Kodagu

ಮಡಿಕೇರಿ ಕೊಡವ ಸಮಾಜ, ಪೊಮ್ಮಕ್ಕಡ ಕೂಟ ಹಾಗೂ ಮಡಿಕೇರಿ ಕೊಡವ ಕೇರಿಯ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 03ರಂದು ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ

admincoorgdaily

ಮಡಿಕೇರಿ: ಮಡಿಕೇರಿ ಕೊಡವ ಸಮಾಜ, ಪೊಮ್ಮಕ್ಕಡ ಕೂಟ ಹಾಗೂ ಮಡಿಕೇರಿ ಕೊಡವ ಕೇರಿಯ ಸಂಯುಕ್ತ ಆಶ್ರಯದಲ್ಲಿ ಆ.03 ರಂದು ನಗರದ ಮಡಿಕೇರಿಯ ಕೊಡವ ಸಮಾಜದ ಸಭಾಂಗಣದಲ್ಲಿ ’ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ’ ಆಯೋಜಿಸಲಾಗಿದೆ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ತಿಳಿಸಿದರು.

 ಕೊಡಗಿನ ಸಾಂಪ್ರದಾಯಿಕ ಆಚರಣೆಯಲ್ಲಿ ಒಂದಾದ ಕಕ್ಕಡ ತಿಂಗಳ ೧೮ನೇ ದಿನದಂದು ಎಲ್ಲೆಡೆ ಕಕ್ಕಡ ನಮ್ಮೆ ಆಚರಿಸಲಾಗುತ್ತದೆ. ಆ.೩ರಂದು ಮಡಿಕೇರಿ ಕೊಡವ ಸಮಾಜದಲ್ಲಿ ೮ನೇ ವರ್ಷದ ಕಕ್ಕಡ ೧೮ರ ನಮ್ಮೆಯನ್ನು ನಡೆಸಲಾಗುತ್ತದೆ. ಅಂದು ಬೆಳಗ್ಗೆ ೧೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಹಾಗೂ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪನವರ ಜಂಟಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಮಡಿಕೇರಿ ನಗರದ ಶಾಸಕರಾದ ಡಾ.ಮಂಥರ್ ಗೌಡನವರು ಭಾಗವಹಿಸಲಿದ್ದಾರೆ. ಕಕ್ಕಡ ೧೮ ವಿಶೇಷತೆಯ ಬಗ್ಗೆ ಅಜ್ಜಿಕುಟ್ಟಿರ ಸುನೀತಾ ಗಿರೀಶ್ ರವರು ವಿಚಾರ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಪ್ರಯುಕ್ತ ಮದ್ ಪಾಯಸ, ಮದ್ದು ಪುಟ್ಟು, ನಾಡ್ ಕುಮ್ಮುಕರಿ, ಬೆಂಬಳೆ ಕರಿ, ಮಾಂಗೆ ಕರಿ, ಮದ್‌ರೆ ಕಣ್ಣಿ, ಞಂಡ್ ಕರಿ, ಕೋಳಿ ಕರಿ, ಪಂದಿ ಕರಿ, ಕೊಯಿಲೆ ಪಚ್ಚೆ ಮೀನ್ ಕರಿ, ಚಕ್ಕೆ ಕುರು ಪಜ್ಜಿ, ಕೈಪುಳಿ ಪಜ್ಜಿ ಸ್ಪರ್ಧೆಗಳು ನಡೆಯಲಿದೆ. ಎಲ್ಲಾ ವಿಭಾಗದ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ನೀಡಲಾಗುವುದು.ಸ್ಪರ್ಧೆಗಳಲ್ಲಿ ಭಾಗವಹಿಸುವವರು ಜು.೩೧ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಎಂದು ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ, ಕಾರ್ಯದರ್ಶಿ ಕೂಪದಿರ ಜೂನ ವಿಜಯ, ಖಜಾಂಚಿ ಉಳ್ಳಿಯಡ ಸಚಿತ, ಮಡಿಕೇರಿ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕನ್ನಂಡ ಸಂಪತ್, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್ ಉಪಸ್ಥಿತರಿದ್ದರು.