ಕುಂಬೂರಿನಲ್ಲಿ 31 ಎಕರೆ ಪೈಸಾರಿ ಜಾಗವನ್ನು ನಿವೇಶನ ರಹಿತರಿಗೆ ಮಂಜೂರಾತಿ ಮಾಡಲು ಎಚ್.ಎಂ‌ ಸೋಮಪ್ಪ ಆಗ್ರಹ

May 18, 2026 - 16:38
 0  415
ಕುಂಬೂರಿನಲ್ಲಿ 31 ಎಕರೆ ಪೈಸಾರಿ ಜಾಗವನ್ನು ನಿವೇಶನ ರಹಿತರಿಗೆ ಮಂಜೂರಾತಿ ಮಾಡಲು ಎಚ್.ಎಂ‌ ಸೋಮಪ್ಪ ಆಗ್ರಹ

ಸೋಮವಾರಪೇಟೆ: ತಾಲ್ಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬೂರು ಗ್ರಾಮದ ಸರ್ವೆ ಸಂಖ್ಯೆ 125/1 ರಲ್ಲಿ ಲಭ್ಯವಿರುವ 31 ಎಕರೆ ಪೈಸಾರಿ ಜಾಗವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ನಿವೇಶನ ರಹಿತರಿಗೆ ಮಂಜೂರಾತಿ ಮಾಡಬೇಕೆಂದು ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಹಾಗೂ ಆದಿ ದ್ರಾವೀಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಎಚ್.ಎಂ. ಸೋಮಪ್ಪ ಆಗ್ರಹಿಸಿದರು.

ನಿವೇಶನ ಕೋರಿ ಕಳೆದ 20 ವರ್ಷಗಳಿಂದ ಅರ್ಹರು ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಜಿಲ್ಲೆಯಲ್ಲಿ ಇಂದಿಗೂ ಸುಮಾರು 5 ರಿಂದ 6 ಸಾವಿರ ಕೃಷಿ ಕಾರ್ಮಿಕರು ವಾಸಕ್ಕೆ ಯೋಗ್ಯವಲ್ಲದ ಲೈನ್ ಮನೆ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು, ಅವರಿಗೆ ನಿವೇಶನ ಒದಗಿಸುವಂತೆ ನಿರಂತರ ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

2024ರಲ್ಲಿ ಮಡಿಕೇರಿಯಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಮುಖ್ಯಮಂತ್ರಿ ಅವರಿಗೆ ಕೂಡ ಮನವಿ ಸಲ್ಲಿಸಲಾಗಿತ್ತು. ಜೊತೆಗೆ ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತಕ್ಕೂ ಮನವಿ ನೀಡಿ ನಿವೇಶನ ಮಂಜೂರಾತಿಗೆ ಒತ್ತಾಯಿಸಲಾಗಿದೆ ಎಂದು ಹೇಳಿದರು.

ಮಾದಾಪುರ ಗ್ರಾ.ಪಂ ವ್ಯಾಪ್ತಿಯ 500ಕ್ಕೂ ಅಧಿಕ ಅರ್ಜಿದಾರರು ಕುಂಬೂರು ಗ್ರಾಮದ ಸರ್ವೆ ಸಂಖ್ಯೆ 125/1 ರಲ್ಲಿರುವ ಜಾಗ ನಿವೇಶನದ ರೂಪದಲ್ಲಿ ಲಭಿಸುವ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರು ಈಗಾಗಲೇ ಸಂಬಂಧಿಸಿದ ಪಂಚಾಯಿತಿಗಳಿಗೆ ಅರ್ಜಿ ಸಲ್ಲಿಸಿದ್ದು, ನಿವೇಶನ ವಿತರಿಸುವಾಗ ಅರ್ಜಿ ಸಲ್ಲಿಸಿದ ಹಿರಿತನದ ಆಧಾರದ ಮೇಲೆ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಕುಂಬೂರು ಗ್ರಾಮದ ಸರ್ವೆ ಸಂಖ್ಯೆ 125/1 ರಲ್ಲಿರುವ ಪೈಸಾರಿ ಜಾಗವನ್ನು ಮಾದಾಪುರ ಗ್ರಾ.ಪಂ ವ್ಯಾಪ್ತಿಯ ನಿವೇಶನ ರಹಿತ ಅರ್ಜಿದಾರರಿಗೆ ನೀಡಬೇಕು. ಅಲ್ಲದೆ, ಈಗಾಗಲೇ ಅಲ್ಲಿ ನೆಲೆಸಿರುವ ಸಣ್ಣ ಹಾಗು ಬಡ ಹಿಡುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದರು.

ಜಿಲ್ಲೆಯ ಇಬ್ಬರು ಶಾಸಕರು ಮುಖ್ಯಮಂತ್ರಿ ಅವರ ಗಮನಕ್ಕೆ ವಿಷಯವನ್ನು ತಂದು, ಶೀಘ್ರವೇ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

What's Your Reaction?

Like Like 2
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0