ಸೆ26ರ ಶುಕ್ರವಾರ ರೈತ ಹೋರಾಟ ಸಮಿತಿ ಹಾಗೂ ರೈತ ಸಂಘದಿಂದ ಅರಣ್ಯ ಭವನ ಚಲೋ: ಗಾಳಿಬೀಡುವಿನಲ್ಲಿ ಪೂರ್ವಭಾವಿ ಸಭೆ
admincoorgdaily
ಮಡಿಕೇರಿ:ಸೆ26ರ ಶುಕ್ರವಾರ ರೈತ ಹೋರಾಟ ಸಮಿತಿ ಹಾಗೂ ರೈತ ಸಂಘ ಹಮ್ಮಿಕೊಂಡಿರುವ ಅರಣ್ಯ ಭವನ ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಗಾಳಿಬೀಡು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.
ಗಾಳಿಬೀಡು ಗ್ರಾಮದಲ್ಲಿ ಸರಿಸುಮಾರು 1000 ಎಕರೆಗಿಂತ ಹೆಚ್ಚು ಭೂಮಿಯು C & D, ಸೆಕ್ಷನ್ 4 ಮತ್ತು 94 ಸಿ, ಗೆ ಒಳಪಟ್ಟಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಸರ್ಕಾರ SIT ತನಿಖೆಯನ್ನು ರಚನೆ ಮಾಡಿದ್ದು, ರೈತರು ವೈಯಕ್ತಿಕವಾಗಿ ಮಾಡಿಕೊಂಡಿರುವ ಪೈಸಾರಿ ಮತ್ತು ಇದರಲ್ಲಿ ದುರಸ್ತಿ ಆಗಿರದ ಜಾಗವನ್ನು ಕಂದಾಯ ಇಲಾಖೆಯ ಮೂಲಕ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಸಿದ್ಧತೆ ಮಾಡಿಕೊಂಡಿದೆ. ಇತ್ತೀಚೆಗೆ ಹಲವಾರು ಗ್ರಾಮಗಳಲ್ಲಿ ಸರ್ವೆ ಕಾರ್ಯಗಳನ್ನು ಅರಣ್ಯ ಇಲಾಖೆ ಕೈಗೊಳ್ಳುತ್ತಿದೆ. ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಸರ್ಕಾರ ನಿರಂತರವಾಗಿ ಮಾಡುತ್ತಿದೆ. ಆದ್ದರಿಂದ ಗ್ರಾಮದ ರೈತರು ಈ ವಿಚಾರವಾಗಿ ಪೂರ್ವಭಾವಿ ಸಭೆಯನ್ನು ನಡೆಸಿ ಚರ್ಚಿಸಿದರು.
ಈ ಸಭೆಯಲ್ಲಿ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್, ಮುಕ್ಕೋಡ್ಲು ಗ್ರಾಮದ ಸಜನ್ ನಂದೀರ, ಪವನ್ ಕಾಳಚಂಡ, ಕಾಲೂರು ಗ್ರಾಮದ ದರ್ಶನ್ ಚೆನ್ನಪಂಡ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಾಜಶೇಖರ್ ಯಾಲದಾಳು, ಸಂಗಮ್ ನೆಲ್ಲಪಟ್ಟಿರ, ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು