ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ವಾರ್ಷಿಕೋತ್ಸವ ಕಾಲೇಜು ಅಭಿವೃದ್ಧಿಗೆ ಅಗತ್ಯ ಸಹಕಾರ: ಪ್ರೊ.ಅಶೋಕ್ ಸಂಗಪ್ಪ ಆಲೂರ

May 27, 2026 - 10:25
 0  364
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ವಾರ್ಷಿಕೋತ್ಸವ  ಕಾಲೇಜು ಅಭಿವೃದ್ಧಿಗೆ ಅಗತ್ಯ ಸಹಕಾರ: ಪ್ರೊ.ಅಶೋಕ್ ಸಂಗಪ್ಪ ಆಲೂರ

ಮಡಿಕೇರಿ ಮೇ,26 :-ಐತಿಹಾಸಿಕ ಹಿನ್ನೆಲೆ ಹೊಂದಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅವಕಾಶ ಕಲ್ಪಿಸಿದ್ದು, ಕಾಲೇಜಿನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಅಶೋಕ್ ಸಂಗಪ್ಪ ಆಲೂರ ಅವರು ಹೇಳಿದರು.

ಕೊಡಗು ವಿಶ್ವವಿದ್ಯಾಲಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾಲೇಜಿನ 77ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು 77 ಅರ್ಥಪೂರ್ಣ ವಸಂತವನ್ನು ಪೂರೈಸಿದ್ದು, ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಹಲವಾರು ಇತಿಮಿತಿಗಳ ನಡುವೆಯೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ ಎಂದರು.

ಮುಂದಿನ ದಿನಗಳಲ್ಲಿಯೂ ಕಾಲೇಜು ತನ್ನ ಹಿರಿಮೆ, ಗರಿಮೆಯನ್ನು ನಾಡಿನಾದ್ಯಂತ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ಗೌರವ ಹಾಗೂ ಸಹಕಾರ ನೀಡಬೇಕು ಎಂದರು.

ಪತ್ರಕರ್ತರಾದ ಹೆಚ್.ಜೆ.ರಾಕೇಶ್ ಮಾತನಾಡಿ, ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು 200 ನೇ ವಾರ್ಷಿಕೋತ್ಸವವನ್ನು ಆಚರಿಸುವಂತಾಗಲಿ ಎಂದು ಶುಭಹಾರೈಸಿದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಪತ್ರಕರ್ತರಾದ ಜಿ.ವಿ.ರವಿಕುಮಾರ್ ಅವರು ಮಾತನಾಡಿ ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಪ್ರಗತಿಗೆ ಯುವ ಸಮೂಹವೇ ಬೆನ್ನೆಲುಬು. ಯುವ ಶಕ್ತಿ ಮನಸ್ಸು ಮಾಡಿದರೆ ಸಮಾಜದ ಅಂಕು-ಡೊಂಕುಗಳನ್ನು ಸರಿಪಡಿಸುವ ಕೆಲಸ ಮಾಡಬಹುದು. ಯುವಕರ ಹೊಸ ಆಲೋಚನೆಗಳು, ಶಕ್ತಿ, ಉತ್ಸಾಹ ಮತ್ತು ಸೃಜನಶೀಲತೆಯು ದೇಶದ ಬಲವನ್ನು ಹೆಚ್ಚಿಸುತ್ತದೆ. ಆ ನಿಟ್ಟಿನಲ್ಲಿ ಹಿರಿಯರ ಸಲಹೆಗಳನ್ನು ಆಲಿಸಿ, ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ, ಗುರಿ, ಆಸಕ್ತಿಯನ್ನು ಹೊಂದಿರಬೇಕು. ಸೋಮಾರಿತನವನ್ನು ಬಿಟ್ಟು, ತಮ್ಮ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುನ್ನುಗ್ಗಬೇಕು. ಆ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಎಂದರೆ ಸಾಧಕರ ಕಾಲೇಜು ಎಂದು ಹೆಮ್ಮೆ ವ್ಯಕ್ತಪಡಿಸಿದರು. 1949ರಲ್ಲಿ ಆರಂಭವಾದ ಕಾಲೇಜಿನಲ್ಲಿ ರಾಜಕೀಯ, ಸೇನೆ, ಪೊಲೀಸ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಪ್ರಸ್ತುತವು ಹಲವಾರು ಸಾಧಕರಿದ್ದಾರೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ರಾಘವ ಬಿ, ಅವರು ಮಾತನಾಡಿ, ಕಾಲೇಜಿನ ಬೋಧಕ, ಬೋಧಕೇತರ ಎಲ್ಲಾ ಸಿಬ್ಬಂದಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಹಳೆಯ ವಿದ್ಯಾರ್ಥಿ ಸಂಘ ಸೇರಿದಂತೆ ದಾನಿಗಳ ಸಹಕಾರವೂ ಕಾಲೇಜಿಗೆ ದೊರೆಯುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ಅಳಿಲು ಸೇವೆ ಮಾಡುವ ಮೂಲಕ ಜೀವನವನ್ನು ಸಾರ್ಥಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ವಿಭಾಗೀಯ ವ್ಯವಸ್ಥಾಪಕರಾದ ಸಿ.ಜಿ.ವಿನಾಯಕ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕೊಡಗು ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಮೇಚಿರ ರವಿಶಂಕರ್, ಐಕ್ಯೂಎಸಿ ಸಂಚಾಲಕರಾದ ಪ್ರೊ.ಕೆ.ಪಿ.ನಾಗರಾಜ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಕೆ.ಟಿ.ವರ್ಷ, ಕೆ.ಡಿ.ಇಂಪನಾ, ನಿಲಿಷಾ ಜೋಜೋ, ಬಿ.ಎಂ.ವಂದನಾ, ಎಸ್.ಶ್ರೀನಂದ, ಎನ್‍ಸಿಸಿ ನಾಯಕರಾದ ಕೆ.ಎಂ.ತಿಮ್ಮಯ್ಯ, ಬಿ.ಎಲ್.ಚರಿಷ್ಮಾ ರೈ, ಅಧ್ಯಾಪಕರು ಅಧ್ಯಾಪಕೇತರ ವೃಂದ ಮತ್ತು ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇದ್ದರು. ಎಸ್. ಶ್ರೀನಂದ್, ಹೆಚ್.ಆರ್.ಸಂದೇಶ್ ನಿರೂಪಿಸಿದರು, ವಿದ್ಯಾರ್ಥಿ ಸಂಘದ ಸಲಹೆಗಾರರಾದ ಪ್ರೊ.ಶ್ರೀಧರ್ ಹೆಗಡೆ ಸ್ವಾಗತಿಸಿದರು, ಪ್ರೊ.ಅಲೋಕ್ ಕಾಲೇಜಿನ ಶೈಕ್ಷಣಿಕ ವರದಿ ವಾಚಿಸಿದರು, ಕೆ.ಟಿ.ವರ್ಷ ವಂದಿಸಿದರು.

ಇದೇ ಸಂದರ್ಭ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0