ಪತ್ನಿಯನ್ನು ಕೊಲೆ ಮಾಡಿ ಕರೆಂಟ್ ಶಾಕ್ ಕಥೆ ಕಟ್ಟಿದ ಎಲೆಕ್ಟ್ರಿಷಿಯನ್ ಪತಿ ಬಂಧನ| ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಪತಿಗೆ ಶಂಕೆ
ಬೆಂಗಳೂರು: ಪತ್ನಿಯು ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಪತಿಯೋರ್ವ ಪತ್ನಿಯನ್ನು ಹತ್ಯೆಗೈದು, ನಂತರ ಅಪರಾಧವನ್ನು ಮರೆಮಾಚಲು ವಾಟರ್ ಹೀಟರ್‌ನಿಂದ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾಳೆ ಎಂದು ಪತಿ ನಾಟಕವಾಡಿದ ಘಟನೆ ನಗರದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಕೊಲೆಯಾದ ಮಹಿಳೆಯನ್ನು ರೇಷ್ಮಾ(32) ಎಂದು ಗುರುತಿಸಲಾಗಿದೆ. ಆಕೆಯ ಪತಿ ಪ್ರಶಾಂತ್ ಕಮ್ಮಾರ್ (25) ನನ್ನು ಬಂಧಿಸಲಾಗಿದೆ. ರೇಷ್ಮಾ ಸಹೋದರಿ ರೇಣುಕಾ ಅವರ ದೂರು ಮೇರೆಗೆ ಹೆಬ್ಬಗೋಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ.
ಹೆಬ್ಬಗೋಡಿಯ ಮರಗೊಂಡಹಳ್ಳಿ ನಿವಾಸಿಯಾದ ರೇಷ್ಮಾ ಸುಮಾರು 15 ವರ್ಷಗಳ ಹಿಂದೆ ಸುರೇಂದರ್ ಎಂಬವರನ್ನು ಮದುವೆಯಾಗಿದ್ದರು. ವಿವಾಹವಾದ ಕೆಲವೇ ತಿಂಗಳಲ್ಲಿ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದರು. 15 ವರ್ಷದ ಮಗಳೊಂದಿ ರೇಷ್ಮಾ ಜೀವನ ಸಾಗಿಸುತ್ತಿದ್ದರು.
ಸುಮಾರು 9 ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಬಳ್ಳಾರಿಯ ಹೂವಿನ ಹಡಗಲಿ ಮೂಲದ ಪ್ರಶಾಂತ್ ಕಮ್ಮಾರ್ ಎಂಬಾತನೊಂದಿಗೆ ಪರಿಚಯ ಬೆಳೆದು ಪ್ರೀತಿಗೆ ತಿರುಗಿ ನಂತರ ಮದುವೆಯಾಗಿದ್ದರು. ಐಟಿಐ ಪದವಿ ಪಡೆದಿದ್ದ ಪ್ರಶಾಂತ್ ಎಲೆಕ್ಟ್ರಿಷಿಯನ್ ಆಗಿ ಹೆಬ್ಬಗೋಡಿಯಲ್ಲಿ ಕೆಲಸ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ವಿವಾಹದ ಆರಂಭದಲ್ಲಿ ದಂಪತಿಗಳು ಅನ್ಯೋನ್ಯವಾಗಿದ್ದರು. ಇತ್ತೀಚಿಗೆ ಪ್ರಶಾಂತ್, ಪತ್ನಿಯು ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಿ ಜಗಳವಾಡುತ್ತಿದ್ದ ಎನ್ನಲಾಗಿದೆ.
ಅಕ್ಟೋಬರ್ 15ರ ರಾತ್ರಿ ಇದೇ ವಿಚಾರವಾಗಿ ವಾಗ್ವಾದ ಉಂಟಾಗಿ ಪ್ರಶಾಂತ್ ರೇಷ್ಮಾರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ನಂತರ ಮೃತದೇಹವನ್ನು ಬಾತ್‌ರೂಮ್‌ನಲ್ಲಿ ಇರಿಸಿ, ನೀರಿನ ಬಕೆಟ್ ಹತ್ತಿರ ವಾಟರ್ ಹೀಟರ್ ಆನ್ ಮಾಡಿ ಕರೆಂಟ್ ಶಾಕ್‌ನಿಂದ ಸಾವನ್ನಪ್ಪಿದಂತೆಯೆಂದು ನಾಟಕ ಮಾಡಿದ್ದಾನೆ ಎನ್ನಲಾಗಿದೆ.
ಅಂದು ಶಾಲೆಯಿಂದ ಮನೆಗೆ ಬಂದ ಮಗಳು ಬಾತ್‌ರೂಮ್ ಒಳಗೆ ಬಾಗಿಲು ಲಾಕ್ ಆಗಿರುವುದನ್ನು ಗಮನಿಸಿ ತೆರೆಯುತ್ತಿದ್ದಂತೆ ತಾಯಿಯನ್ನು ಅಸ್ವಸ್ಥ ಸ್ಥಿತಿಯಲ್ಲಿ ಕಂಡು ದೊಡ್ಡಮ್ಮ ರೇಣುಕಾಳಿಗೆ ಮಾಹಿತಿ ನೀಡಿದ್ದಳು. ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ವೈದ್ಯರು ರೇಷ್ಮಾ ಮೃತಪಟ್ಟಿರುವುದಾಗಿ ಘೋಷಿಸಿದರು.
ಪೊಲೀಸರು ಪ್ರಶಾಂತ್ ನೀಡಿದ ಹೇಳಿಕೆಯಲ್ಲಿ ಸಂಶಯಗೊಂಡು ಮಗುವಿನ ಹೇಳಿಕೆ ದಾಖಲಿಸಿದಾಗ, ತಂದೆ-ತಾಯಿ ನಡುವೆ ಜಗಳ ನಡೆದಿತ್ತು ಎಂಬ ಮಾಹಿತಿ ಬಹಿರಂಗವಾಯಿತು. ಬಳಿಕ ಪ್ರಶಾಂತ್ ವಿಚಾರಣೆಗೆ ಒಳಪಡಿಸಿದಾಗ ಆತ ಹತ್ಯೆಗೈದಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ನನ್ನ ಹೆಂಡತಿಗೆ ಬೇರೆ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ಭಾವಿಸಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದೆ. ಬಳಿಕ ಕರೆಂಟ್ ಶಾಕ್‌ನಿಂದ ಮೃತಪಟ್ಟಿದ್ದಾರೆ ಎಂದು ಹೇಳಿದೆ,” ಎಂದು ಪ್ರಶಾಂತ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಹೆಬ್ಬಗೋಡಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಕರಣದ ತನಿ ಖೆ ಮುಂದುವರಿಸಿದ್ದಾರೆ.