Kodagu

ಕರಿಕೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಭೆ

admincoorgdaily

ಕರಿಕೆ: ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಾಲಚಂದ್ರನ್ ನಾಯರ್‌ ಅವರ ಅಧ್ಯಕ್ಷತೆಯಲ್ಲಿ ಕರಿಕೆ ಆಯುರ್ವೇದ ಆಸ್ಪತ್ರೆಯಲ್ಲಿ ಡೆಂಗ್ಯೂ ಮಾಸಾಚರಣೆಯಲ್ಲಿ ಡೆಂಗ್ಯೂ ನಿಯಂತ್ರಣ ಕುರಿತು ಅರಿವು ಮೂಡಿಸುವ ಸಭೆ ನಡೆಯಿತು. ನಂತರ ಮಾತನಾಡಿದ ನಾಯರ್ ನಮ್ಮ ಗಡಿಭಾಗದಲ್ಲಿ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಔಷಧ ಸರಬರಾಜು ಮಾಡಿ ಕೊಡುವಂತೆ ಮತ್ತು ತುರ್ತು ಸಂದರ್ಭದಲ್ಲಿ ಇಲಾಖೆಯೊಂದಿಗೆ ಗ್ರಾಮ ಪಂಚಾಯಿತಿಯ ಸಹಕಾರ ನೀಡುವುದಾಗಿ ತಿಳಿಸಿದರು.

 ಸಭೆಯಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ,ಸನತ್ (ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿಗಳು)ರವರು ಸಭೆಯಲ್ಲಿ ಮಾತನಾಡಿ, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ ದಲ್ಲಿ ಸಮುದಾಯದ ಸಹಕಾರ ಬಹಳ ಮುಖ್ಯವಾಗಿದೆ ಎಂದರು. ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕೂಂಗುನ್ಯ, ಕ್ಷಯರೋಗ ಹಾಗೂ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಪ್ರಸ್ತುತ ಆಹಾರ ಪದ್ದತಿ ಮತ್ತು ಜೀವನ ಶೈಲಿ ಬದಲಾಗಬೇಕಾಗಿದೆ. ಉದಾಸೀನ ಮನೋಭಾವದಿಂದ ಹಲವಾರು ಕಾಯಿಲೆಗಳು ನಮ್ಮನ್ನು ಹಿಂಬಾಲಿಸುತಿರುವುದಾಗಿ ಹೇಳಿದರು. ಅದಕ್ಕಾಗಿ ಗೃಹ ಆರೋಗ್ಯ ಯೋಜನೆ ಅನುಷ್ಠಾನವಾಗುತ್ತಿದ್ದು ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಮನೆಮನೆಗೆ ತೆರಳಿ 14 ಕಾಯಿಲೆಗಳ ಕುರಿತು ಪರಿಶೀಲಿಸಿ ರೋಗ ಪತ್ತೆ ಮಾಡುವ ಮೂಲಕ ಚಿಕಿತ್ಸೆ ನೀಡಿ ಸ್ವಸ್ಥ ಆರೋಗ್ಯ ಸಮಾಜ ನಿರ್ಮಿಸುವ ಕಾರ್ಯದಲ್ಲಿ ಎಲ್ಲರೂ ಸಹಕಾರ ನೀಡುವಂತೆ ತಿಳಿಸಿದರು.

 ಸಭೆಯಲ್ಲಿ ಆಯುರ್ವೇದ ಆಸ್ಪತ್ರೆ ವೈದ್ಯರಾದ ಡಾ.ಪಲ್ಲವಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜಯಕುಮಾರಿ, ಶುಶ್ರಷಣಾಧಿಕಾರಿ ಸೌಮ್ಯ, ಮತ್ತು ಆಶಾ ಕಾರ್ಯಕರ್ತರು ಹಾಜರಿದ್ದರು. ವರದಿ: ನೌಫಲ್ ಕಡಂಗ