ಕೊಡಗಿನ ಶಾಸಕದ್ವಯರಿಗೆ ಸಚಿವ ಸ್ಥಾನ ನೀಡಲು ಕೊಡಗು ಜನ ಅಭಿವೃದ್ಧಿ ಸಮಿತಿ ಆಗ್ರಹ

ಕೊಡಗಿನ ಶಾಸಕದ್ವಯರಿಗೆ ಸಚಿವ ಸ್ಥಾನ ನೀಡಲು  ಕೊಡಗು ಜನ ಅಭಿವೃದ್ಧಿ ಸಮಿತಿ ಆಗ್ರಹ

ಮಡಿಕೇರಿ: ಕರ್ನಾಟಕ ರಾಜ್ಯದ ನೂತನ ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ರಾಜ್ಯದ ಗಡಿಭಾಗವಾದ ಕೊಡಗು ಜಿಲ್ಲೆಗೆ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ದೊರಕಬೇಕು ಎಂಬುದು ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ಇಬ್ಬರು ಪ್ರಭಾವಿ ನಾಯಕರು, ಜನಪರ ಹೋರಾಟಗಾರರು ಹಾಗೂ ಯುವ ಶಕ್ತಿಗಳಾದ

 ಡಾ. ಮಂತರ್ ಗೌಡ ಮತ್ತು ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೊಡಗು ಜನ ಅಭಿವೃದ್ಧಿ ಸಮಿತಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕೊಡಗು ಜನ ಅಭಿವೃದ್ಧಿ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಎಂ.ಎಂ ದಾವೂದ್ ಅವರು,ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆ ನಿರಂತರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ರಸ್ತೆ, ಆರೋಗ್ಯ, ಶಿಕ್ಷಣ, ರೈತರ ಸಮಸ್ಯೆ, ಮಳೆಹಾನಿ, ಕಾಡಾನೆ ಹಾವಳಿ ಸೇರಿದಂತೆ ಅನೇಕ ಸಮಸ್ಯೆಗಳ ನಡುವೆ ಬದುಕುತ್ತಿರುವ ಕೊಡಗಿನ ಜನರಿಗೆ ರಾಜ್ಯ ಮಟ್ಟದಲ್ಲಿ ಬಲವಾದ ಧ್ವನಿ ಅಗತ್ಯವಾಗಿದೆ ಆ ಧ್ವನಿಯಾಗಿ, ಡಾ. ಮಂತರ್ ಗೌಡ ಹಾಗೂ ಎಸ್. ಪೊನ್ನಣ್ಣ ಹೊರಹೊಮ್ಮಿದ್ದಾರೆ.ಡಾ. ಮಂತರ್ ಗೌಡ ಅವರು,ಯುವ ನಾಯಕತ್ವದ ಹೊಸ ಭರವಸೆಯಾಗಿದ್ದು, ಶಿಕ್ಷಣ, ವೈದ್ಯಕೀಯ ಸೇವೆ ಹಾಗೂ ಸಾಮಾಜಿಕ ಕಳಕಳಿಯ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ರಾಜಕೀಯವನ್ನು ಅಧಿಕಾರದ ಸಾಧನವಾಗಿ ಅಲ್ಲ, ಸೇವೆಯ ವೇದಿಕೆಯಾಗಿ ನೋಡುತ್ತಿರುವ ಅವರು ಕೊಡಗಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.ಗ್ರಾಮೀಣ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ, ಅಭಿವೃದ್ಧಿಯ ಸ್ಪಷ್ಟ ದೃಷ್ಟಿಕೋನ ಹಾಗೂ ಜನಸಾಮಾನ್ಯರ ಜೊತೆಗಿನ ನೇರ ಸಂಪರ್ಕವೇ ಅವರನ್ನು ವಿಭಿನ್ನ ನಾಯಕನನ್ನಾಗಿ ಮಾಡಿದೆ. ರಾಜ್ಯ ಸರ್ಕಾರ ಯುವ ನಾಯಕರಿಗೆ ಅವಕಾಶ ನೀಡಬೇಕೆಂದರೆ

 ಡಾ. ಮಂತರ್ ಗೌಡ ಅವರಂತಹ ಶಕ್ತಿಗಳಿಗೆ ಸಚಿವ ಸ್ಥಾನ ನೀಡುವುದು ಕಾಲದ ಅಗತ್ಯವಾಗಿದೆ ಎಂದು ದಾವೂದ್ ಅವರು ಆಗ್ರಹಿಸಿದ್ದಾರೆ.

ಎಸ್. ಪೊನ್ನಣ್ಣ ಅವರು ಹೋರಾಟದ ರಾಜಕಾರಣದ ಮುಖವಾಣಿ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸದಾ ಸರ್ಕಾರದ ಗಮನ ಸೆಳೆಯುವ ಧೈರ್ಯಶಾಲಿ ನಾಯಕನಾಗಿ ಅವರು ಗುರುತಿಸಿಕೊಂಡಿದ್ದಾರೆ.ಕಾಫಿ ಬೆಳೆಗಾರರ ಪರ ಹೋರಾಟ, ಕೊಡಗಿನ ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಜನರ ಹಕ್ಕುಗಳಿಗಾಗಿ ಅವರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಸರಳತೆ, ಸಂಘಟನಾ ಶಕ್ತಿ ಹಾಗೂ ಜನರ ನಡುವೆ ಬೆಳೆದ ನಾಯಕತ್ವದಿಂದ ಅವರು ಜಿಲ್ಲೆಯ ಜನರ ಅಪಾರ ಪ್ರೀತಿ ಗಳಿಸಿದ್ದಾರೆ.

 ರಾಜಕೀಯವಾಗಿ ಕೊಡಗು ಜಿಲ್ಲೆಯನ್ನು ಕಡೆಗಣಿಸುವ ಪ್ರವೃತ್ತಿ ಇನ್ನು ನಿಲ್ಲಬೇಕು. ಚುನಾವಣೆಯ ಸಮಯದಲ್ಲಿ ಮಾತ್ರ ಕೊಡಗು ನೆನಪಾಗುವುದು ಸರಿಯಲ್ಲ.

 ಜಿಲ್ಲೆಯ ಅಭಿವೃದ್ಧಿ ಬೇಕಾದರೆ ಸಚಿವ ಸಂಪುಟದಲ್ಲಿ ಕೊಡಗಿನ ಪ್ರತಿನಿಧಿತ್ವ ಅನಿವಾರ್ಯವಾಗಿದೆ. ಡಾ. ಮಂತರ್ ಗೌಡ ಮತ್ತು ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಕೊಡಗು ಜಿಲ್ಲೆಯ ಜನರಿಗೆ ನ್ಯಾಯ ದೊರೆಯುವುದರ

 ಜೊತೆಗೆ ರಾಜ್ಯ ರಾಜಕಾರಣದಲ್ಲೂ ಹೊಸ ಸಂದೇಶ ರವಾನೆಯಾಗಲಿದೆ.

ಕೊಡಗು ಜಿಲ್ಲೆಯ ಜನರ ಭಾವನೆ, ಆಶಯ ಹಾಗೂ ಹೋರಾಟಕ್ಕೆ ಸರ್ಕಾರ ಗೌರವ ನೀಡಬೇಕು ಇಲ್ಲವಾದರೆ ಕೊಡಗಿನ ಜನರ ಧ್ವನಿಯನ್ನು ನಿರ್ಲಕ್ಷ್ಯ ಮಾಡಿದಂತಾಗುತ್ತದೆ ಎಂದು ದಾವೂದ್ ಅವರು ತಿಳಿಸಿದ್ದಾರೆ.