ಕೊಡಗಿನಲ್ಲಿ ಗುಡ್ಡ ಕಡಿತ, ರೆಸಾರ್ಟ್ ನಿರ್ಮಾಣ: ಜಲಸಂಘರ್ಷದ ಭೀತಿ
admincoorgdaily

ಮಡಿಕೇರಿ: ಕಾವೇರಿ ನದಿಯ ಜೀವನಾಡಿಯಾದ ಕೊಡಗಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗುಡ್ಡ ಕಡಿಯುವಿಕೆ, ಅಕ್ರಮ ವಾಣಿಜ್ಯ ಚಟುವಟಿಕೆಗಳಿಂದ ದಕ್ಷಿಣ ಭಾರತಕ್ಕೆ ಜಲಸಂಘರ್ಷದ ಭೀತಿ ಎದುರಾಗಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆ ಎಚ್ಚರಿಸಿದೆ.
ಜಿಲ್ಲಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲ್ಮ ಬೆಟ್ಟ ಪ್ರಕರಣ ಸೇರಿ ಜಿಲ್ಲೆಯಾದ್ಯಂತ ಪರಿಸರ ಅನುಮತಿಯಿಲ್ಲದೆ ರೆಸಾರ್ಟ್‌ಗಳು, ವಾಣಿಜ್ಯ ಯೋಜನೆಗಳ ಸಂಬಂಧ ಗುಡ್ಡ ಸಮತಟ್ಟು ಮಾಡುತ್ತಿವೆ. ಇದು ಕಾವೇರಿ ಹರಿವು ನಿಲ್ಲಿಸಿ ರಾಜ್ಯಗಳ ನಡುವೆ ಜಲಸಂಘರ್ಷಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ದೂರು ಸಲ್ಲಿಸಲಾಗಿದೆ. ಜಿಲ್ಲೆಯ ಎಲ್ಲಾ ಅಕ್ರಮ ಕಾಮಗಾರಿಗಳಿಗೆ ತಕ್ಷಣ ತಡೆಯಾಜ್ಞೆ ನೀಡಬೇಕು. ಜಿಲ್ಲಾಡಳಿತದಿಂದ ಸಮಗ್ರ ತನಿಖಾ ವರದಿ ಪಡೆಯಲು ಆಗ್ರಹಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿನು ಕುಶಾಲಪ್ಪ, ಗಿರೀಶ್ ಭೀಮಯ್ಯ, ಸೋಮಣ್ಣ ಇದ್ದರು.