ಕಾಳಿಮಾಡ ಕುಟುಂಬದಿಂದ ಕೊಡವ ಕೌಟುಂಬಿಕ 'ಸಮ್ಮಂಧ ಆಡಕುವ' ಪೈಪೋಟಿ ಅಕ್ಟೋಬರ್ 11ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆಯೋಜನೆ
ಪೊನ್ನಂಪೇಟೆ, ಜು. 23: ಕೊಡವ ಸಂಸ್ಕೃತಿಯ ವಿಶಿಷ್ಟ ಮದುವೆ ಸಂಪ್ರದಾಯಗಳಲ್ಲಿ ಒಂದಾದ 'ಸಮ್ಮಂಧ ಆಡಕುವ' ಪದ್ಧತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಕೊಡವ ಕೌಟುಂಬಿಕ ತಂಡಗಳ ನಡುವೆ 'ಸಮ್ಮಂಧ ಆಡಕುವ' ಪೈಪೋಟಿಯನ್ನು ಆಯೋಜಿಸಲು ಕಾಳಿಮಾಡ ಕುಟುಂಬ ನಿರ್ಧರಿಸಿದೆ.
ಈ ಪೈಪೋಟಿಯು ಅಕ್ಟೋಬರ್ 11ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯಲಿದೆ. ಈ ಕುರಿತು ಪೊನ್ನಂಪೇಟೆಯಲ್ಲಿ ನಡೆದ ಕುಟುಂಬಸ್ಥರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಟುಂಬದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ, ಗೌರವ ಕಾರ್ಯದರ್ಶಿ ಕಾಳಿಮಾಡ ರಶೀಕ್ ಕಾವೇರಪ್ಪ ಹಾಗೂ ಪೈಪೋಟಿಯ ಸಂಚಾಲಕ ಕಾಳಿಮಾಡ ಪದ್ಮ ಬೆಳ್ಯಪ್ಪ ಕಾರ್ಯಕ್ರಮದ ವಿವರಗಳನ್ನು ನೀಡಿದರು.
ಕಾಳಿಮಾಡ ಮೋಟಯ್ಯ ಮಾತನಾಡಿ, ಕೊಡವ ಮದುವೆ ಸಂಪ್ರದಾಯದಲ್ಲಿ 'ಸಮ್ಮಂಧ ಆಡಕುವ' ಪದ್ಧತಿ ಅತ್ಯಂತ ಮಹತ್ವದ್ದಾಗಿದೆ. ವಧು ವಿವಾಹದ ಬಳಿಕ ಗಂಡನ ಮನೆಗೆ ಸೇರಿದ ಸಂದರ್ಭದಲ್ಲಿ, ಆಕೆಗೆ ಕುಟುಂಬದ ಆಸ್ತಿ-ಪಾಸ್ತಿ, ತೋಟ, ಗದ್ದೆ ಹಾಗೂ ಮನೆಯ ಜವಾಬ್ದಾರಿಗಳ ಕುರಿತು ಉಭಯ ಕುಟುಂಬಗಳ 'ಅರುವರು' (ಕುಟುಂಬದ ಸಂಪ್ರದಾಯ ಮತ್ತು ಆಚರಣೆಗಳನ್ನು ನಿರ್ವಹಿಸುವ ಹಿರಿಯರು) ಜಾನಪದ ಶೈಲಿಯಲ್ಲಿ ಮಾತುಕತೆ ನಡೆಸಿ ಒಪ್ಪಂದಕ್ಕೆ ಬರುತ್ತಾರೆ. ಈ ಒಪ್ಪಂದದ ಸಂಕೇತವಾಗಿ ಚಿನ್ನದ ರೂಪದಲ್ಲಿ ಕಲ್ಲಿನ ಅರಳುಗಳನ್ನು ನೀಡುವ ಸಂಪ್ರದಾಯವಿದ್ದು, ಇದು ಮುಹೂರ್ತದ ಬಳಿಕ ನೆರವೇರುತ್ತದೆ ಎಂದು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಮದುವೆಗಳು ಕಲ್ಯಾಣ ಮಂಟಪಗಳಲ್ಲಿ ನಡೆಯುತ್ತಿರುವ ಕಾರಣ ಈ ಪದ್ಧತಿಯನ್ನು ಅನುಸರಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಂಪ್ರದಾಯ ಕ್ರಮೇಣ ಮರೆಯಾಗುವ ಹಂತಕ್ಕೆ ತಲುಪಿದೆ. ಈ ಅಮೂಲ್ಯ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದಲೇ ಈ ಪೈಪೋಟಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಪೈಪೋಟಿಯು ಸಂಪ್ರದಾಯದ ಅನುಸಾರ ಪುರುಷರಿಗೆ ಮಾತ್ರ ಸೀಮಿತವಾಗಿದ್ದು, ಪ್ರತಿ ಕೊಡವ ಕುಟುಂಬದಿಂದ ಇಬ್ಬರು ಸದಸ್ಯರ ತಂಡ ಭಾಗವಹಿಸಬಹುದು. ಅಕ್ಟೋಬರ್ 11ರಂದು ಬೆಳಿಗ್ಗೆ 9 ಗಂಟೆಯಿಂದ ಸ್ಪರ್ಧೆಗಳು ಆರಂಭವಾಗಲಿದ್ದು, ವಿಜೇತರಾದ ಮೂರು ತಂಡಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ತಂಡಗಳಿಗೆ ಸ್ಮರಣಿಕೆ ನೀಡಲಾಗುವುದು.
ಸ್ಪರ್ಧಾಳುಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಮೊದಲು ನೋಂದಾಯಿಸಿಕೊಳ್ಳುವ 60 ಕುಟುಂಬ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ತಂಡಗಳು ಸೆಪ್ಟೆಂಬರ್ 15ರೊಳಗೆ ಪೊನ್ನಂಪೇಟೆ ಕೊಡವ ಸಮಾಜದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 98453 08228 ಅಥವಾ 98456 76854 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
