ಹೆಬ್ಬಾಲೆ : ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಮಟ್ಟದ ಗದ್ದೆ ನಾಟಿ ಹಬ್ಬ, ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ: ರೈತರು ಕೃಷಿಗೆ ಮಾರಕವಾಗುವ ಬೆಳೆಗಳನ್ನು ಬೆಳೆಯಬಾರದು : ಅಶ್ವತ್ಥನಾರಾಯಣ್

Aug 29, 2026 - 09:23
 0  93
ಹೆಬ್ಬಾಲೆ : ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ  ಜಿಲ್ಲಾಮಟ್ಟದ ಗದ್ದೆ ನಾಟಿ ಹಬ್ಬ, ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ:  ರೈತರು ಕೃಷಿಗೆ ಮಾರಕವಾಗುವ ಬೆಳೆಗಳನ್ನು ಬೆಳೆಯಬಾರದು : ಅಶ್ವತ್ಥನಾರಾಯಣ್

ಕುಶಾಲನಗರ : ರೈತರು ಹಣ ಆಸೆಗಾಗಿ ಫಲವತ್ತಾದ ಭೂಮಿಯನ್ನು ಮಾರಾಟ ಮಾಡುವುದಾಗಲಿ ಅಥವಾ ಕೃಷಿಗೆ‌ ಮಾರಕವಾದ ಬೆಳೆಯನ್ನು ಬೆಳೆಯುವುದನ್ನು ಮಾಡಬಾರದು ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಆದ ಬೆಂಗಳೂರು ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸಲಹೆ ನೀಡಿದರು. 

ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಸೋಮವಾರಪೇಟೆ ವತಿಯಿಂದ ಹೆಬ್ಬಾಲೆ ಗ್ರಾಮದ ಆದರ್ಶ ಅವರ ಗದ್ದೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ 8ನೇ ವರ್ಷದ ಜಿಲ್ಲಾಮಟ್ಟದ ಗದ್ದೆ ನಾಟಿ ಹಬ್ಬ ಹಾಗೂ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಕೆಸರುಗದ್ದೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಹಾಗೂ ರೈತ ನಮ್ಮ ದೇಶದ ಬೆನ್ನೆಲುಬು.ದೇಶದ ಅಭಿವೃದ್ದಿಯಲ್ಲಿ ಕೃಷಿ ಕ್ಷೇತ್ರ ಪಾತ್ರ ಮಹತ್ತರವಾದದ್ದು,ಈ ಹಿನ್ನೆಲೆಯಲ್ಲಿ ನಮ್ಮ ಸಾಂಪ್ರದಾಯಿಕ ಕೃಷಿಯನ್ನು ಉಳಿಸಿ ಬೆಳೆಸುವುದು ನಮ್ಮೇಲ್ಲರ ಹೊಣೆ ಎಂದರು.

ಈ ದಿನ‌ ಬಹಳ ವಿಶೇಷವಾಗಿದೆ.ಗದ್ದೆನಾಟಿ ಕಾರ್ಯದ‌ ಮೂಲಕ ಸಮಾಜಕ್ಕೆ ಸ್ಪಷ್ಟ ಸಂದೇಶವಿದೆ. ಕೃಷಿಯನ್ನು ಉಳಿಸಬೇಕು.ಭೂಮಿ ಉಳಿವಿನ ಜೊತೆ ನಮ್ಮ ಉಳಿವು ಇದೆ.ಫಲವತ್ತಾದ ಭೂಮಿಯನ್ನು ಹಣದ ಆಸೆಗೆ ಮಾರಬಾರದು.ಜೊತೆಗೆ ವಾಣಿಜ್ಯ ಬೆಳೆ ಶುಂಠಿಯನ್ನು ಬೆಳೆದು ನಮ್ಮ ಬಾಯಿಗೆ ಮಣ್ಣು ಹಾಕಿಕೊಳ್ಳುವ‌ ಕೆಲಸ ಆಗಬಾರದು ಎಂದು ಹೇಳಿದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ, ರೈತರು ಕಷ್ಟ ಪಟ್ಟು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ರೈತರ ಬದುಕು ಹಸನಾಗಬೇಕು.ಆದರೆ ಇತ್ತೀಚಿನ ವರ್ಷಗಳಲ್ಲಿ ಯುವ ಜನಾಂಗ ಕೃಷಿ ಕ್ಷೇತ್ರ ದಿಂದ ವಿಮುಖಗೊಂಡು ಉದ್ಯೋಗ ಅರಸಿಕೊಂಡು ನಗರ ಸೇರುತ್ತಿದ್ದಾರೆ.ಇದರಿಂದ ಸಾಂಪ್ರದಾಯಿಕ ಕೃಷಿ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

 ಕೃಷಿ ಕ್ಷೇತ್ರದ, ರೈತರ ಅಭ್ಯುದಯಕ್ಕೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ರೈತರು ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು.

ಮಾಜಿ ಸಚಿವ ಎಂ.ಪಿ.‌ಅಪ್ಪಚ್ಚು ರಂಜನ್ ಮಾತನಾಡಿ, 

ಇತ್ತೀಚಿನ ದಿನಗಳಲ್ಲಿ ಗದ್ದೆಗಳು ಕಾಫಿ ತೋಟಗಳಾಗಿ ಪರಿವರ್ತನೆಯಾಗುತ್ತಿವೆ. ಕಾಫಿ ತೋಟಗಳು ಶುಂಠಿ ಕೃಷಿಗೆ ಬದಲಾಗುತ್ತಿವೆ. ಗದ್ದೆಗಳನ್ನು ಕೃಷಿಕಾರ್ಯಕ್ಕೆ ಬಳಸಿಕೊಳ್ಳಬೇಕು ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಯಿಫಾ ಗೆಳೆಯರ ಬಗಳ ಕೃಷಿ ಕ್ಷೇತ್ರ ಉಳಿವಿಗಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದೆ ಎಂದರು.

ಯುವ ಜನಾಂಗ ಕೃಷಿಗೆ ಬಿಟ್ಟು ಉದ್ಯೋಗ ಅರಸಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗಬಾರದು ಎಂದರು.

ಈ ಸಂದರ್ಭ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ,ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ಉದ್ಯಮಿ ಪ್ರಸನ್ನ ಮಡಿಕೇರಿ, ಕೊಡಗು ಜಿಲ್ಲೆ ರೈತ ಸಂಘದ ಅಧ್ಯಕ್ಷ ಮನುಸೋಮಯ್ಯ, ಏರೋನಿಕ್ಸ್ ಮಾಲೀಕ ಕೀರ್ತಿಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೊಲ್ಲಿ ರಾಜಶೇಖರ್, ಶಿಕ್ಷಕ ಸಂಘದ ರಾಜ್ಯ ಕಾರ್ಯದರ್ಶಿ ಎಚ್.ಎಸ್.ಚೇತನ್, ಬಿಜೆಪಿ ಮುಖಂಡರಾದ ಬಿ.ಬಿ.ಭಾರತೀಶ್, ಗೌತಮ್,ಚಂದ್ರಶೇಖರ್ ಹೇರೂರು , ಶುಂಠಿ ವ್ಯಾಪಾರಿ ಎಚ್.ಎಸ್.ರಾಜಶೇಖರ್, ಶ್ರೀನಿವಾಸ್,ಶರತ್,ಮಾಜಿ ಸೈನಿಕ ಪುಟ್ಟೇಗೌಡ,ಪಟ್ಟ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ,ಸಹ ಕಾರ್ಯದರ್ಶಿ ಜಗದೀಶ್ ಬೋಪಣ್ಣ,ಖಜಾಂಚಿ ಮೋಹಿತ್ ತಿಮ್ಮಯ್ಯ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.ವಿಜಯ್ ಹಾನಗಲ್ಲು ಕಾರ್ಯಕ್ರಮ ನಿರೂಪಿಸಿದರು.

ಪ್ರೇಕ್ಷಕರ ಮನ ರಂಜಿಸಿದ ಕ್ರೀಡಾಕೂಟ : ಹೆಬ್ಬಾಲೆ ಗ್ರಾಮದ ಆದರ್ಶ ಅವರ ಗದ್ದೆಯಲ್ಲಿ ಏರ್ಪಡಿಸಿದ್ದ 8ನೇ ವರ್ಷದ ಜಿಲ್ಲಾಮಟ್ಟದ ಗದ್ದೆ ನಾಟಿ ಹಬ್ಬ ಹಾಗೂ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ ಪ್ರೇಕ್ಷಕರ ಹಾಗೂ ಕ್ರೀಡಾಪ್ರೇಮಿಗಳ ಮನರಂಜಿಸಿತು.ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಯುವಕರು ಹಾಗೂ ಯುವತಿಯರು ಹಾಗೂ ವಿದ್ಯಾರ್ಥಿಗಳು ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

 ವಾಲಿಬಾಲ್ ಹಾಗೂ ಹಗ್ಗಜಗ್ಗಾಟ,ಓಟ ಸ್ಪರ್ಧೆಗಳು ಪ್ರಮುಖ ಆಕರ್ಷಣೆ ಯಾಗಿತ್ತು. ತುಂತುರು ಮಳೆ ಹನಿ ಹಾಗೂ ಬಿಸುಲಿನ ವಾತಾವರಣದಲ್ಲಿ ನಡೆದ ಓಟದ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.ಕೆಸರುಗದ್ದೆಯ ಕ್ರೀಡಾ ಸ್ಪರ್ಧೆಗಳಲ್ಲಿ ಯುವಕ, ಯುವತಿಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಗಮನ ಸೆಳೆಯಿತು.ಮಹಿಳೆಯರು ಕೂಡ ಯಾವುದೇ ಹಿಂಜರಿಕೆಯಿಲ್ಲದೆ ಕೆಸರಿನ ಗದ್ದೆಗೆ ಇಳಿದು, ಒಬ್ಬರ ಮೇಲೊಬ್ಬರು ಕೆಸರು ಎರಚುತ್ತಾ ಖುಷಿ ಪಟ್ಟರು. ಕ್ರೀಡಾಕೂಟ ವೀಕ್ಷಣೆ ಆಗಮಿಸಿದ್ದ ನೂರಾರು ಕ್ರೀಡಾಪ್ರೇಮಿಗಳು ಗದ್ದೆ ಬದಿಯಲ್ಲಿ ನಿಂತು ಸಿಳ್ಳೆ,ಚಪ್ಪಾಳೆ ಹಾಕುತ್ತ ಕ್ರೀಡಾಳುಗಳನ್ನು ಹುರಿದುಂಬಿಸಿದರು.ಕೆಸರುಗದ್ದೆಯ ವಾತಾವರಣ ಕ್ರೀಡಾ ಉತ್ಸಾಹಕ್ಕೆ ಮತ್ತಷ್ಟು ಮೆರುಗು ನೀಡಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0