ಧರ್ಮಸ್ಥಳ ಪ್ರಕರಣ:ವಿರಾಜಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: SIT ಅಂತರ್ ರಾಜ್ಯಗಳಲ್ಲಿ ತನಿಖೆ ನಡೆಸಲಿ: ಸಂಸದ ಯದುವೀರ್ ಒಡೆಯರ್ ಆಗ್ರಹ
ವಿರಾಜಪೇಟೆ: ಹಿಂದೂಗಳ ಶ್ರದ್ಧಾ ಮತ್ತು ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು, ಪಟ್ಟಭದ್ರ ಹಿತಾಶಕ್ತಿಗಳು ಅಪಮಾನ ಮಾಡುವ ರೀತಿಯಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಕೊಂಡು ಬಂದಿದೆ. ಪ್ರಸ್ತುತ ಸರ್ಕಾರವು ಪರೋಕ್ಷವಾಗಿ ಕುಮ್ಮಕ್ಕು ನೀಡತ್ತಿದೆ ಎಂದು ತಾಲೂಕು ಭಾರತೀಯ ಜನತಾ ಪಕ್ಷವು ಧರ್ಮಸ್ಥಳ ಪ್ರಕರಣದ ವಿರುದ್ದ ಪ್ರತಿಭಟನೆ ನಡೆಸಿದರು.ಭಾರತೀಯ ಜನತಾ ಪಕ್ಷ ವಿರಾಜಪೇಟೆ ಮಂಡಲದ ವತಿಯಿಂದ ನಗರದ ಗಡಿಯಾರ ಕಂಬದ ಬಳಿ ಧರ್ಮದ ಉಳಿವಿಗಾಗಿ ಧರ್ಮಯುದ್ದ ಎಂಬ ಘೋಷವಾಖ್ಯದಡಿಯಲ್ಲಿ ಧರ್ಮಸ್ಥಳ ಪ್ರಕರಣವನ್ನು ಖಂಡಿಸಿದ ಬೃಹತ್ ಪ್ರತಿಭಟನೆ ನಡೆಸಿದರು. ಮಾನವ ಸರಪಳಿಯ ಮೂಲಕ ಪ್ರಕರಣದ ರೂವಾರಿಗಳ ಮತ್ತು ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಖಂಡನೆಯನ್ನು ಹೊರಹಾಕಿದರು.
ಪತ್ರಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೊಡಗು ಮೈಸೂರು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು,ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುವಂತೆ ಷಡ್ಯಂತ್ರ ರಚಿಸಿ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಅಪಮಾನ ಮಾಡುವ ರೀತಿಯಲ್ಲಿ ಕಾಣದ ಕೈಗಳು ಪ್ರತಿನಿಧಿಸುತ್ತಿದೆ. ಶ್ರದ್ಧಾ ಕೇಂದ್ರಗಳ ಬಗ್ಗೆ ಅಪಪ್ರಚಾರ ಮಾಡಿರುವ ವ್ಯಕ್ತಿಗಳ ವಿರುದ್ದ ನಿರ್ದಾಕ್ಷಣ್ಯ ಕ್ರಮ ಜರುಗಿಸಬೇಕು. ಧರ್ಮ ಕೇಂದ್ರಗಳ ಮೇಲೆ ಅಪಪ್ರಚಾರಗಳು ನಡೆಯುವ ಸಂದರ್ಭದಲ್ಲಿ ಎಲ್ಲಾ ಹಿಂದೂ ಬಾಂಧವರು ಒಂದಾಗಿ ಹೋರಾಟಕ್ಕೆ ಸಿದ್ದರಾಗಿರಬೇಕು. ಧರ್ಮಕೇಂದ್ರಗಳ ಉಳಿವಿಗಾಗಿ ಸ್ಥಿರ ನೆಲೆಗಾಗಿ ಹೋರಾಟಗಳು ಮುಖ್ಯ ಎಂದರು. ಅಪಪ್ರಚಾರದಲ್ಲಿ ಅಂತರ್ ರಾಜ್ಯಗಳ ಕೈವಾಡವಿದೆ ಎಂಬ ಸಂಶಯ ವ್ಯಕ್ತವಾಗುತ್ತಿವೆ. ಹಿನ್ನಲೆಯಲ್ಲಿ ಎಸ್,ಐ.ಟಿ. ತನಿಖಾ ಸಂಸ್ಥೆಯು ಪರಾದರ್ಶಕವಾಗಿ ತನ್ನ ತನಿಖೆಯನ್ನು ಪೂರ್ಣಗೊಳಿಸಿ ಸತ್ಯ ಹೊರಬರುವಂತೆ ತನಿಖೆ ನಡೆಸುತ್ತದೆ ಎಂಬ ಧೃಡ ವಿಶ್ವಾಸ ನಮಗಿದೆ ಎಂದು ಹೇಳಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ಸಾವಿರಾರು ವರ್ಷಗಳ ಪೌರಾಣಿಕ ಹಿನ್ನಲೆಯಿಂದ ನಮ್ಮ ಧಾರ್ಮಿಕ ಕೇಂದ್ರಗಳು ಸ್ಥಾಪನೆಗೊಂಡಿದೆ. ಸುಜಾತ ಭಟ್, ಸಮೀರ್, ಗಿರೀಶ್ ಮಟ್ಟಣ್ಣನವರ್, ಹೀಗೆ ಹಲವರು ಧಾರ್ಮಿಕ ಕೇಂದ್ರಗಳ ಬಗ್ಗೆ ಅರಿಯದೆ ಮಾಡಿರುವ ಆರೋಪಗಳು ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆಯಾಗಿರುವ ವಿಷಯ. ಧರ್ಮಸ್ಥಳವು ಧರ್ಮದ ಸಂಸ್ಥಾಪನೆಗೆ ರಚನೆಯಾಗಿದೆ. ಲಕ್ಷಾಂತರ ಸಂಖ್ಯೆಗಳಲ್ಲಿ ತನ್ನ ಭಕ್ತರನ್ನು ಹೊಂದಿದೆ. ಧರ್ಮಸ್ಥಳವು ಒಂದು ಧರ್ಮಕ್ಕೆ ಮಾತ್ರ ಸಿಮಿತವಾಗದೆ ಎಲ್ಲಾ ಧರ್ಮಗಳ ಆಚರಣೆಗಳಗೆ ಸಹಾಯಧನವನ್ನು ನೀಡುತ್ತಾ. ಜನಪರ ಕಾಳಜಿಯೊಂದಿಗೆ ಸಹಸ್ರ ಸಂಖ್ಯೆಯ ಮನೆಗಳಿಗೆ ದಾರಿದೀಪವಾಗಿದೆ. ಅದರೆ ಇಂತಹ ಕೇಂದ್ರದ ಮೇಲೆ ಅಪಪ್ರಚಾರದಿಂದ ನೂರಾರು ಸಂಖ್ಯೆಯಲ್ಲಿ ಹೆಣಗಳನ್ನು ಹೂತುಹಾಕಲಾಗಿದೆ ಎಂದು ಬಿಂಬಿಸಿಕೊಂಡು ಎಸ್.ಐ.ಟಿ ತನಿಖಾ ಸಂಸ್ಥೆಯನ್ನು ದಿಕ್ಕುತಪ್ಪಿಸುವ ಪ್ರಯತ್ನವಾಗಿದೆ. ಈ ಘಟನೆಯನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.
ಭಾ.ಜ.ಪ ಜಿಲ್ಲಾದ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರವು ಹಿಂದೂ ವಿರೋದಿ ಸರ್ಕಾರ ಎಂದು ಮತ್ತೋಮ್ಮೆ ಸಾಬೀತುಪಡಿಸಿದೆ. ಹಿಂದೂಗಳ ಶ್ರದ್ದಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಧರ್ಮದ ವಿರುದ್ದ ಅಪಪ್ರಚಾರಕ್ಕೆ ಹಿಂದಿರುವ ದುಷ್ಟ ಶಕ್ತಿಗಳಿಗೆ ಪರೋಕ್ಷವಾಗಿ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿದರು. ಅಪಪ್ರಚಾರ ಮಾಡಲು ರಾಜ್ಯದಲ್ಲೆ ದೊಡ್ಡ ಮಟ್ಟದಲ್ಲಿ ಸಂಚು ರೂಪಿತವಾಗುತ್ತಿದೆ ಹಿಂದೂ ಬಾಂಧವರು ಎಚ್ಚೆತ್ತುಕೊಳ್ಳಬೇಕು. ಧರ್ಮದ ಉಳಿವಿಗಾಗಿ ನಮ್ಮ ಹೋರಾಟವಾಗಬೇಕು. ಹಿಂದೂ ಧರ್ಮ ಕೇಂದ್ರಗಳನ್ನು ಉಳಿಸುವ ಮಹತ್ತರವಾದ ಹೋರಾಟಕ್ಕೆ ಸರ್ವರು ಸಜ್ಜಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಪ್ರತಿಭಟನೆ ಉದ್ದೇಶಿಸಿ ಪ್ರಮುಖರಾದ ಪಟ್ಟಡ ರೀನಾ ಪ್ರಕಾಶ್ ಮತ್ತು ಕಾಂತಿ ಸತೀಶ್ ಮಾತನಾಡಿದರು. ಗಡಿಯಾರ ಕಂಬದ ಬಳಿಯಿಂದ ತಾಲೂಕು ಕಛೇರಿಯ ವರೆಗೆ ಜಾಥಾದಲ್ಲಿ ತೆರಳಿದ ಕಾರ್ಯಕರ್ತರು ತಹಶೀಲ್ದರ್ ಪ್ರವೀಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲೂಕು, ಜಿಲ್ಲೆಯ ಪಕ್ಷದ ಪ್ರಮುಖರು ಸುವಿನ್ ಗಣಪತಿ, ನೆಲ್ಲಿರ ಚಲನ್ ಕುಮಾರ್, ಶಶಿ ಸುಬ್ರಮಣಿ, ರಘು ನಾಣಯ್ಯ ಮತ್ತು ವಿವಿಧ ಮಂಡಲಗಳ ಪ್ರಮುಖರು ತಾಲೂಕಿನ ವಿವಿದಡೆಗಳಿಂದ ಆಗಮಿಸಿದ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ;ಕಿಶೋರ್ ಕುಮಾರ್ ಶೆಟ್ಟಿ