ಪತ್ರಕರ್ತರು ಸಮಾಜದ ಕಣ್ಣು-ಕಿವಿ ಇದ್ದಂತೆ ಕೊಡಗು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಡಿಕೇರಿ ಪ್ರಸನ್ನ ಅಭಿಪ್ರಾಯ

ಪತ್ರಕರ್ತರು ಸಮಾಜದ ಕಣ್ಣು-ಕಿವಿ ಇದ್ದಂತೆ ಕೊಡಗು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಡಿಕೇರಿ ಪ್ರಸನ್ನ ಅಭಿಪ್ರಾಯ

ಮಡಿಕೇರಿ: ಸಮಾಜದ ಕಣ್ಣು ಹಾಗೂ ಕಿವಿಯಾಗಿರುವ ಪತ್ರಕರ್ತರು, ಸತ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಮಾಜ ಸೇವಕ ಹಾಗೂ ಉದ್ಯಮಿ, ಲೀಡಿಂಗ್ ಎಡ್ಜ್ ಅಡ್ವಟೈಸಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಎಡಿಕೇರಿ ಪ್ರಸನ್ನ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಕೊಡಗು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದಿನವಿಡೀ ಸುದ್ದಿಯ ಹಿಂದಿರುವ ಪತ್ರಕರ್ತರು ವರ್ಷಕ್ಕೊಮ್ಮೆ ಸಂಭ್ರಮದಿಂದ ಕಳೆಯುವುದು ಶ್ಲಾಘನೀಯ ಎಂದ ಅವರು, ಸಮಾಜದ ಕಣ್ಣು ಹಾಗೂ ಕಿವಿಯಾಗಿರುವ ಪತ್ರಕರ್ತರು, ಸತ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಾರೆ. ಜತೆಗೆ ಮಾಧ್ಯಮ ಸ್ಪಂದನದ ಮೂಲಕ ಸಮಾಜದ ಕಣ್ಣೀರು ಒರೆಸುವ ಪತ್ರಕರ್ತರ ಸೇವೆ ಶ್ಲಾಘನೀಯ ಎಂದು ಪ್ರಸನ್ನ ಹೇಳಿದರು.

ನಾವು ಮಾಡುವ ಸಮಾಜ ಸೇವೆಯನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ನಿರಂತರ ಮಾಡುತ್ತಲೇ ಇರಬೇಕು ಎಂದ ಅವರು, ನಾವು ಮಾಡುವ ಸೇವೆಯನ್ನು ದೇವರು ಗಮನಿಸುತ್ತಲೇ ಇರುತ್ತಾನೆ. ಒಂದಲ್ಲ ಒಂದು ದಿನ ನಮ್ಮ ಸೇವೆಗೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ಪ್ರಸನ್ನ ಎಡಿಕೇರಿ ಹೇಳಿದರು. 

ಕೊಡಗು ಪ್ರೆಸ್ ಕ್ಲಬ್ ಮೂಲಕ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸಂಘ ಜೀವಿಯಾದ ಮನುಷ್ಯ ಏಕಾಂಗಿಯಾಗಿ ಬದುಕುವುದು ಅಸಾಧ್ಯ ಎಂದ ಅವರು, ಕೊಡಗು ಪ್ರೆಸ್ ಕ್ಲಬ್ ಮೂಲಕ ಸೌಹಾರ್ದ ಸಹಕಾರಿ ಬ್ಯಾಂಕ್ ಸ್ಥಾಪಿಸಿ, ಪತ್ರಕರ್ತರ ಸ್ವಾವಲಂಬಿ ಬದುಕಿಗೆ ಪ್ರಯತ್ನ ನಡೆಸಲಾಗಿದೆ. ಕೋವಿಡ್ ಸಂದರ್ಭ ಎಲ್ಲರಿಗೂ ಇದ್ದ ನಿರ್ಬಂಧ ಪತ್ರಕರ್ತರಿಗೆ ಇರಲಿಲ್ಲ. ಈ ಅವಕಾಶವನ್ನು ಸಮಾಜದ ಸ್ವಾಸ್ಥ್ಯಕ್ಕಾಗಿ ಮೀಸಲಿಟ್ಟು ಮಾಧ್ಯಮ ಸ್ಪಂದನ ಆರಂಭಿಸಿ, ಜನರ ಕಣ್ಣೀರೊರೆಸುವ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್.ಸವಿತಾ ರೈ ಮಾತನಾಡಿ, ಪ್ರಶಸ್ತಿಗಳು ಒಬ್ಬ ಪತ್ರಕರ್ತನನ್ನು ಸಮಾಜ ಗುರುತಿಸುವಂತೆ ಮಾಡುತ್ತವೆ. ಪ್ರಶಸ್ತಿಗಳು ಪತ್ರಕರ್ತರ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತವೆ ಎಂದು ಅವರು ಹೇಳಿದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರು ಸಮಾಜದಲ್ಲಿರುವ ಸಮಸ್ಯೆಗಳ ಬೆಳಕು ಚೆಲ್ಲುವಂತಾಗಬೇಕು. ಮುಖ್ಯವಾಗಿ ಕೊಡಗು ಜಿಲ್ಲೆಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ವರದಿಗಳು ಹೆಚ್ಚಾಗಬೇಕೆಂದು ಕಿವಿಮಾತು ಹೇಳಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನುಕಾರ್ಯಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಯನ್ನು ಸಂತೋಷ್ ರೈ, ಬಾಚರಣಿಯಂಡ ಅನುಕಾರ್ಯಪ್ಪ, ಹಿರಿಕರ ರವಿ ಅವರಿಗೆ ಪ್ರದಾನ ಮಾಡಲಾಯಿತು. ಅಲ್ಲದೇ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿ ಪ್ರಶಸ್ತಿ ಪಡೆದ ನವೀನ್ ಡಿಸೋಜ, ಹಿರಿಕರ ರವಿ, ಕೆಯುಡಬ್ಲ್ಯೂಜೆ ಪ್ರಶಸ್ತಿ ವಿಜೇತ ಇಸ್ಮಾಯಿಲ್ ಕಂಡಕರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯ ಸಂಘಕ್ಕೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಸಂಘದ ನೂತನ ಅಧ್ಯಕ್ಷ ಬಾಚರಣಿಯಂಡ ಅನುಕಾರ್ಯಪ್ಪ, ರಾಜ್ಯ ಸಂಘದ ನಿರ್ದೇಶಕಿ ಸವಿತಾ ರೈ, ಉದ್ಯಮಿ ಪ್ರಸನ್ನ ಎಡಿಕೇರಿ ಅವರನ್ನು ಸನ್ಮಾನಿಸಲಾಯಿತು.

ವಾರ್ಷಿಕ ಮಹಾಸಭೆ: ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಮಹಾಸಭೆ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಎಂ.ಕೆ.ಆದರ್ಶ್, ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ, ಉಪಾಧ್ಯಕ್ಷ ಮಂಜು ಸುವರ್ಣ, ಸಂಘಟನಾ ಕಾರ್ಯದರ್ಶಿ ಕೆ.ಎಂ.ವಿನೋದ್, ಸಹ ಕಾರ್ಯದರ್ಶಿ ಲೋಹಿತ್ ಮಾಗುಲು ಸೇರಿದಂತೆ ಪ್ರೆಸ್ ಕ್ಲಬ್ ನಿದೇರ್ಶಕರು, ಸದಸ್ಯರು ಪಾಲ್ಗೊಂಡಿದ್ದರು.

ಗಮನ ಸೆಳೆದ ಮನೋರಂಜನಾ ಸ್ಪರ್ಧೆ

ಕೊಡಗು ಪ್ರೆಸ್ ಕ್ಲಬ್ ಡೇ ಅಂಗವಾಗಿ ಪತ್ರಕರ್ತರ ಕುಟುಂಬದ ಸದಸ್ಯರಿಗಾಗಿ ಮೋಜಿನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಛದ್ಮವೇಷ ಸ್ಪರ್ಧೆಯಲ್ಲಿ ಎಂ.ಎ.ಹಿರಣ್ಯ ಸರಸ್ವತಿ ಪ್ರಥಮ ಬಹುಮಾನ ಪಡೆದರೆ, ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಯಮುನಾ ಅಯ್ಯಪ್ಪ ಪ್ರಥಮ, ಪಲ್ಲವಿ ಮನೋಜ್ ದ್ವಿತೀಯ ಸ್ಥಾನ ಪಡೆದರು. ಪಾಸ್ ಇನ್ ದಿ ಬಾಲ್ ಸ್ಪರ್ಧೆಯಲ್ಲಿ ಎಂ.ತುಶಾಲಿ ಪ್ರಥಮ ಸ್ಥಾನ ಪಡೆದರೆ, ಲತಾಶ್ರೀ ದ್ವಿತೀಯ ಸ್ಥಾನ ಪಡೆದರು. ಕೊಡಗು ಪ್ರೆಸ್ ಕ್ಲಬ್ ಡೇ ಅಂಗವಾಗಿ ಪ್ರೆಸ್ ಕ್ಲಬ್ ಸದಸ್ಯರಿಗೆ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.