ಮಾಧ್ಯಮ ಸ್ಪಂದನದಿಂದ ಸೈರಸ್ ಆಸ್ಪತ್ರೆಯಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಮಾಧ್ಯಮ ಸ್ಪಂದನದಿಂದ ಸೈರಸ್ ಆಸ್ಪತ್ರೆಯಲ್ಲಿ  ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕುಶಾಲನಗರ: ಮಾಧ್ಯಮ ಸ್ಪಂದನ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸೈರಸ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಕೊಡಗಿನ ಪತ್ರಕರ್ತರು ಮತ್ತು ಅವರ ಕುಟುಂಬಸ್ಥರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸೈರಸ್ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.

ಮಾಧ್ಯಮ ಸ್ಪಂದನ ಸದಸ್ಯ ಕೆ.ಎಂ. ಇಸ್ಮಾಯಿಲ್ ಕಂಡಕೆರೆ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ 30ಕ್ಕೂ ಹೆಚ್ಚು ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರು ಆರೋಗ್ಯ ತಪಾಸಣೆಯ ಸೌಲಭ್ಯ ಪಡೆದುಕೊಂಡರು.

ಶಿಬಿರದಲ್ಲಿ ಹೃದ್ರೋಗ ತಜ್ಞರ ಸಲಹೆ, ರಕ್ತದಲ್ಲಿನ ಯಾದೃಚ್ಛಿಕ ಸಕ್ಕರೆ ಮಟ್ಟ (GRBS) ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಹೃದಯದ ವಿದ್ಯುತ್ ಚಟುವಟಿಕೆ ಪರೀಕ್ಷೆ (ECG), ಎಕೋ (Echo) ಹಾಗೂ ಟ್ರೆಡ್‌ಮಿಲ್ ಪರೀಕ್ಷೆ (TMT) ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಧ್ಯಮ ಸ್ಪಂದನ ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಕರ್ತರು ಮತ್ತು ಅವರ ಕುಟುಂಬಸ್ಥರ ಆರೋಗ್ಯದ ಕಾಳಜಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ ಸೈರಸ್ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಸೈರಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಟಿ.ಪಿ. ಜಿನಾಶ್ ಮಾತನಾಡಿ, "ಪತ್ರಕರ್ತರು ಸಮಾಜದ ಅಮೂಲ್ಯ ಆಸ್ತಿ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ ಈ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿರುವುದು ಸಂತಸದ ವಿಷಯವಾಗಿದೆ," ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಉಪಾಧ್ಯಕ್ಷ ವಾಸು ಆಚಾರ್ಯ, ನಿರ್ದೇಶಕರಾದ ಟಿ.ಆರ್. ಪ್ರಭುದೇವ್ ಹಾಗೂ ಆರ್. ಸುಬ್ರಮಣಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್. ಸವಿತಾ ರೈ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ಶಿವರಾಜ್, ಉಪಾಧ್ಯಕ್ಷ ಮೊಹಮ್ಮದ್ ಮುಸ್ತಫಾ, ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಕೆ. ರೆಜಿತ್ ಕುಮಾರ್, ಉಪಾಧ್ಯಕ್ಷ ಪುತ್ತಂ ಪ್ರದೀಪ್ ಬಾಲನ್, ಖಜಾಂಚಿ ಡಾ. ಹೇಮಂತ್ ಕುಮಾರ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವಿ.ವಿ. ಅರುಣ್ ಕುಮಾರ್, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕ ಜಯಪ್ರಕಾಶ್, ಮಾಧ್ಯಮ ಸ್ಪಂದನ ರಕ್ತದಾನ ಶಿಬಿರದ ಸಂಚಾಲಕ ಕೆ.ಬಿ. ಶಂಶುದ್ದೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.