ಐನ್ ಮನೆಗಳಿಗೆ ದುಬಾರಿ ಕಂದಾಯ ಹೊರೆ - ಯುಕೊ ಖಂಡನೆ;ಕಂದಾಯ ವಿನಾಯಿತಿಗೆ ಮನವಿ, ತಪ್ಪಿದರೆ ತೀವ್ರ ಹೋರಾಟದ ಎಚ್ಚರಿಕೆ

Jun 2, 2026 - 12:01
 0  223
ಐನ್ ಮನೆಗಳಿಗೆ ದುಬಾರಿ ಕಂದಾಯ ಹೊರೆ - ಯುಕೊ ಖಂಡನೆ;ಕಂದಾಯ ವಿನಾಯಿತಿಗೆ ಮನವಿ, ತಪ್ಪಿದರೆ ತೀವ್ರ ಹೋರಾಟದ ಎಚ್ಚರಿಕೆ

ಮಡಿಕೇರಿ;ಕಂದಾಯ ನಿಗದಿ ನೆಪದಲ್ಲಿ ಕೊಡವರ ಐನ್ ಮನೆಗಳ ಮೇಲೆ ಗ್ರಾಮ ಪಂಚಾಯ್ತಿಯಿಂದ ಮನಸೋ ಇಚ್ಚೆ ಕಂದಾಯ ವಿಧಿಸುತ್ತಿರುವ ಕುರಿತು ದೂರುಗಳು ಬಂದಿದ್ದು, ಇದನ್ನು ತಕ್ಷವೇ ಪರಿಷ್ಕರಿಸಿ ಕೊಡಗಿನಲ್ಲಿರುವ ಐನ್ ಮನೆಗಳಿಗೆ ಸಂಪೂರ್ಣ ಕಂದಾಯ ವಿನಾಯಿತಿ ನೀಡುವಂತೆ ಯುನೈಟೆಡ್ ಕೊಡವ ಆರ್ಗನೈಸೇಷನ್ - ಯುಕೊ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ವಿವರಿಸಿರುವ ಅವರು, ಕೊಡಗಿನಲ್ಲಿರುವ ಐನ್ ಮನೆಗಳು ಕೊಡವರ ಪ್ರತಿ ಒಕ್ಕಕ್ಕೆ ಸಂಬಂದಿಸಿದ ಕುಲದೈವ ಕಾರೋಣರ ದೈವ ನೆಲೆಯಾಗಿದ್ದು, ಇದಕ್ಕೆ ಶತಮಾನಗಳ ಹಿನ್ನಲೆಯಿದೆ. ಅವಿಭಕ್ತ ಕುಟುಂಬ ಪದ್ದತಿಯನ್ನು ಅನುಸರಿಸುತ್ತಿದ್ದ ಕೊಡವರ ಹಿರಿಯರು ಶತಮಾನಗಳ ಹಿಂದೆಯೇ ಅಂದಿನ ಅವಶ್ಯಕತೆಗಳಿಗನುಗುಣವಾಗಿ, ಬೃಹತ್ ಗಾತ್ರದ ಐನ್ ಮನೆಗಳನ್ನು ನಿರ್ಮಿಸಿಕೊಂಡಿರುವುದಿದೆ. ಆ ಮೂಲಕ ಕೌಟುಂಬಿಕ ಆರಾಧನೆಗಳು ಹಾಗು ಆಚರಣೆಗಳನ್ನು ಐನ್ ಮನೆಯಲ್ಲಿಯೇ ತಲೆತಲಾಂತರಗಳಿಂದ ಇದುವರೆಗೂ ನಡೆಸಿಕೊಂಡು ಬರಲಾಗುತ್ತಿದೆ. ಇದೀಗಾಗಲೇ ಬಹುತೇಕ ಐನ್ ಮನೆಗಳಲ್ಲಿ ಅವಿಭಕ್ತ ಕೌಟುಂಬಿಕ ವಾಸ ಕಂಡುಬರುತ್ತಿಲ್ಲವಾದರೂ, ಐನ್ ಮನೆಯ ನಿರ್ವಹಣಾ ಕಾರಣಕ್ಕಾಗಿ ಆಯಾ ಕುಲಕ್ಕೆ ಸಮ್ಮಂದಿಸಿದ ಒಂದು ಕುಟುಂಬ ಸೇವಾರ್ಥ ಐನ್ ಮನೆಗಳಲ್ಲಿ ವಾಸಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ಕೆಲವು ಐನ್ ಮನೆಗಳಲ್ಲಿ ಯಾರೂ ವಾಸಿಸದೇ ಬೀಗ ಹಾಕಿ ಇಟ್ಟಿರುವ ಪರಿಸ್ಥಿತಿಗಳೂ ಇದೆ. ಈ ಐನ್ ಮನೆಗಳು ಸಮಸ್ತ ಕುಲಕ್ಕೆ ಸಂಬಂದಿಸಿದ ದೇವ ನೆಲೆಯಾಗಿದೆ. ಏನೇ ಇದ್ದರೂ ಇಂದಿನ ಪರಿಸ್ಥಿತಿಯಲ್ಲಿ ಐನ್ ಮನೆಗಳನ್ನು ನಿರ್ವಹಿಸಿಕೊಂಡು ಹೋಗುವುದೇ ಬಹುದೊಡ್ಡ ಸವಾಲಾಗಿರುವಾಗ, ಸ್ಥಳೀಯ ಸಂಸ್ಥೆಗಳು ಈ ರೀತಿಯಾಗಿ ದುಬಾರಿ ಕಂದಾಯ ವಿಧಿಸಲು ಮುಂದಾಗಿರುವುದು ಖಂಡನೀಯವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಐನ್ ಮನೆಗಳನ್ನು ಇಂದು ಕೊಡವ ಪರಂಪರೆಯ ದ್ಯೂತಕವಾಗಿ ಉಳಿಸಿಕೊಂಡು ನಿರ್ವಹಿಸಲಾಗುತ್ತಿದೆ. ಅದಕ್ಕಾಗಿ ವಾರ್ಷಿಕ ಬಹು ದೊಡ್ಡ ವೆಚ್ಚವನ್ನು ಕುಟುಂಬ ಸದಸ್ಯರು ಭರಿಸಬೇಕಾಗುತ್ತದೆ. ಇದಕ್ಕೇ ಹೆಣಗಾಡುವ ಪರಿಸ್ಥಿತಿಯಲ್ಲಿ ನಾವಿರುವಾಗ, ಈಗ ಏಕಾಏಕಿ ನಾಲ್ಕು ಪಟ್ಟು ಹೆಚ್ಚುವರಿ ಕಂದಾಯವನ್ನು ಹೇರುತ್ತಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಐನ್ ಮನೆಗಳಿಗೆ ಅವುಗಳ ಗಾತ್ರಗಳಿಗನುಸಾರ, ಚದರ ಅಡಿ ಲೆಕ್ಕಾಚಾರದಲ್ಲಿ ಹಾಗು ಪಟ್ಟಣ ಪಂಚಾಯ್ತಿ ಪುರ ಸಭೆ ವ್ಯಾಪ್ತಿಗೆ ಅನುಸಾರ ಕಂದಾಯ ಏರಿಕೆ ಮಾಡದಂತೆ ಒತ್ತಾಯಿಸಿರುವ ಮಂಜು ಚಿಣ್ಣಪ್ಪ, ಐನ್ ಮನೆಗಳಿಗೆ ಸಂಪೂರ್ಣ ಕಂದಾಯ ವಿನಾಯಿತಿಯನ್ನು ಘೋಷಿಸುವಂತೆ ಅವರು ಆಗ್ರಹಿಸಿದ್ದಾರೆ. 

ಈ ಕುರಿತಂತೆ ಶಾಸಕ ಪೊನ್ನಣ್ಣನವರ ಗಮನಕ್ಕೆ ತರಲಾಗುವುದು, ಹಾಗೆಯೇ ಸರ್ಕಾರವನ್ನೂ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು. 

ಹಾಗೆಯೇ ಅವರು ಎಲ್ಲಾ. ಐನ್ ಮನೆಗಳಿಗೆ ಕರೆ ನೀಡಿ ಯಾರೂ ಸಹ ದುಬಾರಿ ಕಂದಾಯವನ್ನು ಕಟ್ಟದಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಬಲವಂತವಾಗಿ ಕಂದಾಯವನ್ನು ವಸೂಲಿಮಾಡಲು ಮುಂದಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರತರದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ. 

ಐನ್ ಮನೆಗಳು ಈ ನಾಡಿನ ಪಾರಂಪರಿಕ ತಾಣಗಳಾಗಿದ್ದು , ಸಂಸ್ಕೃತಿಯ ಪತೀಕವಾಗಿ ನಿಂತಿರುವ ಸ್ಮಾರಕಗಳಾಗಿವೆ. ಇವುಗಳು ನಾಶವಾದರೆ ಈ ದೇಶದ ವೈವಿದ್ಯತೆಗಳೇ ನಾಶವಾದಂತೆ ಹಾಗು ಈ ದೇಶದ ಭವ್ಯ ಪರಂಪರೆಯೊಂದು ನಿರ್ನಾಮವಾದಂತೆಯೇ ಸರಿ. ಹೀಗಿರುವಾಗ ಐನ್ ಮನೆಗಳ ರಕ್ಷಣೆಗೆ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0