ನೀರಿನ ಕಂದಾಯ ಮಾಸಿಕ 100 ರೂ ವಸೂಲಿಗೆ ಕೂಡುಮಂಗಳೂರು ಗ್ರಾಪಂ ಸಾಮಾನ್ಯ ಸಭೆ ನಿರ್ಣಯ

ನೀರಿನ ಕಂದಾಯ ಮಾಸಿಕ 100 ರೂ ವಸೂಲಿಗೆ ಕೂಡುಮಂಗಳೂರು ಗ್ರಾಪಂ ಸಾಮಾನ್ಯ ಸಭೆ ನಿರ್ಣಯ

ಕುಶಾಲನಗರ : ಪ್ರತೀ ಮನೆಗಳಿಂದ ಮಾಸಿಕ ನೂರು ರೂಗಳ ನೀರಿನ ಕಂದಾಯ ವಸೂಲು ಮಾಡುವ ಬಗ್ಗೆ ಕೂಡುಮಂಗಳೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ್ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಪಂಚಾಯತಿ ಅಭಿವೃದ್ದಿ ಅಧಿಕಾರಿ ಸಂತೋಷ್ ಈ ಬಗ್ಗೆ ಸಭೆಯಲ್ಲಿ ವಿಷಯ ಮಂಡಿಸಿದಾಗ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಅಂತಿಮವಾಗಿ ನೂರು ರೂಗಳ ನೀರು ಕಂದಾಯ ಸಂಗ್ರಹಿಸುವ ತೀರ್ಮಾನ ಕೈಗೊಂಡಿತು.

 ಪಂಚಾಯತಿ ವ್ಯಾಪ್ತಿಯಲ್ಲಿ ಇನ್ನೂ ಅನೇಕ ಮಂದಿ ಕುಡಿವ ನೀರಿನ ಸಂಪರ್ಕವಿಲ್ಲದೇ ಪರಿತಪಿಸುತ್ತಿದ್ದಾರೆ ಈ ಬಗ್ಗೆ ಕುಡಿವ ನೀರು ಒದಗಿಸಬೇಕು ಎಂದು ಚಿಕ್ಕತ್ತೂರು ಸದಸ್ಯ ದಿನೇಶ್ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಸರ್ಕಾರಿ ಹಾಗೂ ಪೈಸಾರಿ ಜಾಗದಲ್ಲಿ ಅಕ್ರಮವಾಗಿ ಮನೆಕಟ್ಟುವುದನ್ನು ತಡೆಯುವ ಉದ್ದೇಶದಿಂದ ಅಕ್ರಮವಾಗಿ ವಾಸವಿರುವವರಿಗೆ ನೀರು ಹಾಗೂ ಲೈಟ್ ಸೌಕರ್ಯ ಒದಗಿಸದಂತೆ ಸುಪ್ರಿಂ ಕೋರ್ಟ್ ನಿರ್ದೇಶನ ನೀಡಿರುವುದಾಗಿ ಪಿಡಿಒ ಸಂತೋಷ್ ಸಭೆಯ ಗಮನಕ್ಕೆ ತಂದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಕ್ತ 3114 ಕುಡಿವ ನೀರಿನ ಸಂಪರ್ಕ ಗಳಿದ್ದು ಈಗ ಇರುವ ಮಾಸಿಕ ರೂ.50 ರೂನಂತೆ, ವಾರ್ಷಿಕ 10 ಲಕ್ಷ ರೂ. ನೀರಿನ ಕರ ವಸೂಲಿಯಾಗುತ್ತಿದೆ.

ಶುದ್ಧ ನೀರನ್ನು ಹರಿಸುವ ಮೂಲಕ ಸ್ವಚ್ಚತೆ ಕಾಪಾಡಬೇಕಿರುವ ಕಾರಣ ಇನ್ನು ಮುಂದೆ ಮಾಸಿಕ 100 ರೂ ನಿಗಧಿ ಮಾಡಲಾಗುತ್ತಿದೆ. ಹಾಗೆಯೇ ರಾಜ್ಯ ಹೆದ್ದಾರಿ ಬದಿಯಲ್ಲಿ ಕಟ್ಟಡ ಕಟ್ಟುವವರು ಹೆದ್ದಾರಿಯ ಮಧ್ಯ ಭಾಗದಿಂದ 18 ಮೀಟರ್ ಬಿಟ್ಟು ಕಟ್ಟಡ ಕಟ್ಟಬೇಕು ಎಂದರು. ಜಲಜೀವನ ಯೋಜನೆಯಡಿ ನೀರಿನ ಸಂಪರ್ಕ ಪಡೆದಿರುವ ಬಹುತೇಕ ಮಂದಿ ನೀರನ್ನು ಕುಡಿಯಲು ಬಳಸುತ್ತಿಲ್ಲ. ಅವರ ಮನೆಯಂಗಳ ಹಾಗೂ ತೋಟಗಳಿಗೆ ಹರಿಸುತ್ತಿದ್ದಾರೆ. ಈ ಬಗ್ಗೆ ಕ್ರಮವಾಗಬೇಕು ಎಂದು ಪಂಚಾಯಿತಿ ಹಿರಿಯ ಸದಸ್ಯೆ ಫಿಲೋಮಿನಾ ಸಭೆಯಲ್ಲಿ ಒತ್ತಾಯಿಸಿದರಲ್ಲದೇ, ಮಳೆಗಾಲದಲ್ಲಿ ಮನೆಗಳಿಗೆ ಅಶುದ್ಧವಾದ ಕಲುಷಿತ ನೀರನ್ನು ಹರಿಸಲಾಗುತ್ತಿದೆ. ಈ ಬಗ್ಗೆ ಗಮನವಹಿಸಿ ಎಂದರು. ಸುಂದರನಗರದ‌ ಕೋರೆರಸ್ತೆಯಲ್ಲಿರುವ ಬಹು ಅಂತಸ್ತಿನ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ.

ಅಕ್ರಮವಾಗಿ ನಿರ್ಮಿಸುತ್ತಿರುವ ಕಟ್ಟಡದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ. ಬಡವ ಏನಾದರೂ ಕಟ್ಟಿದರೆ ನೂರೆಂಟು ಕಾನೂನು ಹೇಳುವ ಅಧಿಕಾರಿಗಳು, ಈ ವಿಚಾರದಲ್ಲಿ ಮೌನರಾಗಿರುವುದು ಏಕೆ ಎಂದು ಪ್ರಶ್ನಿಸಿದ ಸುಂದರನಗರ ವಾರ್ಡ್ ಸದಸ್ಯ, ಆದಷ್ಟು ಬೇಗನೇ ಕ್ರಮ ಕೈಗೊಳ್ಳಬೇಕು ಎಂದರು. ಕೋರ್ಟ್ ನಲ್ಲಿ ಧಾವೆಯಿದ್ದು, ಕೋರ್ಟ್ ತೀರ್ಮಾನದ ನಂತರ ಮುಂದುವರೆಯಲಾಗುವುದು ಎಂದು ಪಿಡಿಓ ಸಂತೋಷ್ ಹೇಳಿದರು. ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ಸದಸ್ಯ ರಾದ ಕೆ.ಕೆ.ಬೋಗಪ್ಪ, ಪಾರ್ವತಮ್ಮ ರಾಮೇಗೌಡ, ಭಾಗ್ಯ, ಖತೀಜ, ಶಂಷುದ್ದೀನ್, ಗೌರಮ್ಮ, ಚೈತ್ರ, ಗಿರೀಶ, ಸುರೇಶ, ಮಣಿಕಂಠ ಇದ್ದರು.