ಮತ ನೀಡಿದ ಸಮುದಾಯದ ಕಡೆಗಣನೆ,ಮತ ನೀಡದ ಸಮುದಾಯದ ಓಲೈಕೆ:ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಟೀಕೆ
ಮಡಿಕೇರಿ;ಕೊಡಗು ಜಿಲ್ಲೆಯಲ್ಲಿ ಶೇಕಡಾ 99% ರಷ್ಟು ಮುಸ್ಲಿಮರು ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ,ಜಾತ್ಯತೀತ ಮನೋಭಾವದ ಶಾಸಕರು ಗೆಲುವು ಸಾಧಿಸಬೇಕೆಂದು ಮತ ನೀಡಿದ್ದರು.ಕೊಡಗಿನಲ್ಲಿ ಕೇವಲ 10% ರಷ್ಟು ಅಲ್ಪಸಂಖ್ಯಾತ ಮತಗಳು ವಿಭಜನೆಯಾಗಿದ್ದರೆ ಕೊಡಗಿನಲ್ಲಿ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸುತ್ತಿರಲಿಲ್ಲ. ಆದರೆ ಜಿಲ್ಲೆಯಲ್ಲಿ ಶಾಸಕರು ಅಲ್ಪಸಂಖ್ಯಾತರ ಮುಸ್ಲಿಮರ ಕಾಲೋನಿಗೆ ಅಭಿವೃದ್ಧಿಗೆ ಅನುದಾನ ನೀಡದೆ,ಮತ ನೀಡದ ಜನಾಂಗದ ಒಲೈಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಕದ ಅಧ್ಯಕ್ಷ ಜಾಸೀರ್ ಮೂರ್ನಾಡು ಆರೋಪಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತಿರುವ ಮುಸ್ಲಿಮರನ್ನು ಕಾಂಗ್ರೆಸ್ ಸಂಪೂರ್ಣ ಕಡೆಗಣಿಸುತ್ತಿದೆ. ಅಲ್ಪಸಂಖ್ಯಾತರು ಹೆಚ್ಚು ವಾಸುವಿರುವ ಗ್ರಾಮದಲ್ಲಿ ರಸ್ತೆಯ ಅಭಿವೃದ್ಧಿಗೆ ಅನುದಾನ ಬಗ್ಗೆ ಮಾತನಾಡಿದರೆ ನೀವು ಬಿಜೆಪಿಯ ಮಾಜಿ ಶಾಸಕರಿಗೆ ಕೇಳಿ,ಎಂಬ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಮರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು,ಮುಸ್ಲಿಮರು ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಶಾಸಕರು ಮರೆಯಬಾರದು ಎಂದು ಜಾಸೀರ್ ಮೂರ್ನಾಡು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಜೀದ್ ಚೋಕಂಡಳ್ಳಿ,ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸೈಫುದ್ದೀನ್ ಚಾಮಿಯಾಲ,ಮಡಿಕೇರಿ ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಫ್,ಕುಶಾಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಶಿಯಾಬುದ್ದೀನ್ ವಿಪಿಎಸ್ ಇದ್ದರು.