ಸ್ವಂತ ಖರ್ಚಿನಲ್ಲಿ ಬಡ ಕುಟುಂಬಕ್ಕೆ ಮನೆ ಕಟ್ಟಲು ಭೂಮಿಪೂಜೆ ನೆರವೇರಿಸಿದ ಮಾಜಿ ಜಿ.ಪಂ.ಸದಸ್ಯ ಪಿ.ಎಂ.ಲತೀಫ್
ಸುಂಟಿಕೊಪ್ಪ : ಸಮೀಪದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯನ್ಮು ಕಟ್ಟಿಕೊಂಡು ತನ್ನ ಮಗನೊಂದಿಗೆ ವಾಸ ಮಾಡುತ್ತಿದ್ದ ವಯೋವೃದ್ಧೆ ಬೈರಿ ಅವರ ಹೀನಾಯ ಬದುಕಿನ ಪರಿಸ್ಥಿತಿಯನ್ನು ಮನಗಂಡ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್ ಅವರು ಬುಧವಾರ ಭೇಟಿ ನೀಡಿದಲ್ಲದೇ ಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಬುಧವಾರ ಸ್ಥಳಕ್ಕೆ ತೆರಳಿ ವೃದ್ಧೆ ಬೈರಿ ಮತ್ತು ಮಗ ವಿಶ್ವನಾಥ್ ಅವರ ಶೋಚನೀಯವಾಗಿ ಬದುಕು ಸಾಗಿಸುತ್ತಿರುವುದನ್ನು ಕಂಡು ಮರುಗಿದ ಅವರು ಒಂದು ತಿಂಗಳೊಳಗೆ ಮನೆಯ ಸಂಪೂರ್ಣ ಮಾಡಿಕೊಡುವುದಾಗಿ ತಿಳಿಸಿ ಸಾಂತ್ವನ ಹೇಳಿದರು. ವೃದ್ಧೆಯೆ ಮನೆಯ ಪರಿಸ್ಥಿತಿಯ ಬಗ್ಗೆ ಸ್ಥಳೀಯ ಗ್ರಾಮಪಂಚಾಯಿತಿ ಯಾವುದೇ ಪರಿಹಾರ ಕಂಡುಕೊಳ್ಳದ ಹಿನ್ನಲೆಯಲ್ಲಿ ಶಾಸಕ ಮಂತರ್ ಗೌಡ ಅವರೊಂದಿಗೆ ಚರ್ಚಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಮನೆ ನಿರ್ಮಿಸಲು ಮುಂದಾಗಿ ಅಗತ್ಯ ಸಲಕರಣೆಗಳನ್ನು ಲಾರಿಯ ಮೂಲಕ ತಂದು ಮನೆ ನಿರ್ಮಾಣಕ್ಕೆ ಮುಂದಾಗಿರುವುದು ಸಾರ್ವಜನಿಕ ವಲಯಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಅವರು,ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ಮಲ್ಲಿಕಾರ್ಜುನ ಕಾಲೋನಿಯಲ್ಲಿರುವ ಈ ಬಡ ವೃದ್ಧೆಯು ಕೆಸರಿನ ನೆಲದಲ್ಲಿ ಜೀವನ ನಡೆಸುತ್ತಿರುವುದು ಬೇಸರದ ಸಂಗತಿ. ಯಾವುದೇ ಅಧಿಕಾರಿಗಳು ಪರಿಹಾರ ಕಂಡುಕೊಳ್ಳದೇ ಇರುವುದರಿಂದ ಶಾಸಕರೊಂದಿಗೆ ಮಾತನಾಡಿ ಈ ನಿರ್ಧಾರ ಕೈಗೊಂಡಿದ್ದೇನೆ.ಈಗಾಗಲೇ ಕಾಮಗಾರಿಗೆ ಚಾಲನೆ ನೀಡಿದ್ದು, ಒಂದು ತಿಂಗಳೊಳಗೆ ಮನೆ ನಿರ್ಮಿಸಿ ವೃದ್ಧೆಗೆ ಹಸ್ತಾಂತರಿಸಲಾಗುವುದು ಎಂದರು.