ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನ ಕೊಲೆ: ಪತ್ನಿ–ಪ್ರಿಯಕರನ ಬಂಧನ

Nov 28, 2025 - 21:54
 0  1.3k
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನ ಕೊಲೆ:  ಪತ್ನಿ–ಪ್ರಿಯಕರನ ಬಂಧನ
Photo credit:Asiant news

ಬೆಂಗಳೂರು: ಗಂಗೊಂಡಗಳ್ಳಿಯ ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಬಸವರಾಜು (28) ಅವರನ್ನು ಪತ್ನಿ ಶರಣಮ್ಮ ಪ್ರಿಯಕರ ವೀರಭದ್ರನೊಡನೆ ಸೇರಿ ಕೊಲೆಗೈದು, ದೇಹವನ್ನು ಸುಟ್ಟು ಸಾಕ್ಷ್ಯ ನಾಶಪಡಿಸಿದ್ದಾಳೆ ಎಂದು ತನಿಖೆಯಿಂದ ಬಹಿರಂಗವಾಗಿದೆ. ಈ ಸಂಬಂಧ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಕಾಡಂಚಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಶವ ಅಪರಿಚಿತ ವ್ಯಕ್ತಿಯದ್ದೆಂದು ಆರಂಭದಲ್ಲಿ ಶಂಕಿಸಲಾಗಿತ್ತು. ದೇಹ ಸಂಪೂರ್ಣ ಕರಕಲಾಗಿದ್ದರಿಂದ ಗುರುತು ಪತ್ತೆಗೆ ತೊಂದರೆ ಎದುರಾದರೂ, ತಾಂತ್ರಿಕ ಮಾಹಿತಿ, ಸ್ಥಳ ಪರಿಶೀಲನೆ ನೆರವಿನಿಂದ ಪೊಲೀಸರು ಮೃತನನ್ನು ಯಾದಗಿರಿ ಜಿಲ್ಲೆಯ ಮೂಲದ ಬಸವರಾಜು ಎಂದು ಗುರುತಿಸಿದರು.

ಪೊಲೀಸರ ಮಾಹಿತಿ ಪ್ರಕಾರ, ಮದುವೆಯಾಗಿ ನಾಲ್ಕು ವರ್ಷಗಳೇ ಕಳೆದ ಬಳಿಕ ದಂಪತಿಯಲ್ಲಿ ಕುಟುಂಬ ಕಲಹ ಹೆಚ್ಚಾಗಿತ್ತು. ವೀರಭದ್ರನ ತಂದೆಯ ಬಳಿ ಗಾರೆ ಕೆಲಸ ಮಾಡುತ್ತಿದ್ದ ಬಸವರಾಜು–ಶರಣಮ್ಮ ದಂಪತಿಗೆ ಇದೇ ವೇಳೆ ವೀರಭದ್ರನ ಪರಿಚಯ ಬಂತು. ಕೆಲಸದ ನಡುವೆ ಬೆಳೆದ ಸಲುಗೆ ಅಕ್ರಮ ಸಂಬಂಧಕ್ಕೆ ತಿರುಗಿ, ಪತ್ನಿ–ಪ್ರಿಯಕರರು ಒಬ್ಬರನ್ನೊಬ್ಬರು ಬಿಟ್ಟಿರಲಾರದ ಮಟ್ಟಿಗೆ ತಲುಪಿದ್ದರು. ಈ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಬಸವರಾಜುವನ್ನು ಕೊಲೆ ಮಾಡುವ ಯೋಜನೆ ರೂಪಿಸಿಕೊಂಡಿದ್ದರು.

 ನ. 19ರ ರಾತ್ರಿ ಮದ್ಯಪಾನ ಮಾಡಿ ಮಲಗಿದ್ದ ಬಸವರಾಜುವಿನ ಮೇಲೆ ವೀರಭದ್ರ ಮನೆಗೆ ಬಂದು ದಾಳಿ ನಡೆಸಿದ. ಭಾರವಾದ ಕಲ್ಲಿನ ತುಂಡಿನಿಂದ ತಲೆಗೆ ಹೊಡೆದ ವೀರಭದ್ರ, ನಂತರ ಶರಣಮ್ಮನೊಂದಿಗೆ ಸೇರಿ ಗಂಟಲಿಗೆ ನೇಣು ಬಿಗಿದು ಕೊಲೆಗೈದಿದ್ದಾರೆ. ಬಳಿಕ ಶವ ಸ್ಥಳಾಂತರಿಸಲು ಅನಿಲ್ ಎಂಬಾತನ ಸಹಾಯ ಪಡೆದಿದ್ದಾರೆ.

ರಾತ್ರಿ 12.30ರ ಹೊತ್ತಿಗೆ ಶವವನ್ನು ಹಳೆಯ ಬಟ್ಟೆಗಳಲ್ಲಿ ಸುತ್ತಿ ದೊಡ್ಡ ಚೀಲದಲ್ಲಿ ಹಾಕಿ ಬಿಳಿ ಬಣ್ಣದ ಕಾರಿನಲ್ಲಿ ಗಂಗೊಂಡಗಳ್ಳಿಯ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಈ ಮೂಲಕ ಸಾಕ್ಷ್ಯ ನಾಶಪಡಿಸುವ ಯತ್ನ ನಡೆಸಿದ್ದಾರೆ.

ಘಟನೆಯ ನಂತರ “ಗಂಡ ಕಾಣೆಯಾಗಿದ್ದಾನೆ” ಎಂದು ಶರಣಮ್ಮ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಳು. ಆದರೆ ಶವ ಪತ್ತೆಯಾದ ಸ್ಥಳದ ಸಿಸಿಟಿವಿ ದೃಶ್ಯ, ಮೊಬೈಲ್ ಲೊಕೇಶನ್ ಹಾಗೂ ತಾಂತ್ರಿಕ ಸುಳಿವಿನ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರೆಸಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 1
Sad Sad 0
Wow Wow 0