ಜೈಕಿರಣ್ ಗೆ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ

ಜೈಕಿರಣ್ ಗೆ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ

ಮಡಿಕೇರಿ :- ಬೆಂಗಳೂರಿನ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್‌ ವತಿಯಿಂದ ನೀಡಲಾಗುವ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಯನ್ನು ಬೆಂಗಳೂರಿನ ಜೈಕಿರಣ್ ಅವರಿಗೆ ನೀಡಲಾಗಿದೆ.

 ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ಪ್ರದಾನ, ರಾಜ್ಯಮಟ್ಟದ ಶಿಕ್ಷಕರ ಕವಿಗೋಷ್ಠಿ ಹಾಗೂ ಪುಸ್ತಕ ಲೋಕಾರ್ಪಣೆ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞರಾದ ಡಾ. ರಾಜೀವ ನೃಪತುಂಗ ಅವರನ್ನು ಕರ್ನಾಟಕ ಪ್ರೆಸ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ವಿಶೇಷ ಸೇವೆ ಗುರುತಿಸಿ ಅನೇಕ ಶಿಕ್ಷಕರಿಗೆ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬನವಾಸಿ ಕನ್ನಡಿಗರು ಕನ್ನಡಮಯ ಟ್ರಸ್ಟ್ ನ ಜೈಕಿರಣ್ ಅವರು ಸುಮಾರು ಹತ್ತು ವರ್ಷಗಳಿಂದ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು, ಕೊಡಗಿನ ಪ್ರವಾಹ ಹಾಗು ಉತ್ತರ ಕರ್ನಾಟಕದ ನೆರೆ ಸಂದರ್ಭದಲ್ಲಿ ನೀಡಿದ ಸೇವೆ, ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಪ್ರಾರಂಭಿಸಿ ಅನೇಕ ಸಂಘಟನೆಗಳು ಅದನ್ನು ಮುಂದುವರೆಸಲು ಅಡಿಗಲ್ಲು, ವಿವಿಧ ಸಂಘ ಸಂಸ್ಥೆಗಳ ಜೊತೆ ಸೇರಿ ಕೋವಿಡ್ ಸಮಯದಲ್ಲಿ ಸರ್ಕಾರದ ವಿವಿಧ ಅಂಗ ಸಂಸ್ಥೆಗಳ ಜೊತೆ ಸ್ವಯಂ ಸೇವಕರಾಗಿ, ಕೊಡಗಿನ ಸುತ್ತಮುತ್ತಲಿನ ಆದಿವಾಸಿ ಕುಟುಂಬಗಳಿಗೆ ಸಲ್ಲಿಸುತ್ತಿರುವ ಸೇವೆಗಳು, ಆನೆ ಮಾವುತರು ಹಾಗು ಕಾವಾಡಿಗಳಿಗೆ ನೀಡಿದ ಸೇವೆ ಇನ್ನೂ ಹಲವು ಸಮಾಜಿಕ ಸೇವೆ ಹಾಗು ಜನಪರತೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅದ್ಯಕ್ಷೆ ಹಾಗು ಸಾಹಿತಿಗಳಾದ ಡಾ. ಮಂಜುಳಾ ಪಾವಗಡ ಅವರು ತಿಳಿಸಿದ್ದಾರೆ.

ಇತಿಹಾಸ ತಜ್ಞ ಡಾ. ರಾಜೀವ ನೃಪತುಂಗ ಅವರನ್ನು ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ನ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿ ಆಯ್ಕೆಮಾಡಲಾಯಿತು ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು ಹಾಗು ಮಾಜಿ ಸಚಿವರಾದ ಬಿ.ಟಿ ಲಲಿತಾ ನಾಯಕ್, ಗಾಯಕರಾದ ಮೋಹನ್ ಕೃಷ್ಣ, ಇಂದು ಸಂಜೆ ಪತ್ರಿಕೆಯ ಸಂಪಾದಕರಾದ ಬಿ ವೈ ಪದ್ಮನಾಗರಾಜು, ಮಣ್ಣೇ ಮೋಹನ್, ಪಾರ್ವತಿ ಬಿ ಎ, ನಟರಾದ ಸ್ಮೈಲ್ ಶಿವು ಹಾಗು ಅನೇಕ ಗಣ್ಯರು ಪಾಲ್ಗೊಂಡಿದ್ದರು.