Kodagu

ಅಂಗನವಾಡಿಯಲ್ಲಿ ಕೊಳೆತ ಮೊಟ್ಟೆಗಳ ವಿತರಣೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗಿರಿಜನ ಪುನರ್ ವಸತಿ ಕೇಂದ್ರದಲ್ಲಿ ಘಟನೆ

admincoorgdaily

ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗಿರಿಜನ ಪುನರ್ ವಸತಿ ಕೇಂದ್ರದ ನಿವಾಸಿಗಳಿಗೆ ಸರ್ಕಾರದಿಂದ ಉಚಿತವಾಗಿ ವಿತರಿಸುವ ಆಹಾರ ಕಿಟ್ ನೊಂದಿಗೆ ಕೊಳೆತ ಮೊಟ್ಟೆಗಳನ್ನು ವಿತರಿಸಲಾಗಿದೆ. ಹಾಡಿಯಲ್ಲಿನ ಅಂಗನವಾಡಿಯ ಮೂಲಕ ಪ್ರತಿ ತಿಂಗಳು ವಿತರಿಸುವ ಆಹಾರ ಕಿಟ್‌ನೊಂದಿಗೆ ಕಳೆದ ಎರಡು ತಿಂಗಳಿನಿಂದಲೂ ಕೊಳೆತ ಸ್ಥಿತಿಯಲ್ಲಿ ಗಬ್ಬೆದ್ದು ನಾರುವ ಮೊಟ್ಟೆಗಳನ್ನು ನೀಡಲಾಗಿದೆ ಎಂದು ನಿವಾಸಿಗಳು ದೂರಿದ್ದು, ಮನೆಗೆ ಕೊಂಡೊಯ್ದಿದ್ದ ಮೊಟ್ಟೆಗಳನ್ನು ಅಂಗನವಾಡಿಗೆ ಮರಳಿಸಿ ಆಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾಡಿಯ ಮಹಿಳಾ ಹೋರಾಟಗಾರ್ತಿ ಅನಿತಾ, ಜಿಲ್ಲಾಡಳಿತದಿಂದ ಹಾಡಿಯ ಫಲಾನುಭವಿಗಳಿಗೆ ನೀಡುವ ಮಾಸಿಕ ಆಹಾರದ ಕಿಟ್‌ನೊಂದಿಗೆ ಒಳಪಟ್ಟಿರುವ ಕೋಳಿ ಮೊಟ್ಟೆಗಳು ಗುಣಮಟ್ಟದಲ್ಲಿ ಇಲ್ಲ. ಈ ಹಿಂದೆಯೂ ಇಂತಹುದೇ ಮೊಟ್ಟೆಗಳನ್ನು ವಿತರಿಸಿದ್ದ ಸಂದರ್ಭದಲ್ಲಿ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಕೆಲವು ತಿಂಗಳು ಒಳ್ಳೆಯ ಮೊಟ್ಟೆಗಳನ್ನು ನೀಡಲಾಗಿತ್ತು. ಈಗ ಮತ್ತೆ ಅದೇ ಕೊಳೆತ ಮೊಟ್ಟೆಗಳನ್ನು ನೀಡಲಾಗುತ್ತಿದೆ. ಇದರ ವಿರುದ್ಧ ನಾವು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿದ್ದೇವೆ ಎಂದು ತಿಳಿಸಿದರು. ಸರ್ಕಾರದಿಂದ ಗಿರಿಜನರ ಕಲ್ಯಾಣಕ್ಕೆ ಒದಗಿಸಲಾಗಿರುವ ಸೌಲಭ್ಯಗಳನ್ನು ನಿಖರವಾಗಿ ತಲುಪಿಸುವ ಹೊಣೆಗಾರಿಕೆ ಸಂಬಂಧಿಸಿದ ಇಲಾಖೆಗಳದ್ದಾಗಿದೆ. ಆದರೆ, ಯಾವುದೇ ಅಧಿಕಾರಿಗಳು ಇತ್ತ ಬಂದು ಪರಿಶೀಲನೆ ನಡೆಸದ ಕಾರಣ ಆಹಾರದ ಕಿಟ್ ಸರಬರಾಜು ಮಾಡಲು ಟೆಂಡರ್ ಪಡೆದ ವ್ಯಕ್ತಿ ತನಗಿಷ್ಟ ಬಂದ ಹಾಗೆ ಕೊಳೆತ ಮೊಟ್ಟೆಗಳನ್ನು ವಿತರಿಸುತ್ತಿದ್ದಾನೆ ಎಂದು ಆರೋಪಿಸಿದರು. ಕೊಳೆತ ಮೊಟ್ಟೆ ಸೇವಿಸಿ ಮಕ್ಕಳು ಅಥವಾ ಮಹಿಳೆಯರಿಗೆ ಯಾವುದಾದರೂ ತೊಂದರೆ ಕಾಣಿಸಿಕೊಂಡರೆ ಜಿಲ್ಲಾಡಳಿತವೇ ಹೊಣೆ ಎಂದು ಅನಿತಾ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ರಾಧಾ, ಜಾನು, ಶಿಲ್ಪ, ಗೌರಿ, ಭಾಗ್ಯ. ಮುತ್ತು ಸಿದ್ದಯ್ಯ, ಇದ್ದರು.

ವರದಿ:ಗಣೇಶ್ ಕೂಡಿಗೆ