ಪತ್ರಕರ್ತರು ವಿಶ್ವಾಸಾರ್ಹತೆ ಗಳಿಸಿಕೊಳ್ಳಬೇಕು : ಶಿವಾನಂದ ತಗಡೂರು: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ
ಮಡಿಕೇರಿ: ಪತ್ರಕರ್ತರು ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳಬೇಕು. ದಂಧೆಕೋರರು, ನಕಲಿ ಪತ್ರಕರ್ತರನ್ನು ಸುದ್ದಿಮನೆಯಿಂದ ದೂರವಿಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರ ವರದಿಗಳಿಗೆ ಸಿಗುವ ಪ್ರಶಸ್ತಿಗಳು ಪ್ರೇರಣೆ ನೀಡುತ್ತವೆ. ಬೆನ್ನು ತಟ್ಟಿ ಪ್ರೋತ್ಸಾಹಿಸಿದಂತೆ. ಪತ್ರಕರ್ತರು ಪ್ರಶಸ್ತಿ ಪಡೆಯುವುದು ಮುಖ್ಯವಲ್ಲ. ಸಾಮಾಜಿಕ ಸಮಸ್ಯೆಗಳನ್ನು ವರದಿ ಮೂಲಕ ಕಟ್ಟಿಕೊಡಬೇಕು. ಪತ್ರಕರ್ತರನ್ನು ಜನರು, ಸಮಾಜ ನಂಬಬೇಕಾದರೆ ಮೊದಲು ವಿಶ್ವಾಸಾರ್ಹತೆ ಗಳಿಸಿಕೊಳ್ಳಬೇಕು. ಇದರಿಂದ ಮಾತ್ರ ಪತ್ರಕರ್ತರಿಗೆ ಸಾರ್ಥಕತೆ ದೊರೆಯುತ್ತದೆ ಎಂದರು.
ಸಂಘ ರಾಜ್ಯದಲ್ಲಿ ೯೫ ವಸಂತವನ್ನು ಯಶಸ್ವಿಯಾಗಿ ಪೂರೈಸಿದ್ದು, ರಾಜ್ಯದ ಬೃಹತ್ ಸಂಘಟನೆಯಾಗಿದೆ. ರಾಜ್ಯದ ಪತ್ರಕರ್ತರ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಎಂದು ಹೇಳಿಕೊಂಡು ಪ್ರವಾಹದ ರೀತಿ ನಕಲಿ ಪತ್ರಕರ್ತರು, ದಂಧೆಕೋರರು, ವಸೂಲಿಕೋರರು ಸುದ್ದಿಮನೆ ಪ್ರವೇಶಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ನೈಜ ಪತ್ರಕರ್ತರಿಗೆ ಇದರಿಂದ ಸಮಾಜದಲ್ಲಿ ಮುಜುಗರ ಅನುಭವಿಸುವಂತಾಗಿದೆ. ಒಳ್ಳೆಯ ದೃಷ್ಟಿಕೋನ, ಸಾಮಾಜಿಕ ಚಿಂತನೆ ಇಟ್ಟುಕೊಂಡು ಪತ್ರಕರ್ತರು ಸುದ್ದಿಮನೆಗೆ ಪ್ರವೇಶಿಸಬೇಕು. ಅಂತವರಿಗೆ ಪತ್ರಕರ್ತರು ಬೆಂಬಲಿಸಬೇಕು. ಅದುವೆ ನಕಲಿ ಪತ್ರಕರ್ತರ ಹಾವಳಿಯಿಂದ ಕಳಂಕ ಬರುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಆಂತರಿಕವಾಗಿ ಸಂಘ ದಿಟ್ಟ ಹೆಜ್ಜೆ ಇಟ್ಟಿದೆ. ವರದಿಗಾರನಿಗೆ ಮೌಲ್ಯ, ಗೌರವ ಮುಖ್ಯ ಎಂದು ಅಭಿಮತ ವ್ಯಕ್ತಪಡಿಸಿದರು.
ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಪತ್ರಕರ್ತರಿಗೂ ನಮ್ಮ ಕುಟುಂಬಕ್ಕೂ ಮೊದಲಿನಿಂದ ನಂಟಿದೆ. ತನ್ನ ತಂದೆಯೂ ಹಿತವಾಣಿ ಪತ್ರಿಕೆ ಮುನ್ನಡೆಸುತ್ತಿದ್ದರು. ಪತ್ರಿಕೆ ಮೂಲಕ ರಾಜಕೀಯ ಕಟ್ಟಿದವರು ಸುಬ್ಬಯ್ಯ ಅವರಾಗಿದ್ದಾರೆ. ಲಂಕೇಶ್ ಪತ್ರಿಕೆಯ ಕಾನೂನು ಸಲಹೆಗಾರನಾಗಿಯೂ ಹಲವಾರು ಮಾನನಷ್ಟ ಪ್ರಕರಣಗಳ ವಿರುದ್ಧ ನ್ಯಾಯಾಲಯದಲ್ಲಿ ವಾದಿಸಿದ್ದೇನೆ. ಮಾಧ್ಯಮ ಸಂಸ್ಥೆಗಳನ್ನು ನಡೆಸುವುದು ಸುಲಭದ ಮಾತಲ್ಲ. ಸವಾಲಿನ ಕೆಲಸವಾಗಿದೆ. ಪತ್ರಕರ್ತರ ಜೀವನವೂ ಕಷ್ಟದ ಸ್ಥಿತಿಯಲ್ಲಿದೆ ಎಂದು ಹೇಳಿದರು.
ಪತ್ರಕರ್ತರು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಆದರೆ, ವಾಸ್ತವದಿಂದ ದೂರದ ವರದಿಗಳು ಭಿತ್ತರವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಪತ್ರಕರ್ತರು ಸತ್ಯವನ್ನು ಜನರ ಮುಂದಿಡಬೇಕು. ಜನರು ಮಾಧ್ಯಮಗಳ ಮೇಲೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಊಹ ಪತ್ರಿಕೋದ್ಯಮದಿಂದ ನಂಬಿಕೆ ಕಳೆದುಕೊಳ್ಳುವ ಭೀತಿ ಇದ್ದು, ಪತ್ರಕರ್ತರು ಈ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪತ್ರಕರ್ತರಿಗೆ ರಾಜಕಾರಣಿ ಅಥವಾ ವ್ಯವಸ್ಥೆಯನ್ನು ವಿಮರ್ಶಿಸುವ ಸ್ವತಂತ್ರ್ಯವಿದೆ. ಸುಳ್ಳುಸುದ್ದಿ ಸೃಷ್ಟಿಸುವುದು ಸಮಾಜಕ್ಕೆ ಅಪಾಯಕಾರಿ. ಪತ್ರಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದು ಪ್ರಜಾಪ್ರಭುತ್ವವನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಹೊಂದಿದ್ದಾರೆ. ಸಂವಿಧಾನ ೪ನೇ ಅಂಗ ಎಂದು ಗುರುತಿಸಿಕೊಂಡಿರುವ ಪತ್ರಿಕಾ ಕ್ಷೇತ್ರ ಎಂದಿಂಗೂ ತಲೆತಗ್ಗಿಸಬಾರದು ಎಂದ ಪೊನ್ನಣ್ಣ ಅವರು, ಕೊಡಗಿನ ಪತ್ರಕರ್ತರು ಶ್ರಮಜೀವಿ ಹಾಗೂ ಪ್ರಾಮಾಣಿಕರು ಎಂದು ಶ್ಲಾಘಿಸಿದರು.
ಸಮಾಜ ಸೇವಕ ಹರಪಳ್ಳಿ ರವೀಂದ್ರ ಮಾತನಾಡಿ, ನಿಷ್ಠಾವಂತ ಪತ್ರಕರ್ತರು ದೇಶಸೇವೆ ಮಾಡುವ ಯೋಧರಿಗೆ ಸಮ. ಕೊಡಗಿನಲ್ಲಿ ಅತಿವೃಷ್ಠಿ ಸಂದರ್ಭ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಸವಾಲಿನ ವೃತ್ತಿಯಲ್ಲಿರುವ ಪತ್ರಕರ್ತರು ವೈಯಕ್ತಿಕ ಬದುಕಿನೊಂದಿಗೆ ಸಮಾಜವನ್ನು ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ವರದಿಗಳು ನಿಷ್ಪಕ್ಷಪಾತವಾಗಿರಬೇಕು. ಆರೋಗ್ಯವಂತ ಸಮಾಜಕ್ಕೆ ಪತ್ರಕರ್ತರು ಮುಖ್ಯ. ಸಮಾಜದ ಆಗುಹೋಗುಗಳನ್ನು, ವಿದ್ಯಮಾನ ಜನರಿಗೆ ತಲುಪಿಸುವುದು ಧೈರ್ಯದ ಸಂಕೇತ. ಕೊಡಗಿನ ಪತ್ರಕರ್ತರ ಕಾರ್ಯ ಹೆಮ್ಮೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಉದ್ಯಮಿ ಅವರೆಮಾದಂಡ ಶರಣ್ ಪೂಣಚ್ಚ ಮಾತನಾಡಿ, ಜಾತಿ, ಧರ್ಮ ಬಿಟ್ಟು ಪತ್ರಕರ್ತರು ಒಗ್ಗಟ್ಟಾಗಿರುವುದು ಸಮಾಜಕ್ಕೆ ಮಾದರಿಯಾಗಿದೆ. ಜಿಲ್ಲೆಯ ಬಹುತೇಕರು ವೃತ್ತಿಬದ್ಧತೆ ಮೈಗೂಡಿಸಿಕೊಂಡಿದ್ದಾರೆ. ಸಮಾಜದ ಒಳಿತಿಗೆ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್. ಸವಿತಾ ರೈ ಮಾತನಾಡಿ, ಪ್ರಶಸ್ತಿ ವ್ಯಕ್ತಿತ್ವದ ಹಿರಿಮೆ ಹೆಚ್ಚಿಸುತ್ತದೆ. ಸಂಘ ಸದಸ್ಯರ ಸಹಕಾರದಿಂದ ಬಲಿಷ್ಠವಾಗಿದೆ ಎಂದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದಲ್ಲಿ ೨೨ ಪ್ರಶಸ್ತಿಗಳು ಸ್ಥಾಪನೆಯಾಗಿದ್ದು, ಉತ್ತಮ ವರದಿಗಾರರಿಗೆ ಪ್ರಶಸ್ತಿ ಹರಸಿ ಬರುತ್ತದೆ. ಸುದ್ದಿಗೆ ತೆರಳುವ ಸಂದರ್ಭ ಬಿಳಿಹಾಳೆಯಂತೆ ಪತ್ರಕರ್ತರು ತೆರಳಿ ನೈಜಾಂಶ ವರದಿ ಮಾಡಬೇಕು. ವಿಶ್ಲೇಷಣೆಯ ಮೂಲಕ ಆಡಳಿತವನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕು. ಯಾವುದೇ ಕಾರಣಕ್ಕೂ ಪೂರ್ವಾಗ್ರಹ ಪೀಡಿತರಾಗಬಾರದೆಂದು ಸಲಹೆ ನೀಡಿದರು.
ಈ ಸಂದರ್ಭ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ, ರಾಷ್ಟ್ರೀಯ ಸಮಿತಿ ಸದಸ್ಯ ಪಳೆಯಂಡ ಪಾರ್ಥ ಚಿಣ್ಣಪ್ಪ ಉಪಸ್ಥಿತರಿದ್ದರು.
ಸಂಘದ ಸದಸ್ಯ ಚನ್ನನಾಯಕ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಸ್ವಾಗತಿಸಿ, ನಿರ್ದೇಶಕ ಪ್ರಭುದೇವ್ ನಿರೂಪಿಸಿ, ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್ ವಂದಿಸಿದರು.
ಪ್ರಶಸ್ತಿ ಪ್ರದಾನ:
ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ತಮ್ಮ ಮುತ್ತಜ್ಜಿ ಸಾಕಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಕಾಫಿಗೆ ಸಂಬಂಧಿಸಿದ ಅತ್ಯುತ್ತಮ ಪತ್ರಿಕಾ ವರದಿ ಪ್ರಶಸ್ತಿಯನ್ನು ಹಿರಿಕರ ರವಿ, ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ.ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿಯನ್ನು ಉದಿಯಂಡ ಜಯಂತಿ ಮಂದಣ್ಣ, ಸಂಘದ ಮಾಜಿ ಉಪಾಧ್ಯಕ್ಷರಾದ ಸಿ.ಎನ್.ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿಯನ್ನು ನವೀನ್ ಸುವರ್ಣ, ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿದ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಯನ್ನು ಜಗದೀಶ್ ಜೋಡುಬೀಟಿ, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ಪ್ರಶಸ್ತಿಯನ್ನು ಎ.ಎನ್. ವಾಸು, ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್ ಅವರು ಪ್ರಗತಿಪರ ಹಾಲು ಉತ್ಪಾದಕರಾಗಿದ್ದ ಉಳುವಾರನ ಶೇಷಗಿರಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಹೈನುಗಾರಿಕೆ ವರದಿ ಪ್ರಶಸ್ತಿಯನ್ನು ಅಣ್ಣೀರ ಹರೀಶ್ ಮಾದಪ್ಪ, ಸ್ವಸ್ಥ ಸಂಸ್ಥೆಯ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಶೈಕ್ಷಣಿಕ ವರದಿ ಹಾಗೂ ಶಕ್ತಿ ಸಲಹಾ ಸಂಪಾದಕರಾಗಿರುವ ಬಿ.ಜಿ.ಅನಂತಶಯನ ತಮ್ಮ ಹೋಂಸ್ಟೇ ಆಲ್ಫೆನ್ ಗ್ಲೋ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಸುದ್ದಿ ಛಾಯಾಚಿತ್ರ ಪ್ರಶಸ್ತಿಯನ್ನು ವಿಘ್ನೇಶ್ ಭೂತನಕಾಡು ಅವರಿಗೆ ಪ್ರದಾನ ಮಾಡಲಾಯಿತು.
ಬೆಳೆಗಾರ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ ತಾಯಿ ಅಜ್ಜಮಾಡ ಸುಬ್ಬಯ್ಯ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ಪ್ರಶಸ್ತಿಯನ್ನು ಲಕ್ಷ್ಮಿಕಾಂತ್ ಕೊಮಾರಪ್ಪ, ಕೋವರ್‌ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಚಂದ್ರಶೇಖರ್ ಅವರ ಹೆಸರಿನಲ್ಲಿ ಸ್ಥಾಪಿಸಿದ ಮಾನವೀಯ ವರದಿ ಪ್ರಶಸ್ತಿ ಹಾಗೂ ಆಪ್ತ ಸಮಾಲೋಚಕಿ ತೇಲಪಂಡ ಆರತಿ ಸೋಮಯ್ಯ ತಮ್ಮ ಅಜ್ಜ ಕೋಟೆರ ಮುತ್ತಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಆರೋಗ್ಯ ವರದಿ ಪ್ರಶಸ್ತಿಯನ್ನು ಹೆಚ್.ಕೆ. ಜಗದೀಶ್, ಮಂಡಿಬೆಲೆ ರಾಜಣ್ಣ ತಮ್ಮ ತಾಯಿ ದ್ಯಾವಮ್ಮ ಶ್ಯಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ, ವನ್ಯಜೀವಿ ದೃಶ್ಯಮಾಧ್ಯಮ ವರದಿ ಪ್ರಶಸ್ತಿಯನ್ನು ಐಮಂಡ ಗೋಪಾಲ್ ಸೋಮಯ್ಯ, ತೇನನ ರಾಜೇಶ್ ಅವರು ತಮ್ಮ ತಂದೆ ದಿವಂಗತ ತೇನನ ಸೋಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಸೇನೆಗೆ ಸಂಬಂಧಿಸಿದ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿಯನ್ನು ಸ್ಟ್ಯಾನ್ಲ್ಲಿ ಡೇವಿಡ್, ವಕೀಲರಾದ ಪಿ.ಕೃಷ್ಣಮೂರ್ತಿ ಅವರು ತಮ್ಮ ತಂದೆ ದಿವಂಗತ ಟಿ.ಕೆ.ಸುಬ್ರಹ್ಮಣ್ಯ ಭಟ್ ಪಂಜಿತ್ತಡ್ಕ ಅವರ ಸ್ಮರಣಾರ್ಥ ಸ್ಥಾಪಿಸಿರುವ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ಮಾನವೀಯ ವರದಿ ಪ್ರಶಸ್ತಿಯನ್ನು ಸಂತೋಷ್ ರೈ, ಕೈಬುಲೀರ ಪಾವರ್ತಿ ಬೋಪಯ್ಯ ತಮ್ಮ ತಂದೆ-ತಾಯಿ ಉತ್ತಯ್ಯ-ಸುಬ್ಬಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಪರಿಸರ ಮತ್ತು ನೈರ್ಮಲ್ಯ ವರದಿ ಪ್ರಶಸ್ತಿಯನ್ನು ಶಶಿಕುಮಾರ್ ರೈ ಪಡೆದುಕೊಂಡರು.
ಸಂಘದ ಸದಸ್ಯರಾಗಿದ್ದ ಎಸ್.ಎ.ಮುರುಳೀಧರ್ ತಮ್ಮ ತಾಯಿ ಪಾರ್ವತಮ್ಮ ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಕೃಷಿ ವರದಿ ಪ್ರಶಸ್ತಿಯನ್ನು ಕಾಯಪಂಡ ಶಶಿ ಸೋಮಯ್ಯ, ಸಮಾಜಸೇವಕ ಮೇರಿಯಂಡ ಸಂಕೇತ್ ಪೂವಯ್ಯ ತಮ್ಮ ತಂದೆ ಮೇರಿಯಂಡ ಪೂವಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಹುಲಿ ಸಂರಕ್ಷಣೆ ಕುರಿತಾದ ವರದಿ ಪ್ರಶಸ್ತಿಯನ್ನು ಆರ್. ಸುಬ್ರಮಣಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ತಮ್ಮ ಮುತ್ತಜ್ಜಿ ಸಾಕಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಕಾಫಿಗೆ ಸಂಬಂಧಿಸಿದ ಅತ್ಯುತ್ತಮ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿಯನ್ನು ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ತಮ್ಮ ತಾಯಿ ಬಲ್ಲಾರಂಡ ಮಾಚಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ರಾಜಕೀಯ ವರದಿ ಪ್ರಶಸ್ತಿಯನ್ನು ಇಸ್ಮಾಯಿಲ್ ಕಂಡಕರೆ ಪಡೆದುಕೊಂಡರು.
ಮಹಾಸಭೆ;
ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ವಾರ್ಷಿಕ ವರದಿ, ಕಳೆದ ಮಹಾಸಭೆ ವರದಿ ಮಂಡಿಸಿದರು. ಖಜಾಂಚಿ ಸುನಿಲ್ ಪೊನ್ನೇಟಿ ಲೆಕ್ಕಪತ್ರ ಮಂಡಿಸಿದರು.
ಎ.ಕೆ.ಎಸ್. ಪ್ರಶಸ್ತಿ ಘೋಷಿಸಿದ ಪೊನ್ನಣ್ಣ;
ತನ್ನ ತಂದೆ ದಿ. ಎ.ಕೆ. ಸುಬ್ಬಯ್ಯ ಅವರ ಹೆಸರಿನಲ್ಲಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ವಿಭಾಗದ ಪ್ರಶಸ್ತಿ ಸ್ಥಾಪಿಸುವುದಾಗಿ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಸಮಾರಂಭದಲ್ಲಿ ಘೋಷಿಸಿದರು.
ಈಗಾಗಲೇ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿಗಳಿದ್ದು, ಸೂಕ್ತ ವಿಭಾಗವನ್ನು ಸಂಘದವರು ಗುರುತಿಸಿ ಪ್ರಶಸ್ತಿಯನ್ನು ಮೀಸಲಿಡಬೇಕೆಂದು ತಿಳಿಸಿದರು.

