ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಅವರಿಗೆ ವಿಜ್ಞಾನಿ ಡಾ ಡಾರ್ವಿನ್ ಪ್ರಶಸ್ತಿ

ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ  ಟಿ.ಜಿ.ಪ್ರೇಮಕುಮಾರ್ ಅವರಿಗೆ ವಿಜ್ಞಾನಿ ಡಾ ಡಾರ್ವಿನ್ ಪ್ರಶಸ್ತಿ

ಕುಶಾಲನಗರ, ಜೂ.29: ಚಿತ್ರದುರ್ಗದ ತಾರಾಮಂಡಲ & ಪುಟಾಣಿ ವಿಜ್ಞಾನದ ಸಂಸ್ಥೆಯ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಭಾನುವಾರ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ದ್ವಿ ಶತಮಾನೋತ್ಸವದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು)ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಅವರಿಗೆ ರಾಜ್ಯಮಟ್ಟದ ಡಾರ್ವಿನ್ ವಿಜ್ಞಾನ ಶಿಕ್ಷಕ ಪ್ರಶಸ್ತಿ ಲಭಿಸಿದೆ.

 ಶಾಲಾ ವಿಜ್ಞಾನ ಕಾರ್ಯಕ್ರಮಗಳ ಯಶಸ್ಸಿನ ಕ್ರಿಯಾಶೀಲ ಶಿಕ್ಷಕರಿಗೆ ಕೊಡಮಾಡುವ ಈ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಖ್ಯಾತಿ ಹಿರಿಯ ವಿಜ್ಞಾನಿ ಡಾ ರಾಮಕೃಷ್ಣ ಅವರು ಪ್ರೇಮಕುಮಾರ್ ಅವರಿಗೆ ನೀಡಿ ಗೌರವಿಸಿದರು. ಮಕ್ಕಳಲ್ಲಿ ವಿಜ್ಞಾನ ವಿಷಯ ಕಲಿಕೆಯಲ್ಲಿ ಆಸಕ್ತಿ ಬೆಳೆಸುವುದು ಸೇರಿದಂತೆ ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ವಿದ್ಯಾರ್ಥಿಗಳು ಭವಿಷ್ಯದ ವಿಜ್ಞಾನಿಗಳಾಗಿ ರೂಪುಗೊಳ್ಳುವ ದಿಸೆಯಲ್ಲಿ ಜಿಲ್ಲೆಯಲ್ಲಿ ವಿವಿಧ ವಿಜ್ಞಾನ/ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಪ್ರೇಮಕುಮಾರ್ ಅವರು ತಮ್ಮನ್ನು ಕಳೆದ 3 ದಶಕಗಳಿಂದ ತೊಡಗಿಸಿಕೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಕೈಗೊಳ್ಳುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಸಮಾವೇಶ ಸಂಘಟಿಸುವ ಮೂಲಕ ಪ್ರತಿ ವರ್ಷ ಜಿಲ್ಲೆಯಿಂದ 2-3 ಬಾಲ ವಿಜ್ಞಾನಿಗಳು ರಾಷ್ಟ್ರಮಟ್ಟದಲ್ಲಿ ವೈಜ್ಞಾನಿಕ ಯೋಜನಾ ಪ್ರಬಂಧ‌ಮಂಡಿಸಲು ಆಯ್ಕೆಯಾಗುತ್ತಿರುವುದು ಇವರ ವಿಜ್ಞಾನ ಸಂಘಟನೆಗೆ ಸಿಕ್ಕ ಪ್ರತಿಫಲವಾಗಿದೆ.

ಜಿಲ್ಲಾಮಟ್ಟದಲ್ಲಿ ಹಾಗೂ ಜಿಲ್ಲೆಯಲ್ಲಿ ಶಾಲಾ- ಕಾಲೇಜುಗಳಲ್ಲಿ ಪವಾಡ ಬಯಲು ರಹಸ್ಯ ಬಯಲು ಕಾರ್ಯಕ್ರಮಗಳ ಸಂಘಟನೆ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ವಿದ್ಯಾರ್ಥಿಗಳಿಗೆ ವಿಜ್ಞಾನ ಉಪನ್ಯಾಸ ಸ್ಪರ್ಧೆ, ವಿಜ್ಞಾನ ಗೋಷ್ಠಿ, ವಿಜ್ಞಾನ ರಸಪ್ರಶ್ನೆ, ವಿಜ್ಞಾನ ವಸ್ತು ಪ್ರದರ್ಶನ, ವಿದ್ಯಾರ್ಥಿ- ವಿಜ್ಞಾನಿ ನೇರ ಸಂವಾದ ಗೋಷ್ಠಿ ಸೇರಿದಂತೆ ವಿಜ್ಞಾನ ಸಂವಹನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸುತ್ತಾ ಬಂದಿದ್ದಾರೆ.

 ಈ ಹಿನ್ನೆಲೆಯಲ್ಲಿ ಪ್ರೇಮಕುಮಾರ್ ಅವರು ವಿಜ್ಞಾನ ಕ್ಷೇತ್ರ ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ ಡಾರ್ವಿನ್ ವಿಜ್ಞಾನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಾರಾಮಂಡಲದ ಸಂಸ್ಥಾಪಕರಾದ ಚಳ್ಳಕೆರೆ ಯರ್ರೀಸ್ವಾಮಿ ತಿಳಿಸಿದ್ದಾರೆ. ಈ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜ್ಞಾನ ಸಂವಹನಕಾರರಾದ ಡಾ ಎಚ್.ಎಸ್ ನಿರಂಜನ ಆರಾಧ್ಯ, ಡಾ ವಸುಂಧರಾ ಭೂಪತಿ, ಡಾ ಎಚ್.ಆರ್.ಸ್ವಾಮಿ, ನಾಗೇಶ್ ಅರಳಕುಪ್ಪೆ ಇತರರು ಪಾಲ್ಗೊಂಡಿದ್ದರು.