ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಸಾರ್ವಜನಿಕ ಸೌಹಾರ್ದ ಸಮ್ಮೇಳನ; ಧರ್ಮಗಳ ಆಚರಣೆಯಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸಲು ಸಾಧ್ಯ; ಶಾಸಕ ಎ.ಎಸ್.ಪೊನ್ನಣ್ಣ

Apr 21, 2026 - 21:48
 0  175
ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಸಾರ್ವಜನಿಕ ಸೌಹಾರ್ದ ಸಮ್ಮೇಳನ;  ಧರ್ಮಗಳ ಆಚರಣೆಯಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸಲು ಸಾಧ್ಯ; ಶಾಸಕ ಎ.ಎಸ್.ಪೊನ್ನಣ್ಣ

ವರದಿ :ಝಕರಿಯ ನಾಪೋಕ್ಲು

 ನಾಪೋಕ್ಲು :ಸಮಾಜದಲ್ಲಿ ನಡೆಯುವ ಧರ್ಮಗಳ ಆಚರಣೆಯಿಂದ ಪರಸ್ಪರ ಶಾಂತಿ,ಸಾಮರಸ್ಯ ನೆಲೆಸಲು ಸಾಧ್ಯವೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ಹೇಳಿದರು.

ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಎಮ್ಮೆಮಾಡು ಮಖಾಂ ಉರೂಸ್ ನ ಅಂಗವಾಗಿ ನಡೆದ ಸಾರ್ವಜನಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

 ಎಮ್ಮೆಮಾಡು ಸರ್ವ ಧರ್ಮಗಳ ಸೌಹಾರ್ದತೆಯ ಸಂಕೇತವಾಗಿರುವ ಪುಣ್ಯ ಸ್ಥಳವಾಗಿದೆ. ಎಲ್ಲಾ ಧರ್ಮದವರು ಈ ಉರುಸ್ ನಲ್ಲಿ ಭಾಗವಹಿಸುವುದು ವಿಶೇಷ. ಸರ್ವಧರ್ಮೀಯರ ಸಮ್ಮಿಲನಕ್ಕೆ ಹಾಗೂ ಭಾರತದ ನಿಜವಾದ ಪರಂಪರೆಯನ್ನು ಸಾರುವುದಕ್ಕೆ ಉರೂಸ್ ಕಾರ್ಯಕ್ರಮ ನೈಜ ನಿದರ್ಶನವಾಗಿದೆ ಎಂದು ಬಣ್ಣಿಸಿದರು.ಇಂತಹ ಕಾರ್ಯಕ್ರಮ ನಾಡಿನ ಐಕ್ಯತೆ, ಸಹಬಾಳ್ವೆ ಹಾಗೂ ಸಾಮಾಜಿಕ ಏಳಿಗೆಗೆ ಕಾರಣವಾಗುತ್ತಿದೆ ಎಂದರು.ಸರ್ಕಾರ ಕಳೆದ ಮೂರು ವರ್ಷದಲ್ಲಿ ರಾಜ್ಯಾದ್ಯಂತ ಹಲವಾರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ನ್ಯಾಯ ಒದಗಿಸುವ ಯೋಜನೆ ರೂಪಿಸಿದೆ.

ಅದರಂತೆ ವಿರಾಜಪೇಟೆ ಕ್ಷೇತ್ರದಲ್ಲಿ ಹಲವಾರು ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಮುಂದೆಯೂ ಕೂಡ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ಉರೂಸ್ ಕಾರ್ಯಕ್ರಮಕ್ಕೆ ಶುಭ ಕೋರಿದರು.

 ಎಸ್ ಎಸ್ ಎಫ್ ರಾಜ್ಯಾಧ್ಯಕ್ಷರಾದ ಸುಫಿಯಾನ್ ಸಖಾಫಿ ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿ ಅಪಾರ ಧಾರ್ಮಿಕ ಕೇಂದ್ರಗಳನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಎಲ್ಲಾ ಧರ್ಮದವರು ತಮ್ಮದೇ ಆದ ಆಚಾರ,ವಿಚಾರ,ಸಂಸ್ಕೃತಿ ಪರಂಪರೆಯೊಂದಿಗೆ ಭಾವೈಕ್ಯತೆಯ ಸೌಹಾರ್ದಸಮಾಜ ನಿರ್ಮಾಣವಾಗಿದೆ ಎಂದರಲ್ಲದೆ ಎಮ್ಮೆಮಾಡು ಎಂಬ ಕುಗ್ರಾಮವನ್ನು ವಿಶ್ವಕ್ಕೆ ಪಸರಿಸಲು ಇಲ್ಲಿನ ಪವಾಡ ಪುರುಷರೆ ಕಾರಣ. ಅಧಿಕಾರ,ಅಸೆ ಪಟ್ಟವರು ಇವರಲ್ಲ ಜನರಸಂಕಷ್ಟಕ್ಕೆ ಸ್ಪಂದಿಸುವ ಮನಸ್ಸು ಇವರದ್ದಾಗಿದೆ.ಎಲ್ಲಿ ಸೂಫೀ ಸಂತರು ನೆಲೆಸಿದ್ದಾರೋ ಅಲ್ಲಿ ಭಾವೈಕ್ಯತೆ ಕಾಣಲು ಸಾಧ್ಯ ಎಂದರು.

 ಕೂರ್ಗ್ ಜಂಇಯ್ಯತುಲ್ ಉಲಮಾ ಜಿಲ್ಲಾಧ್ಯಕ್ಷ ಸಯ್ಯಿದ್ ಶಿಯಾಬುದ್ದೀನ್ ಕಿಲ್ಲೂರ್ ತಂಙಳ್ ಹಾಗೂ ಎಮ್ಮೆಮಾಡು ಮಸೀದಿಯ ಖತೀಬರಾದ ರಾಝಿಕ್ ಫೈಝಿ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯರಾದ ಸಯ್ಯಿದ್ ಅಶ್ರಫ್ ತಂಙಳ್ ಅದೂರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಮ್ಮೆಮಾಡು ಮುದರ್ರಿಸ್ ಹಂಝ ಸಖಾಫಿ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ,ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್, ಜಮಾಅತ್ ಉಪಾಧ್ಯಕ್ಷ ಚಂಬರಂಡ ಮಾಹಿನ್, ಮಾಜಿ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ,ವಖ್ಫ್ ಮಾಜಿ ಅಧ್ಯಕ್ಷ ಯಾಕೂಬ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ,ಎರ್ಮು ಹಾಜಿ,ನಾಪೋಕ್ಲು ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮಾನ್,ಕೆಎಂಜೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ ,ಜಮಾಅತ್ ಕಾರ್ಯದರ್ಶಿ ಸಯ್ಯಿದ್ ಝಕರಿಯ ತಂಙಳ್, ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್,ಅಶ್ರಫ್ ಜೌಹರಿ, ಸಯ್ಯಿದ್ ಸೈಫುದ್ದಿನ್ ತಂಙಳ್,ಕೊಂಡಂಗೇರಿ ಜಮಾಅತ್ ಅಧ್ಯಕ್ಷ ಯೂಸುಫ್ ಹಾಜಿ,ಹಂಸ ದೋರೂಟ್,ಸಹೀದಿಯಾ ಅನಾಥಾಲಯದ ಉಪಾಧ್ಯಕ್ಷ ಬಿ.ಯು.ಅಶ್ರಫ್,ಎಂ.ಎಚ್. ಮೊಹಮ್ಮದ್,ಜಮಾಅತ್ ಪದಾಧಿಕಾರಿಗಳು, ಮತ್ತಿತರ ಪ್ರಮುಖರು, ಉಪಸ್ಥಿತರಿದ್ದರು.

 ಉರೂಸ್ ಅಂಗವಾಗಿ ಮಸೀದಿಯಲ್ಲಿ ಮೌಲೂದ್ ಪಾರಾಯಣ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು.ಬಳಿಕ ನಡೆದ ಅನ್ನದಾನ ಕಾರ್ಯಕ್ರಮದಲ್ಲಿ ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.

 ಕಾರ್ಯಕ್ರಮವನ್ನು ಅಶ್ರಫ್ ಬಿ. ಯು. ನಿರೂಪಿಸಿದರು.ಝಕರಿಯ ತಂಙಳ್ ಸ್ವಾಗತಿಸಿ, ವಂದಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರ ನಿರ್ದೇಶನದಂತೆ ಮಡಿಕೇರಿ ಉಪವಿಭಾಗದ ಡಿವೈಎಸ್ ಪಿ ಸೂರಜ್ ಅವರ ಮಾರ್ಗದರ್ಶನದಂತೆ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಠಾಣೆಗಳ ಅಧಿಕಾರಿ ಸಿಬ್ಬಂದಿಳು ಉರೂಸ್ ಗೆ ಸೂಕ್ತ ಬಂದೋ ಬಸ್ತ್ ಕಲ್ಪಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0