ಪ್ರೀತಿಸುವಂತೆ ಒತ್ತಾಯಿಸಿ ಫ್ಯಾಷನ್‌ ಡಿಸೈನರ್‌ ಮೇಲೆ ಹಲ್ಲೆ, ಕೊಲೆ ಬೆದರಿಕೆ: ಪರಿಚಯಸ್ಥನೇ ಆರೋಪಿ

ಪ್ರೀತಿಸುವಂತೆ ಒತ್ತಾಯಿಸಿ ಫ್ಯಾಷನ್‌ ಡಿಸೈನರ್‌ ಮೇಲೆ ಹಲ್ಲೆ, ಕೊಲೆ ಬೆದರಿಕೆ: ಪರಿಚಯಸ್ಥನೇ ಆರೋಪಿ
Photo credit: TV09

ಬೆಂಗಳೂರು, ಅ. 26: ಪ್ರೀತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಫ್ಯಾಷನ್‌ ಡಿಸೈನರ್‌ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಸಂತೋಷ್‌ ರೆಡ್ಡಿ ಎಂಬಾತನ ವಿರುದ್ಧ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಸಂತ್ರಸ್ತೆ ಇಬ್ಬರು ಮಕ್ಕಳ ತಾಯಿಯಾಗಿದ್ದು, ವೃತ್ತಿಯಿಂದ ಫ್ಯಾಷನ್‌ ಡಿಸೈನರ್‌. ಸಂತೋಷ್‌ ರೆಡ್ಡಿ ತನ್ನ ಮಗಳ ಮೂಲಕ ಸಂತ್ರಸ್ತೆಯ ಪರಿಚಯ ಮಾಡಿಕೊಂಡಿದ್ದ. ಪ್ರಾರಂಭದಲ್ಲಿ “ಮಗಳಿಗೆ ಸೂಕ್ತ ವರ ಹುಡುಕಿ” ಎಂದು ಹೇಳುತ್ತಿದ್ದ ಆತ, ನಂತರ ಕ್ರಮೇಣ ಆಕೆಯ ಮೇಲೆ ಆಸಕ್ತಿ ತೋರಲು ಆರಂಭಿಸಿದ್ದಾನೆ ಎನ್ನಲಾಗಿದೆ.

ಮಗಳ ಸಂಬಂಧಿ ಮದುವೆಗಾಗಿ ಕುರ್ತಾ ಡಿಸೈನ್‌ ಮಾಡಿಸಲು ಸಂತೋಷ್‌ ರೆಡ್ಡಿಯ ಪುತ್ರಿ ಭಾವನ್ಯಾ ಸಂತ್ರಸ್ತೆಯನ್ನು ಸಂಪರ್ಕಿಸಿದ ವೇಳೆ ಈ ಪರಿಚಯ ಶುರುವಾಗಿದೆ. ಬಳಿಕ ಕುಟುಂಬ ಸ್ನೇಹಿತನಂತೆ ವರ್ತಿಸುತ್ತಿದ್ದ ಸಂತೋಷ್‌ ರೆಡ್ಡಿ, ಸಂತ್ರಸ್ತೆಯ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸಿದ್ದಾನೆಂದು ಹೇಳಿದ್ದ. ಆದರೆ, ಆಕೆಯ ಮನೆಯವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ನಂತರ ತನ್ನ ಮಗಳು ಮನೆಯಿಂದ ಚಿನ್ನಾಭರಣ ಮತ್ತು ಹಣ ತೆಗೆದುಕೊಂಡು ಹೋಗಿದ್ದಾಳೆ ಎಂದು ಬೇಸರದಿಂದ ಸಂತೋಷ್‌ ರೆಡ್ಡಿ ಸಂತ್ರಸ್ತೆಯ ಮನೆಯಲ್ಲಿ ಸಹಾಯ ಕೋರಿ ಭೇಟಿಯಾಗಿದ್ದಾನೆ. ಈ ವೇಳೆ ಭಾವನಾತ್ಮಕವಾಗಿ ಮಾತನಾಡುತ್ತಿದ್ದ ಆತ ಏಕಾಏಕಿ “ನಿನ್ನನ್ನು ನಾನು ಪ್ರೀತಿಸುತ್ತಿದ್ದೇನೆ, ನೀನು ಸಹ ನನ್ನನ್ನು ಪ್ರೀತಿಸಬೇಕು” ಎಂದು ಒತ್ತಾಯಿಸಿದಾಗ, ಸಂತ್ರಸ್ತೆ ನಿರಾಕರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೋಪಗೊಂಡ ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿ, “ನನ್ನ ಪ್ರೀತಿ ಸ್ವೀಕರಿಸದಿದ್ದರೆ ನಿನ್ನ ಇಬ್ಬರು ಮಕ್ಕಳನ್ನೂ ನಿನ್ನನ್ನೂ ಕೊಲ್ಲುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ನಂತರವೂ ವಾಟ್ಸ್ಯಾಪ್‌ ಮೂಲಕ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ಕುರಿತು ವೈಯಾಲಿಕಾವಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.