ಸೋಮವಾರಪೇಟೆಯಲ್ಲಿ ಬಿಇಓ ಕಛೇರಿ ಎದುರು ಗಣತಿದಾರ ಶಿಕ್ಷಕರ ಮತ ಪ್ರದರ್ಶನ: ಗಣತಿ ಸಮೀಕ್ಷೆ ವಿಳಂಬ ನೆಪವೊಡ್ಡಿ ಶಿಕ್ಷಕರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಒತ್ತಾಯಿಸಿ ಮನವಿ
ಸೋಮವಾರಪೇಟೆ: ಸಾಮಾಜಿಕ ,ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ: 2025 ಯ ಗಣತಿ ಸಮೀಕ್ಷಾ ಕಾರ್ಯವು ತಾಂತ್ರಿಕ ದೋಷಗಳಿಂದ ವಿಳಂಬವಾಗಿದ್ದರೂ, ವಿನಾಃ ಕಾರಣ ಇದಕ್ಕೆ ಗಣತಿದಾರ ಶಿಕ್ಷಕರು ಕಾರಣ ಎಂದು ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ನೀಡಿರುವ ನೋಟಿಸ್ ಅನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಶಿಕ್ಷಕರು ಸೋಮವಾರಪೇಟೆಯಲ್ಲಿ ಸೋಮವಾರ ( ಅಕ್ಟೋಬರ್ 6 ರಂದು ) ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ( ಬಿಇಓ ಕಛೇರಿ ) ಎದುರು ಗಣತಿ ಕಾರ್ಯಕ್ಕೆ ಆಗ್ರಹಿಸಿದರು.
ತಾಲ್ಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘಗಳ ವತಿಯಿಂದ ಬಿಇಓ ಕಛೇರಿ ನಡೆದ ಶಿಕ್ಷಕರ ಮತ ಪ್ರದರ್ಶನದಲ್ಲಿ ಜಿಲ್ಲಾಡಳಿತದ ಒತ್ತಡಕ್ಕೆ ಮಣಿದು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಬಿಇಓ ರವರು ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನ 175 ಕ್ಕೂ ಹೆಚ್ಚಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ನೋಟಿಸ್ ಗಳನ್ನು ನೀಡಿರುವ ಕ್ರಮ ಸರಿಯಲ್ಲ. ಶಿಕ್ಷಕರಿಗೆ ನೀಡಿರುವ ನೋಟಿಸ್ ಅನ್ನು ತಕ್ಷಣದಲ್ಲೇ ಹಿಂಪಡೆದರೆ ತಾವುಗಳು ಗಣತಿ ಸಮೀಕ್ಷೆಯನ್ನು ಮುಂದುವರೆಸುವುದಾಗಿ ಪಟ್ಟು ಹಿಡಿದರು.
ಗಣತಿದಾರ ಶಿಕ್ಷಕರಿಗೆ ನೀಡಿರುವ ನೋಟಿಸ್ ಅನ್ನು ಹಿಂದಕ್ಕೆ ಪಡೆಯುವುದು ಸೇರಿದಂತೆ ಗಣತಿ ಕಾರ್ಯವನ್ನು ಕೆಲದಿನಗಳ ಕಾಲ ಮುಂದೂಡುವಂತೆ ಹಾಗೂ ಗಣತಿ ಕಾರ್ಯದ ನೆಪವೊಡ್ಡಿ ಶಿಕ್ಷಕರಿಗೆ ಅನಾವಶ್ಯಕವಾಗಿ ನೀಡಿರುವ ನೋಟಿಸ್ ಗಳನ್ನು ಹಿಂದಕ್ಕೆ ಪಡೆದು ಗಣತಿದಾರರು ಸಮೀಕ್ಷಾ ಸ್ಥಳದಲ್ಲಿ ನೈಜವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ ಗಣತಿ ಕಾರ್ಯವನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಕೃಷ್ಣಮೂರ್ತಿ ಹಾಗೂ ಬಿಇಓ ಎಂ.ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವಂತೆ ಮನವಿ ಮಾಡಿದರು. ಗಣತಿ ಆರಂಭದ ಮೊದಲ ಐದು ದಿನಗಳ ಕಾಲ ಆ್ಯಪ್ ಮತ್ತು ತಾಂತ್ರಿಕ ಸಮಸ್ಯೆಗಳಿಂದದ ಗಣತಿ ಕಾರ್ಯ ತಡವಾಗಿ ಆರಂಭವಾಗಿದ್ದು ಮತ್ತು ಯು.ಎಚ್.ಐ.ಡಿ.(UHID) ಸ್ಟಿಕ್ಕರ್ ಅಂಟಿಸಿರುವ ಮನೆಗಳು ಗಣತಿದಾರರಿಗೆ ಸಿಗದಿರುವ ಕಾರಣ ಗಣತಿ ಕಾರ್ಯ ವಿಳಂಬವಾಗಿದೆ ಹೊರತು ಇದಕ್ಕೆ ಗಣತಿದಾರ ಶಿಕ್ಷಕರು ಕಾರಣವಲ್ಲ. ಗಣತಿ ಕಾರ್ಯ ವಿಳಂಬವಾಗಿದೆ ಎಂದು ಶಿಕ್ಷಕರು ತಿಳಿಸಿದರು.
ಗಣತಿದಾರ ಶಿಕ್ಷಕರಿಗೆ ನಿಗದಿಪಡಿಸಿರುವ ಯು.ಎಚ್.ಐ.ಡಿ.(UHID) ಸ್ಟಿಕ್ಕರ್ ಅಂಟಿಸಿರುವ ಮನೆಗಳು ಸಿಗದೇ ಗಣತಿ ಕಾರ್ಯಕ್ಕೆ ತೊಂದರೆಯಾಗಿದೆ. ದಸರಾ ರಜಾವಧಿಯಲ್ಕಿ ಗಣತಿದಾರರಾದ ನಾವುಗಳು ಬಿಸಿಲು ಮಳೆಯೆನ್ನೆದೆ ಬೆಳಿಗ್ಗೆ 6.30-7.00 ಗಂಟೆಯಿಂದ ರಾತ್ರಿ 10.00 ಗಂಟೆ ತನಕ ಮನೆ ಮನೆ ಅಲೆದು ಗಣತಿ ಸಮೀಕ್ಷೆ ಮಾಡುತ್ತಿದ್ದೇವೆ. ನಾವುಗಳು ಗಣತಿ ಕಾರ್ಯಕ್ಕೆ ಹಿಂದೇಟು ಹಾಕುವುದಿಲ್ಲ. ನಮಗೆ ಗಣತಿ ಮನೆಗಳೇ ಸಿಗದಿರುವಾಗ ನಾವುಗಳು ಗಣತಿ ಸಮೀಕ್ಷೆಯನ್ನು ಹೇಗೆ ಪೂರ್ಣಗೊಳಿಸಲು ಸಾಧ್ಯ ಎಂದು ಗಣತಿದಾರ ಶಿಕ್ಷಕರು ಪ್ರಶ್ನಿಸಿದರು. ಗಣತಿದಾರರ ನೈಜ ಸಮಸ್ಯೆಗಳನ್ನು ಅರಿಯಲು ಜಿಲ್ಲಾ ಹಾಗೂ ತಾಲ್ಲೂಕು ಹಂತದ ಅಧಿಕಾರಿಗಳು ಸಮೀಕ್ಷಾ ಸ್ಥಳಕ್ಕೆ ಭೇಟಿ ನೀಡಬೇಕು.
ಸಮೀಕ್ಷೆ ವೇಳೆಯಲ್ಲಿ ಮನೆಗಳು ಸಿಗದೇ ಪರದಾಡುತ್ತಿರುವ ಗಣತಿದಾರರ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಗಳು ಖುದ್ದು ಸ್ಥಳಕ್ಕೆ ಧಾವಿಸಿದರೆ ಮಾತ್ರ ಸಮೀಕ್ಷೆಯ ತಾಂತ್ರಿಕ ತೊಂದರೆಗಳ ಸತ್ಯಾಂಶವನ್ನು ತಿಳಿಯಲು ಸಾಧ್ಯ ಎಂದು ಗಣತಿದಾರರು ತಮ್ಮ ಅಹವಾಲನ್ನು ಹೇಳಿಕೊಂಡರು. ಗಣತಿ ಸಮೀಕ್ಷೆಯಲ್ಲಿ ಶೇಕಡಾ 25-30 ರಷ್ಟು ವಸತಿ ರಹಿತ ಖಾಲಿ ಮನೆಗಳು ಸೇರಿದಂತೆ ವಾಣಿಜ್ಯ ಮಳಿಗೆಗಳು, ಅಂಗಡಿ ಮುಗ್ಗಟ್ಟು ಇತ್ಯಾದಿ ಕಟ್ಟಡಗಳಿದ್ದರೂ ಅವುಗಳಿಗೂ ಯು.ಎಚ್.ಐ.ಡಿ.ಸ್ಟಿಕ್ಕ ರ್ಸ್ ಗಳನ್ನು ಅಂಟಿಸಿರುವುದರಿಂದ ಖಾಲಿ ಮನೆಗಳ ಸಂಖ್ಯೆಯೇ ಹೆಚ್ಚಾಗಿ ಕಂಡುಬಂದರೂ ಅವುಗಳನ್ನು ಸಮೀಕ್ಷೆಗೆ ನಿಗದಿಪಡಿಸಿರುವ ಪಟ್ಟಿಯಿಂದ ಕೈ ಬಿಟ್ಟರೆ ಮಾತ್ರ ಸಮೀಕ್ಷೆಯ ನೈಜವಾದ ಕುಟುಂಬಗಳ ಸಂಖ್ಯೆ ಸಿಗಲಿದೆ. ಕೆಲವು ಕಡೆ ಬೇರೆ ಊರಿನಲ್ಲಿ ಮಾಹಿತಿ ನೀಡಿದವರು ಮತ್ತು ಸಮೀಕ್ಷೆಯನ್ನು ನಿರಾಕರಣೆ ಮಾಡಿರುವ ಈ ಎಲ್ಲಾ ದತ್ತಾಂಶವನ್ನು ಪರಿಗಣಿಸಿದರೆ ಜಿಲ್ಲೆಯ ಸಮೀಕ್ಷೆಯ ನೈಜ ಚಿತ್ರಣ ಸಿಗಲಿದೆ. ಆದ್ದರಿಂದ, ಗಣತಿ ಸಮೀಕ್ಷೆಯನ್ನು ಮುಂದುವರೆಸಲು ಗಣತಿ ಮನೆಗಳನ್ನು ಹುಡುಕಿಕೊಡಲು ತಮಗೆ ಸ್ಥಳೀಯ ಮಟ್ಟದಲ್ಲಿ ಸಂಬಂಧಿಸಿದ ಸಿಬ್ಬಂದಿಗಳನ್ನು ನೇಮಿಸಿಕೊಡಬೇಕು ಎಂದು ಮನವಿ ಮಾಡಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಕೃಷ್ಣಮೂರ್ತಿ ಅವರು, ಸಮೀಕ್ಷೆಗೆ ಬಾಕಿ ಇರುವ ಮನೆಗಳ ಸಮೀಕ್ಷೆಗೆ ಅಗತ್ಯ ಸಿಬ್ಬಂದಿ ಒದಗಿಸಲಾಗುವುದು. ಈ ಸಮೀಕ್ಷೆಯನ್ನು ಪೂರ್ಣಗೊಳಿಸಲು ಶಿಕ್ಷಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಕರಿಗೆ ಈಗಾಗಲೇ ಕಾರಣ ಕೇಳಿ ನೀಡಿರುವ ನೋಟಿಸ್ ಗಳನ್ನು ಹಿಂದಕ್ಕೆ ಪಡೆಯುವುದಾಗಿ ಬಿಇಓ ಎಂ.ಕೃಷ್ಣಪ್ಪ ತಿಳಿಸಿದರು. ಎಂಬ ಬಗ್ಗೆ ಶಿಕ್ಷಕರು ತಹಶೀಲ್ದಾರ್ ಕೃಷ್ಣಮೂರ್ತಿ ಹಾಗೂ ಬಿಇಓ ಕೃಷ್ಣಪ್ಪ ಅವರ ಗಮನ ಸೆಳೆದರು.
ಗಣತಿದಾರರ ಶಿಕ್ಷಕರು ತಮ್ಮನ್ನು ನಿರಂತರವಾಗಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೂ ಹಾಗೂ ಈಗಾಗಲೇ ಗಣತಿ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸಿರುವ ಮತ್ತು ಶೇಕಡಾ 80-90% ಪೂರೈಸಿದ ಗಣತಿದಾರರಿಗೆ ಕಾರಣ ಕೇಳಿ 175 ಮಂದಿಗೆ ಕಾರಣ ಕೇಳಿ ನೋಟಿಸ್ ನೀಡಿರುವುದು ಶಿಕ್ಷಕರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿ ಅವರನ್ನು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿದಂತಾಗುತ್ತದೆ ಎಂದು ಶಿಕ್ಷಕರು ತಮ್ಮ ಅಳಲನ್ನು ತೋಡಿಕೊಂಡರು.
ಗಣತಿದಾರರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಚ್.ಎನ್.ಮಂಜುನಾಥ್, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಪ್ರಸನ್ನ, ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಕೆ.ಬಸವರಾಜ್, ಕಾರ್ಯದರ್ಶಿ ಕವಿತ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಜಿ.ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹೇಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್.ರತ್ನಕುಮಾರ್, ಕಾರ್ಯದರ್ಶಿ ಟಿ.ವಿ.ಶೈಲಾ ಮತ್ತಿತರ ಪದಾಧಿಕಾರಿಗಳು ಹಾಗೂ ನೂರಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.