ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಕೂಡ್ಲೂರು ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ವಿಠಲ ಸಾಲಿಯಾನ
ಕುಶಾಲನಗರ, ಜೂ.7: ಸೋಮವಾರಪೇಟೆ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ವತಿಯಿಂದ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಇಕೋ ಕ್ಲಬ್, ಎನ್ನೆಸ್ಸೆಸ್ , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಾಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ "ವಿಶ್ವ ಪರಿಸರ ದಿನಾಚರಣೆ": 2026 ಯ ಅಂಗವಾಗಿ *ಪರಿಸರ ಜಾಗೃತಿ ಅಭಿಯಾನ* ವನ್ನು ಹಮ್ಮಿಕೊಳ್ಳಲಾಗಿತ್ತು.
ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಪರಿಸರ ಕಾರ್ಯಕ್ರಮದಲ್ಲಿ ಗಿಡನೆಟ್ಟು ಪರಿಸರ ಕಾರ್ಯಕ್ರಮಕ್ಕೆ ಚಾಲನೆ ನೀಡಿ *"ಪರಿಸರ ಸಂರಕ್ಷಣೆ* ಕುರಿತು ಮಾಹಿತಿ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಠಲ ಎಸ್. ಸಾಲಿಯಾನ, ನಮ್ಮ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡನೆಟ್ಟು ಬೆಳೆಸಿ ಅದನ್ನು ಪೋಷಿಸುವ ಮೂಲಕ ಪರಿಸರ ಕಾಪಾಡಬೇಕಿದೆ ಎಂದರು.
ಪರಿಸರ ಸಂರಕ್ಷ ಣೆ ಎಂದರೆ ಕೇವಲ ಗಿಡ, ಮರಗಳನ್ನು ಬೆಳೆಸುವುದಷ್ಟೇ ಅಲ್ಲ. ನಿತ್ಯ ಜೀವನದಲ್ಲಿ ಅನುಸರಿಸಬೇಕಾದ ಹಲವಾರು ನಡವಳಿಕೆಗಳನ್ನು ಚಾಚೂ ತಪ್ಪದೆ ಪಾಲಿಸುವುದರಿಂದ ಪರಿಸರವನ್ನು ಉಳಿಸಬಹುದು ಎಂದ ಅವರು ಸುಸ್ಥಿರ ಸಮಾಜಕ್ಕೆ ಉತ್ತಮ ಪರಿಸರವೂ ಮುಖ್ಯವೆಂದರು. ನಮ್ಮ ಪ್ರತಿ ಹೆಜ್ಜೆಯಲ್ಲೂ ನಾವು ಪರಿಸರ ಪ್ರಜ್ಞೆ ಪ್ರಚೋದಿತವಾಗಬೇಕು. ಪರಿಸರವನ್ನು ನಾಶ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಹಾನಿಯ ಪ್ರಮಾಣ ಮಿತಿಮೀರಿ ಭವಿಷ್ಯದಲ್ಲಿ ತೀವ್ರ ಗಂಡಾಂತರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಇಂತಹ ಪರಿಸರ ಕಾರ್ಯಕ್ರಮಗಳು ಜನರಲ್ಲಿ ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮವಾಗಿದ್ದು, ಎಲ್ಲರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿದರೆ ಉತ್ತಮ ಹಾಗೂ ಸ್ವಚ್ಛ ವಾತಾವರಣ ನಿರ್ಮಾಣವಾಗುತ್ತದೆ ಎಂದು ಸಾಲಿಯಾನ ಹೇಳಿದರು. ಪ್ರತಿಯೊಬ್ಬರೂ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಸಾಲಿಯಾನ ಕರೆ ನೀಡಿದರು.
ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ , ಶಾಲೆಗಳಲ್ಲಿ ಹಸಿರು ಕಾರ್ಯಕ್ರಮದಡಿ "ವಿದ್ಯಾರ್ಥಿಗೊಂದು ಗಿಡ - ಶಾಲೆಗೊಂದು ವನ" ಎಂಬ ಕಲ್ಪನೆಯ ಆಧಾರದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಗಿಡ ನಾಟಿ ಮಾಡಿ ಅದನ್ನು ಪೋಷಿಸಿ ಸಂರಕ್ಷಿಸಿದಾಗ ಉತ್ತಮ ಪರಿಸರ ರೂಪುಗೊಳ್ಳಲು ಸಾಧ್ಯವಾಗುತ್ತದೆ" ಎಂದರು.
ಅಭಿವೃದ್ಧಿ ಹಿನ್ನೆಲೆಯಲ್ಲಿ ಪರಿಸರಕ್ಕೆ ನಾವು ಯಾವುದೇ ರೀತಿಯಲ್ಲಿ ಧಕ್ಕೆಯನ್ನುಂಟು ಮಾಡದೇ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು. ಕೂಡಿಗೆಯ ವಲಯದ ಒಕ್ಕೂಟದ ಅಧ್ಯಕ್ಷ ಕೆ.ಎಚ್.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಕಾರ್ಯಕ್ರಮದ ಉದ್ದೇಶ ತಿಳಿಸಿದರು.
ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಯೋಜನೆಯ ಸೇವಾ ಪ್ರತಿನಿಧಿ ನಿರ್ಮಲ, ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಎಂ.ಟಿ. ದಯಾನಂದ ಪ್ರಕಾಶ್, ಬಿ.ಎನ್. ಸುಜಾತ, ಬಿ.ಎಸ್.ಅನ್ಸಿಲಾ ರೇಖಾ, ವಿದ್ಯಾರ್ಥಿಗಳು ಇದ್ದರು.
*ಪರಿಸರ ಜಾಗೃತಿ* *ಅಭಿಯಾನ*: ನಂತರ ಶಾಲಾ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಪರಿಸರ ಘೋಷಣೆಗಳಳ್ಳ ಭಿತ್ತಿಫಲಕಗಳೊಂದಿಗೆ ಪರಿಸರ ಘೋಷಣೆಗಳನ್ನು ಪ್ರಚುರಪಡಿಸಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ* *ನಮ್ಮೆಲ್ಲರ ಹೊಣೆ, ಹಸಿರೇ ಉಸಿರು, ಜಲವೇ ಜೀವಜಾಲ,* ಗಿಡನೆಟ್ಟು ಪರಿಸರ ಸಂರಕ್ಷಿಸೋಣ ಬನ್ನಿ, ನೀರಿನ ಸಂರಕ್ಷಣೆ* ನಮ್ಮೆಲ್ಲರ ಹೊಣೆ* ಮುಂದಿನ ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಿಸೋಣ ಬನ್ನಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಗ್ರಾಮಸ್ಥರ ಗಮನ ಸೆಳೆದರು.

