕೆ ಮತ್ತು ಕ್ರೀಯಾ ಯೋಜನೆ ರೂಪಿಸಬೇಕು. ಅವಶ್ಯಕತೆಗೆ ಅನುಗುಣವಾಗಿ ಯೋಜನೆಯನ್ನು ರೂಪಿಸುವ ಮೂಲಕ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬೇಕು. ಆ ಮೂಲಕ ಗ್ರಾಮಗಳ ಅಭಿವೃದ್ಧಿಯಾಗಬೇಕು ಎಂದು ಸಮಿತಿ ಉಪಾಧ್ಯಕ್ಷರು ತಿಳಿಸಿದರು.

ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಗೆ ಸಾಕಷ್ಟು ಶ್ರಮ ಪಡುತ್ತಾರೆ. ಅವರಿಗೆ ಉತ್ತಮ ಸ್ಥಾನಮಾನ ದೊರಕಬೇಕು. ಆ ನಿಟ್ಟಿನಲ್ಲಿ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಮೂಲಕ ಮಹಿಳೆಯರ ಸಬಲೀಕರಣ ಮತ್ತು ಸ್ಥಾನಮಾನವನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಆ ಮೂಲಕ ಮಹಿಳೆಯರನ್ನು ಮತ್ತಷ್ಟು ಗೌರವದಿಂದ ಕಾಣುವ ವ್ಯವಸ್ಥೆಯಾಗುತ್ತದೆ ಎಂದು ಹೇಳಿದರು.

 ಗ್ರಾಮ ಪಂಚಾಯಿತಿ ಗ್ರಾಮ ಸರ್ಕಾರವಾಗಿ, ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯಿತಿ ಸ್ಥಳೀಯ ಸರ್ಕಾರವಾಗಿ ಕಾರ್ಯ ನಿರ್ವಹಿಸುವ ಮೂಲಕ ಜನರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರಕಿಸಿಕೊಡಬೇಕು ಎಂದು ಹೇಳಿದರು.

ಬಳಿಕ ದ್ವನಿಗೂಡಿಸಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಯೋಜನೆಯ ಅನುಷ್ಠಾನ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು. ಇದನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತಂದಲ್ಲಿ ಸ್ಥಳೀಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.

ಸ್ಥಳೀಯರ ವಿಶ್ವಾಸ ಪಡೆದು ಅಭಿಪ್ರಾಯ ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕು. ಹಾಗಾದಾಗ ಮಾತ್ರ ಜನರಲ್ಲಿ ಪರಿವರ್ತನೆ ಆಗಲು ಸಾಧ್ಯ. ನಾವು ಮಾಡುವ ಕೆಲಸ, ಪ್ರಯತ್ನ ಸರಿಯಾದ ದಾರಿಯಲ್ಲಿರಬೇಕು. ಹಾಗಾಗಿ ತಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಪ್ರಯತ್ನಿಸಬೇಕು. ಮುಂದಿನ ದಿನ ವಿಕೇಂದ್ರಿಕರಣವನ್ನು ಸರಿಯಾಗಿ ನಿರ್ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ, ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆಯು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಯೋಜನೆ ರೂಪಿಸಿ ಜಾರಿಗೊಳಿಸಬೇಕು, ಆ ಮೂಲಕ ಸ್ಥಳೀಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. 

ವಿಕೇಂದ್ರೀಕರಣ ವ್ಯವಸ್ಥೆ ಜಾರಿಯಲ್ಲಿ ಕೊಡಗು ಜಿಲ್ಲೆ ಇತರ ಜಿಲ್ಲೆಗಳಿಗೆ ಮಾದರಿಯಾಗಬೇಕು. ಗ್ರಾಮ ಮಟ್ಟದಲ್ಲೇ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ವಿಕೇಂದ್ರೀಕರಣ ವ್ಯವಸ್ಥೆ ಸಮರ್ಥವಾಗಿ ಜಾರಿಗೊಳ್ಳುವಂತಾಗಲಿ ಎಂದು ಹೇಳಿದರು.

ನಗರಸಭೆ ಸದಸ್ಯರಾದ ಅರುಣ್ ಶೆಟ್ಟಿ ಅವರು ಮಾತನಾಡಿ, ನಗರಸಭೆಯಲ್ಲಿ ಶೇ.70 ರಷ್ಟು ನೌಕರರ ಸಂಖ್ಯೆ ಕಡಿಮೆ ಇದ್ದು, ಶೀಘ್ರ ಹುದ್ದೆಗಳ ಭರ್ತಿಗೆ ಗಮನಹರಿಸಬೇಕು. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇವುಗಳನ್ನು ನಿಯಂತ್ರಿಸಬೇಕು. ರಸ್ತೆಗಳು ಮಂದಗತಿಯಲ್ಲಿ ನಡೆಯುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ಮಾಹಿತಿ ನೀಡಿ ಈಗಾಗಲೇ ಯೋಜನೆಯ ಕರಡು ಪ್ರತಿ ಸಿದ್ಧಪಡಿಸಲಾಗಿದೆ ಎಂದರು. 

ಸಮಿತಿ ಉಪಾಧ್ಯಕ್ಷರಾದ ಪಾಟೀಲ ಅವರು ಮಾತನಾಡಿ, ಅಧಿಕಾರ ವಿಕೇಂದ್ರಿಕರಣದ ಹಿನ್ನೆಲೆಯಲ್ಲಿ ನಗರಸಭೆ, ಪುರಸಭೆ ವ್ಯಾಪ್ತಿಯ ಪ್ರತಿ ವಾರ್ಡ್ ಮಟ್ಟದಲ್ಲಿ ಜೂನ್ 15ರ ಒಳಗಾಗಿ ವಾರ್ಡ್ ಸಮಿತಿ ಹಾಗೂ ನೆರೆಹೊರೆ ಎಂಬ ಗುಂಪು ರಚಿಸಬೇಕು. ಈ ಬಗ್ಗೆ ಮತ್ತೊಂದು ಸಭೆಯಲ್ಲಿ ಮಾಹಿತಿ ಪಡೆಯಲಾಗುವುದು ಎಂದರು.

ನಗರಸಭೆಯ ಮತ್ತೋರ್ವ ಸದಸ್ಯ ಮನ್ಸೂರ್ ಮಾತನಾಡಿ, ಅಧಿಕಾರ ವಿಕೇಂದ್ರಿಕರಣದ ಬಗ್ಗೆ ಯಾವುದೇ ಯೋಜನೆ ನಡೆದಿಲ್ಲ ಎಂದರು.

ಸಮಿತಿ ಉಪಾಧ್ಯಕ್ಷರು ಮಾತನಾಡಿ, ಕೊಡಗಿನಲ್ಲಿ ಈ ಯೋಜನೆ ಶೀಘ್ರದಲ್ಲಿ ನಡೆಯಬೇಕು. ಇದು ಮಡಿಕೇರಿಯಿಂದ ಪ್ರಾರಂಭವಾಗಿ ಇಡೀ ಜಿಲ್ಲೆಗೆ ಮಾದರಿಯಾಗಲಿ. ಇದನ್ನು ಯಶಸ್ವಿಯಾಗಿ ನಡೆಸಬೇಕು ಎಂದರು.

       ಜಿ.ಪಂ.ಯೋಜನಾ ನಿರ್ದೇಶಕರಾದ ಅಬ್ದುಲ್ ನಬಿ ಅವರು ಮಾತನಾಡಿ ಈಗಾಗಲೇ ಯೋಜನೆ ತಯಾರಿ ಬಗ್ಗೆ ಕಾರ್ಯಾಗಾರ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಜಿಲ್ಲಾ ಗ್ಯಾರಂಟಿ ಯೋಜನಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ರಾಜ್ಯ ವಿಕೇಂದ್ರಿಕರಣ ಸಲಹೆಗಾರರಾದ ಡಾ.ಕೆಂಪೇಗೌಡ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ನಗರಸಭೆ ಸದಸ್ಯರು, ಗ್ರಾ.ಪಂ.ಅಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿಗಳು ಇತರರು ಪಾಲ್ಗೊಂಡಿದ್ದರು.

ಜಿ.ಪಂ.ಸಿಬ್ಬಂದಿಗಳಾದ ಹರ್ಷಿತಾ ತಂಡ ನಾಡಗೀತೆ ಹಾಡಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ನಂದೀಶ್ ಸ್ವಾಗತಿಸಿದರು, ಪವನ್ ಕುಮಾರ್ ನಿರೂಪಿಸಿ, ವಂದಿಸಿದರು.