ಕೊಡಗು;ಹೂಡಿಕೆಯ ಹೆಸರಿನಲ್ಲಿ ಹೆಚ್ಚುತ್ತಿದೆ ಸೈಬರ್ ವಂಚನೆ: ₹1.14 ಕೋಟಿ ಕಳೆದುಕೊಂಡ ಖಾಸಗಿ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ

Feb 3, 2026 - 12:01
 0  826
ಕೊಡಗು;ಹೂಡಿಕೆಯ ಹೆಸರಿನಲ್ಲಿ ಹೆಚ್ಚುತ್ತಿದೆ ಸೈಬರ್ ವಂಚನೆ:  ₹1.14 ಕೋಟಿ ಕಳೆದುಕೊಂಡ ಖಾಸಗಿ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ

ಎ.ಎಸ್ ಮುಸ್ತಫ ಸಿದ್ದಾಪುರ 

ಸಿದ್ದಾಪುರ (ಕೊಡಗು), ಫೆ.2: ಸೈಬರ್ ಅಪರಾಧ ಪ್ರಕರಣಗಳ ಕುರಿತು ಪೊಲೀಸರು ಜಾಗೃತಿ ಮೂಡಿಸುತ್ತಿದ್ದರೂ ಜನರು ಮತ್ತೆ ಮತ್ತೆ ಖದೀಮರ ಬಲೆಗೆ ಬೀಳುತ್ತಲೇ ಇದ್ದಾರೆ. ಸಾಮಾಜಿಕ ಮಾಧ್ಯ-ಮಗಳಲ್ಲಿ ಹೆಚ್ಚು ಸಕ್ರಿಯವಾದವರಿಗೆ ಸೈಬರ್ ವಂಚಕರು ಗಾಳ ಹಾಕಿ, ಅವರಲ್ಲಿ ನಂಬಿಕೆ ಹುಟ್ಟಿಸಿ ಹಣ ದೋಚುತ್ತಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಪಾಲಿಬೆಟ್ಟ ಖಾಸಗಿ ತೋಟವೊಂದರ ಸಹಾಯಕ ವ್ಯವಸ್ಥಾಪಕ ನಾರಾಯಣ ಎಂಬ ವ್ಯಕ್ತಿಗೆ ಆಮಿಷವೊಡ್ಡಿ ₹1.14 ಕೋಟಿ ದೋಚಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ಸೈಬರ್ ಅಪರಾಧ ಠಾಣೆಯ ಮೆಟ್ಟಿಲೇರಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಹಾಗೂ ಭಾರತೀಯ ನ್ಯಾಯ ಸಂಹಿತೆ ಅಡಿ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಡಿಜಿಟಲ್ ಅರೆಸ್ಟ್, ಬ್ಯಾಂಕ್ ವಹಿವಾಟಿನ ಒನ್ ಟೈಂ ಪಾಸ್ ವರ್ಡ್(ಒಟಿಪಿ), ಎಪಿಕೆ ಫೈಲ್ ಹಾಗೂ ವಿಶೇಷ ಕೊಡುಗೆ ನೀಡುವುದಾಗಿ ಹೇಳಿ ಇದುವರೆಗೂ ವಂಚನೆ ನಡೆಸುತ್ತಿದ್ದ ಸೈಬರ್ ಕಳ್ಳರು ಇದೀಗ ಹೂಡಿಕೆ ಹೆಸರಿನಲ್ಲಿ ಹೆಚ್ಚು ಹೆಚ್ಚು ಹಣ ದೋಚಲು ಆರಂಭಿಸಿದ್ದಾರೆ. ದುಪ್ಪಟ್ಟು ಹಣ ಸಿಗುವ ಆಸೆಯಿಂದ ಜನರು ಹೂಡಿಕೆಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಮೋಸ ಮಾಡುತ್ತಿದ್ದಾರೆ.

ದೂರುದಾರ ನಾರಾಯಣ ಅವರು ಸಾಮಾಜಿಕ ಮಾಧ್ಯಮವಾದ ಯೂಟ್ಯೂಬ್ ನೋಡುತ್ತಿರುವಾಗೆ ಹಣ ಹೂಡಿಕೆ ಮಾಡುವ ಜಾಹೀರಾತನ್ನು ನೋಡಿ ಅದನ್ನು ಕ್ಲಿಕ್ ಮಾಡಿದಾಗ ಕೂಡಲೇ ಅವರಿಗೆ ವಾಟ್ಸಾಪ್ ಕರೆ ಮಾಡಿದ ಅಪರಿಚಿತ ವ್ಯಕ್ತಿ ತನ್ನನ್ನು ಅಮೋಲ್ ರಮಕಾಂತ್ ಎಂದು ಪರಿಚಯ ಮಾಡಿಕೊಂಡು, ಆರ್.ಬಿ.ಕೆ ಬ್ರೋಕಿಂಗ್ ಷೇರು ಮಾರ್ಕೆಟ್ ನಲ್ಲಿ ಕಡಿಮೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶವನ್ನು ನೀಡುವುದಾಗಿ ನಂಬಿಸಿ, ಎಂ5 ಆರ್.ಬಿ.ಕೆ ಗ್ರೂಪಿಗೆ ಸೇರಿಸಿದ ನಂತರ ಲಾಭಾಂಶದ ವಿವರಗಳನ್ನು ನೀಡಿದ ಮೋಸಗಾರ ಮೊದಲಿಗೆ ₹50 ಸಾವಿರ ಹೂಡಿಕೆ ಮಾಡುವಂತೆ ಹೇಳಿದ್ದಾನೆ. ಇದನ್ನು ನಂಬಿದ ದೂರುದಾರ ತನ್ನ ಹಾಗೂ ಪತ್ನಿಯ ಬ್ಯಾಂಕ್ ಖಾತೆಗಳಿಂದ ಅಪರಿಚಿತ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ 9.12.2025 ರಿಂದ 23.1.2026 ರ ವರೆಗೆ ಹಂತ ಹಂತವಾಗಿ ಆರ್.ಟಿ.ಜಿ.ಎಸ್ ಹಾಗೂ ನೆಫ್ಟ್ ಮೂಲಕ ಒಟ್ಟು ₹1.14 ಕೋಟಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. 

 ಮೊದಲಿಗೆ ಕಡಿಮೆ ಹಣ ಹೂಡಿಕೆ ಮಾಡುತ್ತಿದ್ದ ವ್ಯಕ್ತಿಗೆ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿದ್ದ ಸೈಬರ್ ವಂಚಕರು ದೊಡ್ಡ ಮೊತ್ತದ ಹಣವನ್ನು ವರ್ಗಾವಣೆ ಮಾಡಿಸಿದ್ದಾರೆ. ವಂಚಕರು ಕೇವಲ ವಾಟ್ಸಾಪ್ ಕರೆಗಳನ್ನು ಮಾಡುತ್ತಿದ್ದರು. ದೂರುದಾರಹಣವನ್ನು ವಾಪಸ್ ಪಡೆಯಲು ಮುಂದಾದ ವೇಳೆ ಸೇವಾ ಶುಲ್ಕದ ಹೆಸರಿನಲ್ಲಿ ಹೆಚ್ಚಿನ ಹಣ ನೀಡುವಂತೆ ವಂಚಕ ಹೇಳಿದ್ದ. ಆಗ ಅವರಿಗೆ ವಂಚನೆಗೆ ಒಳಗಾಗಿರುವ ಅನುಮಾನ ಬಂದು ದೂರು ನೀಡಿದ್ದಾರೆಂದು ಸೈಬರ್ ಪೊಲೀಸರು ಮಾಹಿತಿ ನೀಡಿದರು.

2023 ಜನವರಿಯಿಂದ 2025 ರ ಡಿಸೆಂಬರ್ ವರೆಗೆ ರಾಜ್ಯದಲ್ಲಿ 57,733 ವಿವಿಧ ಮಾದರಿಯ ಸೈಬರ್ ವಂಚನೆಗಳು ವರದಿಯಾಗಿದೆ. ಮೂರು ವರ್ಷಗಳಲ್ಲಿ ಸೈಬರ್ ವಂಚಕರು ₹312.47 ಕೋಟಿ ದೋಚಿದ್ದಾರೆ. ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಿಕ್ಕಿದ್ದು ಮಾತ್ರ ₹24.85 ಕೋಟಿ. ಉಳಿದ ₹287.62 ಕೋಟಿ ಎಲ್ಲಿಗೆ ಹೋಗಿದೆ ಎಂಬುದು ಪತ್ತೆಯೇ ಆಗಿಲ್ಲ ಎಂದು ವರದಿಯಾಗಿದೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 1
Wow Wow 0