ವಿಬಿ ಜಿ ರಾಮ್ ಜಿ ಯೋಜನೆ ಪ್ರಗತಿಗೆ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಸೂಚನೆ

Aug 25, 2026 - 18:04
 0  24
ವಿಬಿ ಜಿ ರಾಮ್ ಜಿ ಯೋಜನೆ ಪ್ರಗತಿಗೆ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಸೂಚನೆ

ಮಡಿಕೇರಿ ಆ.25:-ನೂತನವಾಗಿ ಆರಂಭಗೊಂಡಿರುವ ವಿಬಿ ಜಿ ರಾಮ್ ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಕೊಡಗು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ತಿಳಿಸಿದ್ದಾರೆ. 

ವಿರಾಜಪೇಟೆ ತಾಲೂಕು ಪಂಚಾಯಿತಿಯ ಸಾಮಥ್ರ್ಯ ಸೌಧದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ವಿಬಿ ಜಿ ರಾಮ್ ಜಿ ಯೋಜನೆಯಡಿ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದ್ದು, ಈ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  

ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸಬೇಕು. ಅಂತರ್ಜಲ ಅಭಿವೃದ್ದಿಗೆ ಒತ್ತು ನೀಡಬೇಕು. ಈಗಾಗಲೇ ಗ್ರಾ.ಪಂ.ಗಳಿಂದ ಸಲ್ಲಿಕೆಯಾಗಿರುವ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ನಿರೀಕ್ಷೆಗೆ ಅನುಗುಣವಾಗಿ ಮಾನವ ದಿನಗಳನ್ನು ಸೃಜಿಸುವಂತೆ ತಿಳಿಸಿದರು. 

 ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೃಷಿಕರಿಗೆ ದನದ ಕೊಟ್ಟಿಗೆ, ಹಂದಿ ಶೆಡ್, ಕೋಳಿ ಶೆಡ್ ಮತ್ತು ವಿವಿಧ ವೈಯಕ್ತಿಕ ಹಾಗೂ ಸಮುದಾಯಾಧಾರಿತ ಕಾಮಗಾರಿ ಒಳಗೊಂಡಂತೆ 318 ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಈಗಾಗಲೇ ಜಿಲ್ಲೆಯಾದ್ಯಂತ ಜಾಬ್ ಕಾರ್ಡ್ ಮೇಳ ಹಮ್ಮಿಕೊಂಡಿದ್ದು, ಗ್ರಾಮೀಣ ಜನರು ಇದರ ಸದುಪಯೋಗ ಪಡೆಯಲು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ತಾಕೀತು ಮಾಡಿದರು. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ಭಾಸ್ಕರ್ ಅವರು ಮಾತನಾಡಿ ಗ್ರಾ.ಪಂ.ಗಳಿಗೆ ಎಫ್.ಟಿ.ಕೆ ಕಿಟ್ ಗಳನ್ನು ನೀಡಲಾಗಿದ್ದು, ಆ ಮೂಲಕ ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ತಿಳಿಸಿದರು.

ಜಲ್ ಜೀವನ್ ಮಿಷನ್-ಕಾಮಗಾರಿಗಳು ಇನ್ನೂ ಮುಕ್ತಾಯವಾಗದೆ ಇರುವುದನ್ನು ಆದಷ್ಟು ಬೇಗ ಮುಕ್ತಾಯಗೊಳಿಸಿ, ಕುಡಿಯುವ ನೀರಿನ ಸಮಸ್ಯೆಗಳು ಬಾರದ ರೀತಿಯಲ್ಲಿ ನೋಡಿಕೊಳ್ಳಿ. ಯಾವುದೇ ಗ್ರಾಮ ಪಂಚಾಯಿತಿಗಳಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿ ಸಮಸ್ಯೆ ಕಂಡುಬಂದಲ್ಲಿ ತುರ್ತಾಗಿ ಸ್ಪಂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ.ಪಂ.ಸಿಇಒ ಅವರು ಸೂಚಿಸಿದರು.

ಭಾರತ್ ಜೋಡೋ ಯುವಕ ಸಂಘದ ನೋಂದಣಿ ಕಾರ್ಯವನ್ನು ಚುರುಕುಗೊಳಿಸುವಂತೆ ತಿಳಿಸಿದರು. ಪ್ರತಿ ಗ್ರಾ.ಪಂ.ಗಳಲ್ಲಿಯೂ ಕನಿಷ್ಠ 100 ಜನ ಯುವಕ/ಯುವತಿಯರ ಹೆಸರು ನೋಂದಾಯಿಸುವಂತೆ ಸೂಚಿಸಿದರು. (16 ರಿಂದ 35 ವರ್ಷದೊಳಗಿನ)

ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಕಾಲಮಿತಿ ಒಳಗೆ ಗ್ರಾಮ ಪಂಚಾಯಿತಿಗಳಲ್ಲಿ ಪ್ರಗತಿ ಸಾಧಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.

ಒಟ್ಟಾರೆಯಾಗಿ ಎರಡೂ ತಾಲೂಕುಗಳಲ್ಲಿಯೂ ಅಭಿವೃಧ್ಧಿ ಕಾಮಗಾರಿಗಳಿಗೆ ಯಾವುದೇ ತೊಡಕಾಗದಂತೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಕಿವಿಮಾತು ಹೇಳಿದರು. 

ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್, ಗ್ರಾಮೀಣ ಉದ್ಯೋಗ ಸಹಯಕ ನಿರ್ದೇಶಕರಾದ ಶ್ರೀನಿವಾಸ್, ವಿರಾಜಪೇಟೆ ಮತ್ತು ಪೆÇನ್ನಂಪೇಟೆ ತಾಲೂಕಿನ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು, ವಿಬಿ ಜಿ ರಾಮ್ ಜಿ ಯೋಜನೆಯ ಜಿಲ್ಲಾ ಮತ್ತು ತಾಲೂಕು ತಾಂತ್ರಿಕ ಸಿಬ್ಬಂದಿಗಳು ಇತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0