ಕುಶಾಲನಗರ : ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅದ್ದೂರಿ ವಾರ್ಷಿಕೋತ್ಸವ
ಕುಶಾಲನಗರ: ದಿನಾಂಕ 24.04.2026 ರಂದು ಶುಕ್ರವಾರ, ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಕಾಲೇಜು ಆವರಣದಲ್ಲಿ ಭವ್ಯವಾಗಿ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ನೆರವೇರಿತು. ಕಾರ್ಯಕ್ರಮವನ್ನು ಶ್ರೀಮತಿ ಚಂದ್ರಕಲಾ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊಡಗಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಒಂದು ವರದಾನವಾಗಿದ್ದು, ಖಾಸಗಿ ಕಾಲೇಜುಗಳಿಗೆ ಸಮಾನವಾಗಿ ಅಥವಾ ಅದಕ್ಕಿಂತ ಉತ್ತಮವಾದ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ವಿಶೇಷವಾಗಿ, ಕಾಲೇಜಿನಲ್ಲಿ ಹೆಣ್ಣುಮಕ್ಕಳ ಹೆಚ್ಚಿನ ಭಾಗವಹಿಸುವಿಕೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಪ್ರಾಚಾರ್ಯರಾದ ಶಿವಪ್ಪ ಅವರು, ತಮ್ಮ ಭಾಷಣದಲ್ಲಿ ಕಾಲೇಜಿನ ಶೈಕ್ಷಣಿಕ ಸಾಧನೆಗಳನ್ನು ಕೊಂಡಾಡಿ, ಕಾಲೇಜು ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ ಎಂದರು. ಕಾಲೇಜಿನಲ್ಲಿ 18 ಮಂದಿ ಪಿಎಚ್.ಡಿ ಪದವೀಧರ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿರುವುದು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ದೊಡ್ಡ ನೆರವಾಗುತ್ತಿದೆ ಎಂದು ತಿಳಿಸಿದರು. ಎಲ್ಲಾ ವಿಭಾಗಗಳಲ್ಲಿಯೂ ಅಂತಿಮ ವರ್ಷದ ವಿದ್ಯಾರ್ಥಿಗಳು ಶೇಕಡಾ 100ರಷ್ಟು ಫಲಿತಾಂಶ ಸಾಧಿಸಿರುವುದು ಜಿಲ್ಲೆಯ ಹೆಮ್ಮೆಯಾಗಿದೆ. ವಿಶೇಷವಾಗಿ ಸಿವಿಲ್ ವಿಭಾಗವು ದ್ವಿತೀಯ ರ್ಯಾಂಕ್ ಪಡೆಯುವುದರ ಮೂಲಕ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರದ ಐಟಿ-ಬಿಟಿ ಇಲಾಖೆಯಿಂದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (AI & ML) ಇನೋವೇಶನ್ ಲ್ಯಾಬ್ ಸ್ಥಾಪನೆಗೆ ರೂ. 1.25 ಕೋಟಿ ಅನುದಾನ ಮಂಜೂರಾಗಿರುವುದು ಕಾಲೇಜಿನ ಅಭಿವೃದ್ಧಿಗೆ ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಲಾಯಿತು.
ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಸೀನಪ್ಪ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ಉದ್ಯೋಗಾನ್ವೇಷಕರಿಗಿಂತ ಉದ್ಯಮಿಗಳಾಗಬೇಕು ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ್ ನಾಗರಾಜ್ ಅವರು ವಾರ್ಷಿಕ ಕ್ರೀಡಾ ವರದಿಯನ್ನು ಮಂಡಿಸಿದರು. ಕಾಲೇಜಿನ ಪ್ರಾಚಾರ್ಯರಾದ ಕೆ.ಐ. ಪರಿಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿ, 2025-26ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿ, ಕಾಲೇಜಿನ ಸಾಧನೆಗಳು ಹಾಗೂ ಅಭಿವೃದ್ಧಿಯ ದಿಶೆಯನ್ನು ವಿವರಿಸಿದರು.
ಸಿವಿಲ್ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಹಾಗೂ ಸಭಿಕರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ರೂಪ (ಕಚೇರಿ ಅಧೀಕ್ಷಕರು) ಮತ್ತು ಡಾ. ಅನಿಲ್ ಕುಮಾರ್ (ಇಸಿ ವಿಭಾಗ) ಸಮನ್ವಯದಿಂದ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾದ ವರ್ಣಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು. ಕಾರ್ಯಕ್ರಮದ ಕೊನೆಯಲ್ಲಿ ಪ್ರೊಫೆಸರ್ ಶ್ರೀಮತಿ ಹೇಮಲತಾ (ಬೌದ್ಧ ಶಾಸ್ತ್ರ ವಿಭಾಗ) ಅವರು ವಂದನೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಾಗೂ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಭಾಗವಹಿಸಿದ್ದರು.