ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-4 ಟ್ರೋಫಿ ಅನಾವರಣ ಮತ್ತು ಆಟಗಾರರ ಹರಾಜು ಪ್ರಕ್ರಿಯೆ : 6 ತಂಡಗಳಿಂದ ಆಟಗಾರರ ಖರೀದಿ

ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-4 ಟ್ರೋಫಿ ಅನಾವರಣ ಮತ್ತು ಆಟಗಾರರ ಹರಾಜು ಪ್ರಕ್ರಿಯೆ : 6 ತಂಡಗಳಿಂದ ಆಟಗಾರರ ಖರೀದಿ

ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್(ರಿ) ವತಿಯಿಂದ ಮಾ.೨೨ರಂದು ನಡೆಯಲಿರುವ ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-೪ ಪಂದ್ಯಾವಳಿಯ ಟ್ರೋಫಿ ಅನಾವರಣ ಹಾಗೂ ಆಟಗಾರರ ಹರಾಜು ಪ್ರಕ್ರಿಯೆ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆಯಿತು.

 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು, ಪತ್ರಕರ್ತರು ಸುದ್ದಿಯ ಒತ್ತಡದಿಂದ ಹೊರಬಂದು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತ್ಯಗತ್ಯವಾಗಿದೆ. ಪ್ರತಿದಿನದ ಆಗುಹೋಗುಗಳನ್ನು ಜನರಿಗೆ ತಲುಪಿಸುವ ಜವಬ್ದಾರಿಯುತ ಸ್ಥಾನದಲ್ಲಿರುವ ಪತ್ರಕರ್ತರು, ಜನರು ಹಾಗೂ ರಾಜಕಾರಣಿಗಳ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಾರೆ. ನಿರಂತರ ಕೆಲಸದ ನಡುವೆ ಬಿಡುವು ಮಾಡಿಕೊಂಡು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.

 ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಪ್ರಾಯೋಜಕರಾದ ಉತ್ತಮ್ ಟ್ರೋಫಿ ಅನಾವರಣಗೊಳಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರೆಸ್ ಕ್ಲಬ್ ವತಿಯಿಂದ ಕ್ರೀಡಾ ಹಬ್ಬ ಆಚರಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು. ಈ ಬಾರಿಯ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳಿಗೂ ಶುಭ ಹಾರೈಸಿದರು.

 ದಾನಿಗಳು ಹಾಗೂ ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡರಾದ ಜಾನ್ಸನ್ ಪಿಂಟೋ ಮಾತನಾಡಿ, ಪತ್ರಕರ್ತರು ಸದಾ ಸಮಾಜಮುಖಿಯಾಗಿ ಚಿಂತಿಸುತ್ತಾರೆ. ಜಿಲ್ಲೆಯ ಆಗುಹೋಗುಗಳ ಬಗ್ಗೆ ದಿನದ ೨೪ ಗಂಟೆಯೂ ಎಚ್ಚರದಿಂದಿರುತ್ತಾರೆ. ಕೆಲವೊಮ್ಮೆ ನಿದ್ರೆ ಇಲ್ಲದೆ ಕೆಲಸ ಮಾಡಬೇಕಾದ ಸಂದರ್ಭವೂ ಬರುತ್ತದೆ. ಎಲ್ಲದಕ್ಕೂ ಪತ್ರಕರ್ತರು ಸಿದ್ದರಿರುತ್ತಾರೆ ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅನು ಕಾರ್ಯಪ್ಪ ಮಾತನಾಡಿ, ಒತ್ತಡದ ಕೆಲಸ ಕಾರ್ಯಗಳಿಂದ ವಿಶ್ರಾಂತಿ ಪಡೆಯಲು ಕ್ರೀಡೆಗಳು ಸಹಕಾರಿಯಾಗಿದೆ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತನ್ನು ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಆಟ ಬಲ್ಲವನಿಗೆ ರೋಗವಿಲ್ಲ ಎಂದು ಬದಲಾಯಿಸಬಹುದಾಗಿದೆ. ನಿತ್ಯ ಕ್ರೀಡೆಯಲ್ಲಿ ತೊಡಗುವುದರಿಂದ ಕ್ರಿಯಾಶೀಲರಾಗಿರಬಹುದು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕಿ ಬಿ.ಆರ್.ಸವಿತಾ ರೈ ಮಾತನಾಡಿ, ಪತ್ರಕರ್ತರನ್ನು ಒಂದೆಡೆ ಸೇರಿಸುವ ಶಕ್ತಿ ಕ್ರೀಡೆಗಿದೆ. ಪ್ರತಿ ವರ್ಷವೂ ಪ್ರೆಸ್‌ಕ್ಲಬ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಕ್ರೀಡಾಕೂಟ ನಡೆಸಿಕೊಂಡು ಬರುತ್ತಿದ್ದು, ಕ್ರೀಡೆಯು ಪತ್ರಕರ್ತರ ನಡುವಿನ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಿದೆ ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ವ್ಯಕ್ತಿಗಿಂತ ವ್ಯವಸ್ಥೆ ದೊಡ್ಡದು ಎಂಬಂತೆ ಕ್ರೀಡಾ ಸಂಚಾಲಕ ಮಂಜು ಸುವರ್ಣ ನೇತೃತ್ವದಲ್ಲಿ ಯುವ ಪಡೆ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಕ್ರೀಡಾ ಸಂಚಾಲಕರಾದ ಲೋಹಿತ್ ಮಾಗುಲು, ಮನೋಜ್, ಸ್ಟ್ಯಾನ್ಲಿ ಡೇವಿಡ್ ಹಾಗೂ ಕೊಡಗು ಪ್ರೆಸ್ ಕ್ಲಬ್ ಸದಸ್ಯರಿದ್ದರು. ಕೊಡಗು ಪ್ರೆಸ್ ಕ್ಲಬ್‌ನ ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ ಸಾಗತಿಸಿದರೆ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರದಾನ ಕಾರ್ಯದರ್ಶಿ ಹೆಚ್.ಜೆ.ರಾಕೇಶ್ ನಿರೂಪಿಸಿ, ವಂದಿಸಿದರು.

 ಸಭಾ ಕಾರ್ಯಕ್ರಮದ ನಂತರ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕೊಡಗು ಧ್ವನಿ ವಾರಿಯರ್ಸ್ ತಂಡದ ಆದರ್ಶ್ ಅದ್ಕಲೇಗಾರ್(ಮಾಲೀಕರು) ಮಂಜು ಸುವರ್ಣ(ನಾಯಕ), ಮೀಡಿಯಾ ಸೂಪರ್ ಕಿಂಗ್ಸ್ ತಂಡದ ಇಸ್ಮಾಯಿಲ್ ಕಂಡಕರೆ, ಎಎಸ್ ಮುಸ್ತಫಾ ಸಿದ್ದಾಪುರ (ನಾಯಕ) (ಮಾಲೀಕರು), ಕೂರ್ಗ್ ಡ್ಯೂ ಡ್ರಾಪ್ಸ್ ರೆಸಾರ್ಟ್ ತಂಡದ ಜಯಪ್ರಕಾಶ್(ಮಾಲೀಕರು), ಶಿವರಾಜು(ನಾಯಕರು), ಮೀಡಿಯಾ ಚಾಲೆಂಜರ್ಸ್ ತಂಡದ ರವಿ ವಿರಾಜಪೇಟೆ(ಮಾಲೀಕರು), ಹೇಮಂತ್(ನಾಯಕ), ಮೀಡಿಯಾ ಹಿಟ್ಟರ್ಸ್ ತಂಡದ ಕೆ.ಎಂ.ವಿನೋದ್(ಮಾಲೀಕರು), ಪ್ರೆಸ್ ರಾಕರ್ಸ್ ತಂಡದ ವಿನೋದ್ ಮೂಡಗದ್ದೆ(ಮಾಲೀಕರು), ಪ್ರೇಮ್(ನಾಯಕ) ಪಾಲ್ಗೊಂಡು ಆಟಗಾರರು ಖರೀದಿ ಮಾಡಿದರು.