ಜಿಲ್ಲಾ ಮಟ್ಟದ ಯುವ ಜನೋತ್ಸವ: ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಇಂದು ಜಾನಪದ ಸೊಗಡು ಯುವ ಪೀಳಿಗೆಯಲ್ಲಿ ಕ್ಷೀಣಿಸುತ್ತಿದೆ: ವಿ.ಟಿ.ವಿಸ್ಮಯಿ

ಜಿಲ್ಲಾ ಮಟ್ಟದ ಯುವ ಜನೋತ್ಸವ:  ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಇಂದು ಜಾನಪದ ಸೊಗಡು ಯುವ ಪೀಳಿಗೆಯಲ್ಲಿ ಕ್ಷೀಣಿಸುತ್ತಿದೆ: ವಿ.ಟಿ.ವಿಸ್ಮಯಿ

ಮಡಿಕೇರಿ : ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಇಂದು ಜಾನಪದ ಸೊಗಡು ಯುವ ಪೀಳಿಗೆಯಲ್ಲಿ ಕ್ಷೀಣಿಸುತ್ತಿರುವುದು ಕಂಡು ಬರುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಕಳವಳ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಮತ್ತು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆಸಲಾದ ಜಿಲ್ಲಾ ಮಟ್ಟದ ಯುವ ಜನೋತ್ಸವವನ್ನು ಉದ್ಘಾಟಿಸಿ ಅವರು, ಮಾತನಾಡಿದರು.

ಇಂದಿನ ಯುವ ಶಕ್ತಿ ಪ್ರಸ್ತುತ ತಂತ್ರಜ್ಞಾನಕ್ಕೆ ಮಾರುಹೋಗುತ್ತಿದ್ದಾರೆ. ಮೊದಲು ನಾವು ನಾಡಿನೆಲ್ಲಡೆ ಪಸರಿಸಿಕೊಂಡಿರುವ ಜಾನಪದ ಕಲೆ, ಸಂಸ್ಕೃತಯನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ನಿಸಬೇಕು. ಇಂದಿನ ಯುವಶಕ್ತಿ ತಮ್ಮ ಬದುಕಿಗೆ ಒಳಿತಾಗುವಂತಹ ವಿದ್ಯಾಭ್ಯಾಸ ಪಡೆಯುವಂತಾಗಬೇಕೇ ಹೊರತು ಕೇವಲ ಸರ್ಟಿಫಿಕೇಟ್‍ಗಾಗಿ ಒದುವಂತಾಗಬಾರದು ಎಂದು ವಿಸ್ಮಯಿ ಸಲಹೆ ನೀಡಿದರು.

 ರಾಜ್ಯದಾದ್ಯಂತ ಏಕಕಾಲದಲ್ಲಿಯೇ ಯುವ ಜನೋತ್ಸವ ನಡೆಸಲು ಸರ್ಕಾರದ ಸುತ್ತೋಲೆ ಇರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇದ್ದರೂ, ನಡೆಸಲೇಬೇಕಾಗಿದೆ. ಸುತ್ತೋಲೆ ನಿಯಮ ಪಾಲಿಸಲೇ ಬೇಕಾಗಿದೆಯಲ್ಲದೆ, ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿಯೂ ಬೆಳೆಸುವಂತಾಗಲಿ ಎಂದು ಶುಭಹಾರೈಸಿದರು.

ಮೈ ಭಾರತ್ ಕೊಡಗು ಯುವ ಅಧಿಕಾರಿ ಕೆಟಿಕೆ ಉಲ್ಲಾಸ್ ಮಾತನಾಡಿ, ಯುವ ಶಕ್ತಿಯಲ್ಲಿ ಗುರಿ ಇರಬೇಕು. ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿ, ಬದುಕಿನಲ್ಲಿ ತಮ್ಮ ಕನಸನ್ನು ನನಸ್ಸು ಮಾಡಿಕೊಳ್ಳುವಂತಾಗಬೇಕು. ದೇಶ ನನಗೇನು ನೀಡಿದೆ ಎನ್ನುವುದಕ್ಕಿಂತ ನಾನು ದೇಶಕ್ಕಾಗಿ ಏನು ಮಾಡಿದ್ದೇನೆ ಎನ್ನುವುದು ಮುಖ್ಯ ಎಂದರು. ಸುಭದ್ರ ದೇಶ ನಿರ್ಮಾಣದಲ್ಲಿ ಯುವ ಶಕ್ತಿಯು ಹೆಚ್ಚಾಗಿ ತೊಡಗಿಸಿಕೊಳ್ಳುವುದಲ್ಲದೆ, ಮಾದಕ ಪದಾರ್ಥಗಳ ಸೇವನೆಗೆ ಮಾರುಹೋಗದೆ ಬದುಕಿನಲ್ಲಿ ಉತ್ತಮ ಹೆಸರನ್ನುಗಳಿಸಿ ಕೀರ್ತಿ ಗಳಿಸುವಂತಾಗಲಿ ಎಂದು ಆಶಿಸಿದರು.

ಮಡಿಕೇರಿ ನಗರಸಭಾ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ಯುವ ಜನೋತ್ಸವದಲ್ಲಿ ಯುವಶಕ್ತಿ ಪಾಲ್ಗೊಳ್ಳುವುದರ ಮೂಲಕ ಪ್ರತಿಭೆಯನ್ನು ಹೊರಸೂಸಿ, ರಾಷ್ಟ್ರಮಟ್ಟದಲ್ಲಿಯೇ ಕೀರ್ತಿ ತರುವಂತಾಗಲಿ. ಜಿಲ್ಲೆಯ ಗರಿಮೆಗೆ ಯುವ ಶಕ್ತಿ ಮಾದರಿಯಾಗಿ ಬೆಳೆಯುವಂತಾಗಲಿ ಎಂದರು.

ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ.ಸುಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಇಲಾಖೆಯ ಸುತ್ತೋಲೆಯಂತೆ ನಿಗಧಿತ ದಿನಾಂಕದಂದು ಯುವ ಜನೋತ್ಸವ ನಡೆಸಲಾಗಿದೆ ಎಂದು ಹೇಳಿದರು. ಭಾಗವಹಿಸುವ ತಂಡಗಳ ಸದಸ್ಯರಿಗೆ 14 ರಿಂದ 29 ವರ್ಷದೊಳಗಿನ ವಯೋಮಿತಿ ನಿಗಧಿಗೊಳಿಸಿರುವುದರಿಂದ ಹೆಚ್ಚಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಜಿಲ್ಲೆಯ ಕೆಲವೊಂದು ಆಯ್ದ ಸಂಘ-ಸಂಸ್ಥೆಗಳಿಂದಲೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆಂದು ಸುಕುಮಾರ್ ತಿಳಿಸದರು.

ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಿರ್ದೇಶಕಿ ಮುಕ್ಕಾಟಿರ ಸ್ಮಿತಾ ಸುಬ್ಬಯ್ಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ನಿರ್ಮಲಾ, ಉಪನ್ಯಾಸಕರಾದ ಚಿದಾನಂದ, ಡಾ.ವೇಣುಗೋಪಾಲ್, ಉದಯಕುಮಾರ್, ಕೆಂಬಡತಂಡ ಮುದ್ದಪ್ಪ, ಕಂಬಿರಂಡ ರಾಖಿ ಪೂವಣ್ಣ, ಜಿಲ್ಲಾ ಯುವ ಒಕ್ಕೂಟದ ಖಜಾಂಚಿ ಕುಂಜಿಲಂಡ ಮಧು ಮೋಹನ್, ಸ್ಥಳೀಯ ಕಾಲೇಜು ನಿವೃತ್ತ ಪ್ರಾಂಶುಪಾಲೆ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಚಿತ್ರಾ ಉಪಸ್ಥಿತರಿದ್ದರು.

 ಆರಂಭದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಜಿಲ್ಲಾ ಯುವ ಒಕ್ಕೂಟದ ಕಾರ್ಯಾಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ ನಿರೂಪಿಸಿದರು. ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್ ವಂದಿಸಿದರು.

ನಂತರ ವಿಜ್ಞಾನ ಮೇಳ, ಜಾನಪದ ಗೀತೆ, ಜಾನಪದ ನೃತ್ಯ, ಕಥೆ ಬರೆಯುವುದು, ಕವಿತೆ ಬರೆಯುವುದು, ಚಿತ್ರಕಲೆ, ಭಾಷಣ (ಘೋಷಣೆ) ಸ್ಪರ್ಧೆ ನಡೆಸಿ, ವಿಜೇತರಿಗೆ ಪಾರಿತೋಷಕದೊಂದಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಪ್ರಥಮ ಸ್ಥಾನ ಪಡೆದ ಜಿಲ್ಲೆಯ ತಂಡಗಳು ನವೆಂಬರ್ ತಿಂಗಳಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುವ ಜನೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.